ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ರಾಜ್ಯದಲ್ಲಿ ಮತ್ತೊಂದು ಹೊಸ ರೈಲ್ವೆ ಜಂಕ್ಷನ್ ಸಿಗಲಿದೆ. ಇದು ಕುಪ್ಪಂ ರೈಲ್ವೆ ಜಂಕ್ಷನ್ ಆಗಲಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ. ಕರ್ನಾಟಕದ ಮಾರಿಕುಪ್ಪಂ ನಿಂದ ಚಿತ್ತೂರು ಜಿಲ್ಲೆಯ ಕುಪ್ಪಂ ವರೆಗೆ ಹೊಸ ರೈಲ್ವೆ ಹಳಿ ಹಾಕಲಾಗುತ್ತಿರುವುದಾಗಿ ತಿಳಿದುಬಂದಿದೆ. ರೈಲ್ವೆ ಅಧಿಕಾರಿಗಳು ಈ ಕಾಮಗಾರಿಗಳ ವೇಗವನ್ನು ಹೆಚ್ಚಿಸಿದ್ದು ಪ್ರಸ್ತುತ ಈ ಮಾರ್ಗದಲ್ಲಿ ಕೆಲಸ ನಡೆಯುತ್ತಿದೆ. ಕರ್ನಾಟಕದ ಗಡಿಯಿಂದ ಆಂಧ್ರಪ್ರದೇಶ ಗಡಿಯವರೆಗಿನ ಕೆಲಸ ನಡೆಯುತ್ತಿದ್ದು ಶೇ. 90 ರಷ್ಟು ಈಗಾಗಲೇ ಪೂರ್ಣಗೊಂಡಿದೆ. ಅಲ್ಲದೆ, ಬಿಸನತ್ತಂ ನಿಂದ ಕುಪ್ಪಂ ವರೆಗಿನ 18 ಕಿಲೋಮೀಟರ್ ಪ್ರದೇಶದ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ 269 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ ಅಂದಾಜು ರೂ. 363 ಕೋಟಿ ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. ಮಾರ್ಚ್ 2028 ರೊಳಗೆ ಕೆಲಸವನ್ನು ಪೂರ್ಣಗೊಳಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಕುಪ್ಪಂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಊರು. ಇದು ಎರಡೂ ರಾಜ್ಯಗಳಿಗೆ 30 ಕಿಲೋಮೀಟರ್ ದೂರದಲ್ಲಿದ್ದು ಕುಪ್ಪಂ ರೈಲು ನಿಲ್ದಾಣವು ಚೆನ್ನೈ-ಬೆಂಗಳೂರು ರೈಲು ಮಾರ್ಗದಲ್ಲಿರುವುದರಿಂದ, ಪ್ರತಿದಿನ ಡಜನ್ಗಟ್ಟಲೆ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈಗಾಗಲೆ ಅಮೃತ ಭಾರತ ಯೋಜನೆ ಅಡಿಯಲ್ಲಿ ಕುಪ್ಪಂ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸ್ಲಾಗುತ್ತಿದ್ದೆ.
ಕುಪ್ಪಂ ಬಿಸನತ್ತ ಮೂಲಕ ಮಾರಿಕುಪ್ಪಂ ವರೆಗೆ ಈ ಮಾರ್ಗವನ್ನು ನಿರ್ಮಿಸಲಾಗುತ್ತಿದ್ದು ಈ ಯೋಜನೆಯ ಭಾಗವಾಗಿ ಕರ್ನಾಟಕ ಸರ್ಕಾರ ಈಗಾಗಲೇ ಭೂಸ್ವಾಧೀನವನ್ನು ಪೂರ್ಣಗೊಳಿಸಿದೆ. ಮಾರಿಕುಪ್ಪಂ ಪ್ರದೇಶದಿಂದ ಕರ್ನಾಟಕದ ಗಡಿಯವರೆಗೆ ಕೆಲಸವೂ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡು ಕುಪ್ಪಂ-ಮಾರಿಕುಪ್ಪಂ ರೈಲ್ವೆ ಹಳಿ ಲಭ್ಯವಾದರೆ, ಈ ಮಾರ್ಗದಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಇನ್ನಷ್ಟು ಹೆಚ್ಚಾಗುತ್ತದೆ. ಕುಪ್ಪಂ ರೈಲು ನಿಲ್ದಾಣವು ಜಂಕ್ಷನ್ ಆಗಿ ರೂಪಾಂತರಗೊಳ್ಳುತ್ತದೆ.
