ಶ್ರೀನಿವಾಸಪುರ:ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಯಲ್ದೂರು ಪಂಚಾತಿಯಿ ಕೇಂದ್ರ ಸಹ ಹೌದು. ಯಲ್ದೂರು ಅನ್ನು ಧಾರ್ಮಿಕ, ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಬಹುದಾಗಿತ್ತು ಆದರೆ ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹತ್ವದ ಹೋಬಳಿ ಕೇಂದ್ರ ಇಂದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಶ್ರೀನಿವಾಸಪುರ ಪಟ್ಟಣದಿಂದ ಅರ್ದ ಗಂಟೆ ಪ್ರಯಾಣದಲ್ಲಿ ತಲುಪಬಹುದಾದ ಊರು ಯಲ್ದೂರು ರಾಷ್ಟ್ರೀಯ ಹೆದ್ದಾರಿ 69 ರಿಂದ 7-8 ಕೀ.ಮಿ ಅಂತರದಲ್ಲಿ ಇದ್ದು ಇಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ.ಕಾಲ ಬೆಳೆದಿದೆ ಅಧುನಿಕತೆ ಮೈಗೂಡಿಸಿಕೊಂಡಾಗಿದೆ ಹಸಿರು ಮಾಯವಾಗಿ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ ಬಡಾವಣೆ ಸಂಸೃತಿ ತಲೆ ಎತ್ತಿದೆ ಆದರೆ ಊರಿನ ನೋಟ ಹಳ್ಳಿಯಾಗೆ ಕಾಣುತ್ತಿದೆ.
ಪಟ್ಟಣ ಪಂಚಾಯಿತಿ ಕನಸಿನ ಮಾತು
ಭೌಗೋಳಿಕವಾಗಿ ದೊಡ್ಡದಾಗಿ ಇರುವ ಯಲ್ದೂರು ಪಕ್ಕದ ಶೀಗಹಳ್ಳಿ ಶಿತರೆಡ್ಡಿಹಳ್ಳಿ ಸೇರಿಸಿಕೊಂಡು ಪಟ್ಟಣ ಪಂಚಾಯಿತಿಯನ್ನಾಗಿ ಮೆಲ್ದರ್ಜೆಗೆ ಏರಿಸುತ್ತಾರೆ ಎನ್ನುವ ಮಾತು ಕಳೆದ 10-15 ವರ್ಷಗಳಿಂದ ಕೇಳಿಬರುತಿತ್ತು ಈಗ ಅದರ ನೆನಪು ಮಾಸಿ ಹೋದಂತಾಗಿ ಕನಸಿನ ಮಾತಾಗಿದೆ.
ಶ್ರೀನಿವಾಸಪುರ ಕೋಲಾರ ಅಥಾವ ಮುಳಬಾಗಿಲು ನಗರಗಳಿಂದ ಬರಲು ಉತ್ತಮ ರಸ್ತೆ ಸಂಪರ್ಕ ಇದೆ ಆದರೆ ಯಲ್ದೂರಿಗೆ ಬರುವಂತ ಸಾರ್ವಜನಿಕ ಬಸ್ಸಿಗೆ ನಿಲ್ಲಲು ನಿಲ್ದಾಣ ಇಲ್ಲ.ಬಸ್ಸಿಗೆ ಕಾಯುವ ಪ್ರಯಾಣಿಕನಿಗೆ ಕೂರಲು ತಂಗುದಾಣ ಇಲ್ಲ ಈ ಎಲ್ಲಾ ಇಲ್ಲಗಳ ನಡುವೆ ಇಲ್ಲಿನ ಜನರ ಬದುಕು smart ಆಗುತ್ತಿದೆ ಎನ್ನುವುದೆ ವಿಶೇಷ.
ಹೆಸರಾಂತ ಶಿಕ್ಷಣ ಸಂಸ್ಥೆ ಇದೆ
ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಪಡೆದ ನ್ಯಾಷನಲ್ ಹೈಸ್ಕೂಲ್ ಈ ಭಾಗದ ಹೆಮ್ಮೆಯ ಶಿಕ್ಷಣ ಸಂಸ್ಥೆ ಇಲ್ಲಿ ಶಿಕ್ಷಣ ಪಡೆಯಲು ಶ್ರೀನಿವಾಸಪುರ ಪಟ್ಟಣ ಸೋಮಯಾಜಲಹಳ್ಳಿ ಮುತ್ತಕಪಲ್ಲಿ ಸೇರಿದಂತೆ ಮುಳಬಾಗಿಲು ತಾಲೂಕಿನಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.ಹೈಸ್ಕೂಲ್ ನಂತರ ಮುಂದೇನು ಎಂಬ ಪ್ರಶ್ನೆಗೆ ಯಾರು ಉತ್ತರಿಸಲಾರರು ಕಾರಣ ಇಷ್ಟೆ ಇಲ್ಲಿ ವಿದ್ಯಾ ಸಂಸ್ಥೆಗಳನ್ನು ಬೆಳೆಸುವ ಆಲೋಚನೆ ಯಾರಿಗೂ ಬರಲಿಲ್ಲವಾ ಅನ್ನುವುದೆ ದೊಡ್ದ ಪ್ರಶ್ನೆ.ಹೈಸ್ಕೂಲ್ ನಂತರದ ವಿದ್ಯಾಭ್ಯಾಸಕ್ಕೆ ಶ್ರೀನಿವಾಸಪುರ ಕೋಲಾರ ಅಥಾವ ಮುಳಬಾಗಿಲು ನಗರಗಳನ್ನು ಆಶ್ರಯಿಸಬೇಕಿದೆ.


ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕುಗಳ ನಡುವಿನ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಯಲ್ದೂರಿಗೆ ಪ್ರತಿನಿತ್ಯ ಸಾವಿರಾರು ಜನರು ವ್ಯಾಪಾರ, ವ್ಯವಹಾರ, ಶಿಕ್ಷಣ ಹಾಗೂ ಇತರ ಕೆಲಸಗಳಿಗಾಗಿ ಆಗಮಿಸುತ್ತಾರೆ. ಇಷ್ಟೆ ಅಲ್ಲ ಆಂಧ್ರದ ರಾಮಸಮುದ್ರಂ ಮಂಡಲದ ಬಹುತೇಕ ಗ್ರಾಮಗಳ ಜನತೆ ಇಲ್ಲಿ ವಾಣಿಜ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ.
ಆಸ್ಪತ್ರೆ ಇದೆ ಅಂಬುಲೆನ್ಸ್ ಇಲ್ಲ
ಯಲ್ದೂರು ಹೋಬಳಿ ಕೇಂದ್ರದ ಸುತ್ತಮುತ್ತಲಿನ ಗ್ರಾಮಗಳ ಜನರು ಚಿಕಿತ್ಸೆಗೆ ಯಲ್ದೂರು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಅಪಘಾತಗಳು, ಹೃದಯಾಘಾತ, ಗರ್ಭಿಣಿಯರ ತುರ್ತು ಪ್ರಸವ ಸಂದರ್ಭಗಳಲ್ಲಿ ಸೇರಿದಂತೆ ತುರ್ತು ಆರೋಗ್ಯ ಸಂದರ್ಭಗಳಲ್ಲಿ 108 ಆಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದ ಕಾರಣ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.



ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ
ಇಲ್ಲಿ ಶ್ರೀ ಕೋದಂಡರಾಮಸ್ವಾಮಿ ಬೃಹತ್ ದೇವಾಲಯವಿದ್ದು,ಋಷಿಗಳ ಕಾಲಘಟ್ಟದಲ್ಲಿ ಪ್ರಸಿದ್ಧ ಮಹರ್ಷಿಗಳಾದ ಭೃಗು ಮಹರ್ಷಿಗಳ ಕಾಲದ್ದು ಎಂದು ಸ್ಥಳೀಯವಾಗಿ ನಂಬಲಾಗುತ್ತದೆ.ನಂತರ ಚೋಳರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಾಣ ತದ ನಂತರ (14–16ನೇ ಶತಮಾನ) ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಪಾರ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ದೇವಾಯಲ ಭವ್ಯವಾದ ಶಿಲ್ಪಕಲಾ ಸೌಂದರ್ಯ ಹೊಂದಿದೆ.ತಮಿಳು ಮಿಶ್ರಿತ ಕನ್ನಡ ಶಾಸನಗಳು ದೇವಾಲಯದ ಆವರಣದಲ್ಲಿ ಕಾಣ ಸಿಗುತ್ತದೆ. ಶ್ರೀ ಕೋದಂಡರಾಮಸ್ವಾಮಿ ದೇವರನ್ನು ಮನೆ ದೇವರು ಎಂದು ಭಕ್ತಿಯಿಂದ ಆರಾಧಿಸುವ ದೊಡ್ಡ ಬಳಗವೆ ಇದೆ ಕೋಲಾರ ಜಿಲ್ಲೆಯ ಅತಿ ದೊಡ್ಡ ವೈಷ್ಣವ ಪುಣ್ಯಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ದೇವಾಲವನ್ನು ರಾಜ್ಯದ ಪ್ರಮುಖ ಯತ್ರಾಸ್ಥಳವನ್ನಾಗಿಸುವಂತೆ ಸಾರ್ವಜನಿಕರ ಬಹುಕಾಲದ ಆಗ್ರಹವಾಗಿದೆ. ಅದರೆ ಇಚ್ಛಾಶಕ್ತಿಯ ಕೊರತೆಯಿಂದ ದೇವಾಲಯಕ್ಕೆ ಬರಲು ಶ್ರೀನಿವಾಸಪುರದಿಂದ ಬರಲು ಅಗತ್ಯ ಬಸ್ ಸೌಕರ್ಯ ಇಲ್ಲವಾಗಿದೆ. ಬರುವಂತ ಯಾತ್ರಿಕರಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ವಿಶ್ರಾಂತಿ ಕೇಂದ್ರ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅಪರೂಪದ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಶೇಷ ಆದ್ಯತೆ ನೀಡಬೇಕಿದೆ. ಯಲ್ದೂರನ್ನು ರಾಜ್ಯದ ಪ್ರಮುಖ ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಭಕ್ತರ ಕೋರಿಕೆ.



