ಶ್ರೀನಿವಾಸಪುರ: ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಅವೈಜ್ಞಾನಿಕ ವೃತ್ತಗಳು ಅಪಘಾತಗಳಿಗೆ ಆಹ್ವಾನ ನೀಡುವಂತಿವೆ. ಈ ಕುರಿತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ದೂರದೃಷ್ಟಿ ಮುಂದಾಲೋಚನೆ ಪುರಸಭೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕಂಡುಬರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಂಚಾರ ಸುರಕ್ಷತೆಗೆ ಅಗತ್ಯವಾದ ಸೂಚನಾ ಫಲಕಗಳು, ವೈಜ್ಞಾನಿಕ ರಸ್ತೆ, ವೇಗ ನಿಯಂತ್ರಣ ವ್ಯವಸ್ಥೆಗಳು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರತಿನಿತ್ಯ ಜೀವಭಯದಲ್ಲೇ ಸಂಚರಿಸುವಂತಾಗಿದೆ.
ಇಲ್ಲಿನ ರಸ್ತೆಗಳು ಹಾಗೂ ಇಕ್ಕಾಟ್ಟಾದ ವೃತ್ತಗಳಲ್ಲಿ ಅಗತ್ಯ ಮಾರ್ಗಸೂಚಿ ಫಲಕಗಳ ಅಗತ್ಯ ಇದೆ. ಅಡ್ಡ ರಸ್ತೆಗಳಿಂದ ಮುಖ್ಯ ರಸ್ತೆಗೆ ಸೇರುವ ವಾಹನ ಸವಾರರು ಸೂಕ್ತ ಸೂಚನೆಗಳಿಲ್ಲ ಇದರಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಡ್ಡ ರಸ್ತೆಗಳು ಕೂಡುವ ವೃತ್ತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ತಿರುವು ಸೂಚಿಸುವ ಬಿಳಿ ಬಣ್ಣದ ಜಿಗ್-ಜಾಗ್ ರಸ್ತೆ ಗುರುತುಗಳನ್ನು (Zig-Zag Markings), ವೇಗಮಿತಿ ಸೂಚನೆಗಳು ಹಾಗೂ ರಸ್ತೆ ತಡೆ ಉಬ್ಬುಗಳನ್ನು (Speed Breakers) ನಿರ್ಮಿಸುವುದು ಅಗತ್ಯವಾಗಿದೆ. ಇದಲ್ಲದೆ, ಕೆಲವು ವೃತ್ತಗಳಲ್ಲಿ ಬಿಳಿ ಬಣ್ಣದಿಂದ ಗುರುತಿಸಲಾದ ರಸ್ತೆ ಉಬ್ಬುಗಳ ಬಣ್ಣ ಸಂಪೂರ್ಣವಾಗಿ ಮಾಸಿರುವುದರಿಂದ ಅವು ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹೊಸದಾಗಿ ಬಣ್ಣ ಬಳಿದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.ರಸ್ತೆ ವಿಭಜಕಕ್ಕೆ ರೇಡಿಯಂ sticker ಅಂಟಿಸಿಲ್ಲ. ತಿರವು ಸೂಚಿಸುವ ಫಲಕಗಳಿಲ್ಲ, ಅನುಸರಿಸರಿಸಭುದಾದ ಯಾವುದೆ ಕ್ರಮಗಳನ್ನು ಸ್ಥಳೀಯ ಆಡಳಿತ ಅನುಸರಿಸದೆ ವಿಫಲವಾಗಿದೆ.
