- ಬೆಂಗಳೂರು ಯೂನಿವರ್ಸಿಟಿ ಎಡವಟ್ಟು
- ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೇ ನಾಪತ್ತೆ
- ಸಿಂಡಿಕೇಟ್ ಸಭೆಯಲ್ಲಿ ಬೆಳಕಿಗೆ ಬಂದ ಪ್ರಕರಣ
ನ್ಯೂಜ್ ಡೆಸ್ಕ್:ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮೌಲ್ಯಮಾಪನ ವಿಭಾಗದಲ್ಲಿನ ಎಡವಟ್ಟಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 46 ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಿಗೂಢವಾಗಿ ನಾಪತ್ತೆಯಾಗಿವೆ. ಈ ಯಡವಟ್ಟಿನಿಂದಾಗಿ ಕಳೆದ ಒಂದೂವರೆ ವರ್ಷದಿಂದ (ಏಪ್ರಿಲ್ 2025 ರಿಂದ) ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಜನವರಿ 2025 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ವಿದ್ಯಾರ್ಥಿಗಳು ಆಧುನಿಕ ಬ್ಯಾಂಕಿಂಗ್ ಎಂಬ ವಿಷಯದ ಪರೀಕ್ಷೆಯನ್ನು ಬರೆದಿದ್ದು, ಉಳಿದೆಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಮಾರ್ಚ್ನಲ್ಲಿ ಪ್ರಕಟವಾಗಿತ್ತು. ಆದರೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಈ 46 ಬಿಕಾಂ ವಿದ್ಯಾರ್ಥಿಗಳು, ಪ್ರಸ್ತುತ 4ನೇ ಸೆಮಿಸ್ಟರ್ ತಲುಪಿದ್ದರೂ ಸಹ, ದ್ವಿತೀಯ ಸೆಮಿಸ್ಟರ್ನ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದ ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾಲಯಕ್ಕೆ ಸರಣಿ ಪತ್ರ ವ್ಯವಹಾರ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಪರಿಶೀಲಿಸಿದಾಗ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ.
ರಾಮನಗರ ಕಾಲೇಜಿನ ಪ್ರಾಂಶುಪಾಲರು ಎಲ್ಲಾ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದು ಅವು ವಿವಿಯ ಮೌಲ್ಯಮಾಪನ ವಿಭಾಗಕ್ಕೆ ತಲುಪಿದ್ದಾವೆ. ಅವು ನಾಪತ್ತೆಯಾಗಿರುವುದು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ತೀವ್ರ ಬೇಜವಾಬ್ದಾರಿತನ ಮತ್ತು ಮ್ಯಾನೇಜ್ಮೆಂಟ್ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಿಂಡಿಕೇಟ್ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಇತರ ವಿಷಯಗಳ ಅಂಕಗಳನ್ನು ಆಧರಿಸಿ ಇವರಿಗೆ ಫಲಿತಾಂಶ ಪ್ರಕಟಿಸುವುದು ಸರಿಯಾದ ಕಾನೂನುಬದ್ಧ ಪರಿಹಾರವಲ್ಲ ಎಂದು ಸಿಂಡಿಕೇಟ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ವಿವಿಯ ಇಂತಹ ಯಡವಟ್ಟುಗಳಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಭವಿಷ್ಯಕ್ಕೆ ಕಂಟಕ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಯಾವುದೇ ತೊಂದರೆಯಾಗದಂತೆ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.