ಕರ್ನಾಟಕದ ಗಡಿಯಂಚಿನ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ನೂತನ ರೈಲು ಮಾರ್ಗ ಆಗಲಿದ್ದು ಚಿತ್ತೂರಿನಿಂದ ಕುಪ್ಪಂಗೆ ಹೊಸ ರೈಲು ಮಾರ್ಗ ನಿರ್ಮಾಣವಾದರೆ ಇದು ಪಲಮನೇರು ಮತ್ತು ವಿ.ಕೋಟ ಮೂಲಕ ಸುಮಾರು 135 ಕಿ.ಮೀ. ದೂರವನ್ನು ಒಳಗೊಂಡಿರುತ್ತದೆ. ಅದೇ ರೀತಿ, ಕರ್ನಾಟಕದ ಮಾರಿಕುಪ್ಪಂನಿಂದ ಕುಪ್ಪಂವರೆಗಿನ (23.7 ಕಿ.ಮೀ) ಮತ್ತೊಂದು ಹೊಸ ರೈಲು ಮಾರ್ಗದ ಕೆಲಸವೂ ವೇಗವಾಗಿ ಪ್ರಗತಿಯಲ್ಲಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗಡಿ ಹಂಚಿ ಕೊಂಡಿರುವ ಆಂಧ್ರದ ವಿ. ಕೋಟ ಮಂಡಲ ವ್ಯಾಪ್ತಿಯ ರಾಮಕುಪ್ಪಂಗೆ ರೈಲ್ವೆ ನಿಲ್ದಾಣ ಬಂದರೆ ಮುಳಬಾಗಿಲು ತಾಯಲೂರು ಭಾಗದ ಜನರಿಗೆ ಅನಕೂಲ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಹೊಸ ರೈಲು ಸಂಪರ್ಕದಿಂದ ಚಿತ್ತೂರು ಮತ್ತು ಕುಪ್ಪಂ ಪ್ರದೇಶಗಳ ನಡುವಿನ ಪ್ರಯಾಣವನ್ನು ಸುಲಭಗೊಳಿಸುವುದು ಅಷ್ಟೆ ಅಲ್ಲ ಸ್ಥಳೀಯ ವಾಣೀಜ್ಯ ವ್ಯವಹಾರ, ಕೃಷಿ, ಉದ್ಯೋಗಕ್ಕೆ ಪ್ರಯೋಜನ ಆಗಲಿದ್ದು ಜೊತೆಗೆ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಏರುತ್ತದೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಾವು ಪ್ರತಿನಿಧಿಸುತ್ತಿರುವ ಕುಪ್ಪಂ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಕ್ಷೇತ್ರದಲ್ಲಿ ರಸ್ತೆ, ರೈಲ್ವೆ, ಮೂಲಸೌಕರ್ಯ, ಅಭಿವೃದ್ಧಿ ಶಿಕ್ಷಣ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಕುಪ್ಪಂ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.ಇದರ ಜೊತೆಗೆ ಕುಪ್ಪಂನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿಗೂ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಚಿತ್ತೂರು ಜಿಲ್ಲಾ ಆಡಳಿತದ ಅಧಿಕೃತ ದಾಖಲೆಗಳ ಪ್ರಕಾರ ರಾಮಕುಪ್ಪಂ ಮಂಡಲದ ಬೋಂಡಲಗುಂಟ ಹಾಗೂ ಕದಸಿನಕುಪ್ಪಂ ಗ್ರಾಮಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆಗಳು 2026ರ ಮಾರ್ಚ್ನಲ್ಲಿ ಪ್ರಕಟವಾಗಿವೆ. ಚಿತ್ತೂರು-ಕುಪ್ಪಂ ನಡುವೆ ಹೊಸ ರೈಲು ಮಾರ್ಗ ಆರಂಭವಾದರೆ ಕುಪ್ಪಂ ರೈಲು ನಿಲ್ದಾಣ ಜಂಕ್ಷನ್ ರೈಲು ನಿಲ್ದಾಣ ಆಗುವ ಸಾಧ್ಯತೆ ಇದ್ದು, ಜಂಕ್ಷನ್ ರೈಲು ನಿಲ್ದಾಣ ಆರಂಭ ಗೊಂಡರೆ ರೈಲುಗಳ ಒಡಾಟ ಮತ್ತಷ್ಟು ಹೆಚ್ಚಾಗಲಿದೆ.