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ
ಅವೈಜ್ಞಾನಿಕ ರಸ್ತೆ ಕಾಮಗಾರಿ, ಸೂಚನಾ ಫಲಕಗಳ ಕೊರತೆ ಇದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ವಾಡುವಂತಿದೆ.ಪ್ರಮುಖ ವೃತ್ತಗಳು ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಅಲ್ಲದೆ, ಅಗತ್ಯವಿರುವ ಮಾರ್ಗಸೂಚಿ ಹಾಗೂ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸದ ಕಾರಣ ಉಪ ರಸ್ತೆಗಳಿಂದ ಮುಖ್ಯ ರಸ್ತೆಗೆ ವಾಹನಗಳು ಪ್ರವೇಶಿಸುವ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿಯಾಗುವ ಅಪಾಯ ಹೆಚ್ಚಾಗಿದೆ. ವೃತ್ತಗಳ ಮೂಲಕ ಸಂಚರಿಸುವಾಗ ಯಾವ ದಿಕ್ಕಿನಿಂದ ವಾಹನ ಬಂದು ಡಿಕ್ಕಿಯಾಗುತ್ತದೋ ಎಂಬ ಆತಂಕದಲ್ಲೇ ವಾಹನ ಸವಾರರು ಸಂಚರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಮಟ್ಟದ ಸೂಚನಾ ಫಲಕಗಳನ್ನೂ ಅಳವಡಿಸದೇ ಇರುವುದರಿಂದ ಅಪಘಾತದ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ವೃತ್ತಗಳು ವಾಹನ ಸವಾರರ ಜೀವಕ್ಕೆ ಪ್ರತಿನಿತ್ಯ ಅಪಾಯವನ್ನುಂಟು ಮಾಡುತ್ತಿವೆ. ರಾಜಾಜಿ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವ ವೇಳೆ ಯಾವುದೇ ವೈಜ್ಞಾನಿಕ ಯೋಜನೆ ಅನುಸರಿಸದೇ, ಚೌಕಾಸಿ ವ್ಯಾಪಾರದಂತೆ ಕಾಮಗಾರಿ ನಡೆಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಳೆ ಬಸ್ ನಿಲ್ದಾಣದಿಂದ ಬೈರಪಲ್ಲಿ ಕಡೆಗೆ ಸಾಗುವ ರಸ್ತೆಯಲ್ಲಿ ಬೆಸ್ಕಾಂ ಕಚೇರಿ ಮುಂಭಾಗದಿಂದ ಬಾಲಕರ ಸರ್ಕಾರಿ ಕಾಲೇಜುವರೆಗೆ ಇರುವ ರಸ್ತೆ ವಿಭಜಕ (ಮೀಡಿಯನ್) ತೀವ್ರವಾಗಿ ಹಾಳಾಗಿದೆ. ಸಿಮೆಂಟ್ ಕಿತ್ತುಹೋಗಿ ಒಳಗಿನ ಜಲ್ಲಿ ಹೊರಗೆ ಕಾಣಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಬಿದ್ದು ಗಂಭೀರವಾಗಿ ಗಾಯಗೊಳ್ಳುವ ಅಪಾವಿದೆ.
“ಬೇಲಿಯೇ ಎದ್ದು ಹೊಲ ಮೇಯಿತು” ಪುರಸಭೆ ನೀತಿ
“ಬೇಲಿಯೇ ಎದ್ದು ಹೊಲ ಮೇಯಿತು” ಎಂಬ ಗಾದೆಯಂತೆ ಪುರಸಭೆಯೇ ಪಾದಚಾರಿ ಮಾರ್ಗವನ್ನು (ಫುಟ್ಪಾತ್) ಅತಿಕ್ರಮಿಸಿ ಫುಡ್ ಕೋರ್ಟ್ ನಿರ್ಮಾಣ ಮಾಡಿದೆ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದು ಇತರೆ ಪುಟ್ಫಾತ್ ಅತಿಕ್ರಮಣಕಾರರಿಗೆ ಅವಕಾಶ ಸಿಕ್ಕಂತಾಗಿದೆ ಎಂದು ನಾಗರಿಕರು ದೂರುತ್ತಾರೆ. ಪರಿಣಾಮವಾಗಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ದುಸ್ಥಿತಿ ಎದುರಾಗಿದೆ. ನಗರದ ರಸ್ತೆ, ವೃತ್ತ, ರಸ್ತೆ ವಿಭಜಕ, ಫುಟ್ಪಾತ್ ಹಾಗೂ ಸಂಚಾರ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಪರಿಶೀಲಿಸಿ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾನದಂಡಗಳಂತೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟನೆ
ಫುಟ್ಪಾತ್ ಅತಿಕ್ರಮಿಣ ಎಂದು ಹೇಳಲು ಬರುವುದಿಲ್ಲ.ಜಿಲ್ಲಾಡಳಿತ ಅನುಮತಿ ಪಡೆದು ಸಣ್ಣ-ಪುಟ್ಟ ತಿಂಡಿ ಅಂಗಡಿಗಳು ಮತ್ತು ಹೋಟೆಲ್ ಗಳು ಒಂದಡೆ ನಡೆಸಲು ಫುಡ್ ಕೋರ್ಟ್ ನಿರ್ಮಾಣ ಮಾಡಿದ್ದು ಈ ಬಗ್ಗೆ ಸಾರ್ವಜನಿಕರ ವಿರೋಧ ಇದೆ ಎನ್ನುವುದಾದರೆ ಈ ಬಗ್ಗೆ ಪರಶೀಲನೆ ನಡೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.



