ಶ್ರೀನಿವಾಸಪುರ: ಹೆದ್ದಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ತಾಲೂಕಿನ ತಾಡಿಗೋಳು (ಪೈ ಕ್ರಾಸ್) ಮೂಲಕ ಹಾದು ಹೋಗಿರುವ ನೂತನ ರಾಜ್ಯ ಹೆದ್ದಾರಿ ನಿರ್ಮಾಣವಾಗಿ ತಿಂಗಳುಗಳೇ ಕಳೆದರೂ, ಪ್ರಮುಖ ಜಂಕ್ಷನ್ನಲ್ಲಿ ಅಗತ್ಯ ಮಾರ್ಗಸೂಚಿ ಫಲಕಗಳು ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಚಿಂತಾಮಣಿ ತಾಲೂಕಿನ ಮಾಡಿಕೇರಿ ಕ್ರಾಸ್ನಿಂದ ಆಂಧ್ರಪ್ರದೇಶ ಗಡಿಯವರೆಗೆ ನಿರ್ಮಾಣವಾಗಿರುವ ರಾಜ್ಯ ಹೆದ್ದಾರಿ SH-82 (State Highway-82) ತಾಡಿಗೋಳು (ಪೈ ಕ್ರಾಸ್), ಜೋಡಿಕೊತ್ತಪಲ್ಲಿ, ಲಕ್ಷ್ಮೀಪುರ ಕ್ರಾಸ್ ಹಾಗೂ ರಾಯಲ್ಪಾಡು ಸೇರಿದಂತೆ ಪ್ರಮುಖ ಸ್ಥಳಗಳ ಮೂಲಕ ಸಾಗುತ್ತದೆ. ಈ ರಸ್ತೆ ಕಾಮಗಾರಿಯನ್ನು Karnataka State Highways Improvement Project–III (KSHIP-III) ಅಡಿಯಲ್ಲಿ ಮಾಡಲಾಗಿದೆ.
ತಾಡಿಗೋಳು (ಪೈ ಕ್ರಾಸ್) ಪ್ರಮುಖ ಜಂಕ್ಷನ್
ತಾಡಿಗೋಳು (ಪೈ ಕ್ರಾಸ್) ಪ್ರಮುಖ ಜಂಕ್ಷನ್ ಆಗಿದ್ದು, ಇಲ್ಲಿಂದ ಶ್ರೀನಿವಾಸಪುರ ಪಟ್ಟಣದ ಸಂಪರ್ಕ ರಸ್ತೆಯೂ ಸೇರುತ್ತದೆ. ಹೀಗಾಗಿ ಈ ಜಂಕ್ಷನ್ಗೆ ಹೆಚ್ಚಿನ ಸಂಚಾರ ಮಹತ್ವ ಇದೆ. ಜಂಕ್ಷನ್ ಉತ್ತರ ಪಿನಾಕಿನಿ ನದಿ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು ದೊಡ್ಡ ಸೇತುವೆ ಇರುವ ಪ್ರದೇಶ ಎನ್ನುತ್ತಾರೆ. ಈ ಜಂಕ್ಷನ್ ಮೂಲಕ ಹಾದು ಹೋಗುವ
ವಿಶೇಷವಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಸವಾರರಿಗೆ ಸೂಕ್ತ ಸೂಚನಾ ಫಲಕಗಳಿಲ್ಲದಿರುವುದು ಗೊಂದಲಕ್ಕೆ ಕಾರಣವಾಗುತ್ತಿದೆ. ಜಂಕ್ಷನ್ ಎಂದು ಗುರುತಿಸುವ ಕನಿಷ್ಟ ಕುರುವುಗಳು ಇಲ್ಲಿ ಇಲ್ಲ ಯಾವ ಮಾರ್ಗದಲ್ಲಿ ಶ್ರೀನಿವಾಸಪುರ, ಚಿಂತಾಮಣಿ, ರಾಯಲ್ಪಾಡು ಅಥವಾ ಆಂಧ್ರಪ್ರದೇಶದ ಕಡೆಗೆ ತೆರಳಬೇಕು ಎಂಬುದು ನಿಜಕ್ಕೂ ಸಂಚಾರಕ್ಕೆ ಅತ್ಯಂತ ಅಪಾಯಕಾರಿ ಮತ್ತು ಗೊಂದಲದ ಜಾಗವಾಗಿದೆ ಎನ್ನುತ್ತಾರೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ತುಂಬಾ ಮುಂದುವರಿದಿದೆ ಆದರೆ ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣಾ ಯೋಜನೆ–III ಅಧಿಕಾರಿಗಳು ತಾಡಿಗೋಳು ಜಂಕ್ಷನ್ ಪೂರ್ಣಗೊಳಿಸುವಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.
‘ಕಾರ್ಗತ್ತಲ’ ಜಂಕ್ಷನ್
ಹಗಲಿನ ವೇಳೆಯಲ್ಲಿಯೇ ಮಾರ್ಗಸೂಚಿ ಫಲಕಗಳ ಕೊರತೆ ಸಮಸ್ಯೆಯಾದರೆ ರಾತ್ರಿ ವೇಳೆ ಸಮರ್ಪಕ ದೀಪಗಳ ವ್ಯವಸ್ಥೆಯೂ ಇಲ್ಲದಿರುವುದು ವಾಹನ ಸವಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಳಕಿನ ಕೊರತೆ ಹಾಗೂ ಮಾರ್ಗಸೂಚಿ ಫಲಕಗಳ ಅಭಾವದಿಂದ ಜಂಕ್ಷನ್ನಲ್ಲಿ ರಸ್ತೆಯ ದಿಕ್ಕು ಗುರುತಿಸಲು ತೊಂದರೆಯಾಗುತ್ತಿದ್ದು, ಸಂಚಾರ ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಾಡಿಗೋಳು (ಪೈ ಕ್ರಾಸ್)ನಲ್ಲಿ ಅಗತ್ಯವಿರುವ ಮಾರ್ಗಸೂಚಿ ಫಲಕಗಳು, ದಿಕ್ಕು ಸೂಚನಾ ಫಲಕಗಳು, ರಸ್ತೆ ಸುರಕ್ಷತಾ ಸೂಚನೆಗಳು ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳ ಪ್ರಕಾರ, ಪ್ರಮುಖ ಜಂಕ್ಷನ್ಗಳು, ತಿರುವುಗಳು ಜಂಕ್ಷನ್ ಸೂಚಿಸುವ ರಸ್ತೆಗೆ ಬಿಳಿ ಬಣ್ಣದ ಮಾರ್ಕಿಂಗ್ ಇಲ್ಲ ಹಾಗೂ ರಸ್ತೆ ವಿಭಜನೆಗಳ ಬಳಿ ವಾಹನ ಸವಾರರಿಗೆ ಮುಂಚಿತವಾಗಿ ದಿಕ್ಕು ತಿಳಿಸುವ ಮಾರ್ಗಸೂಚಿ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ರಸ್ತೆ ಸುರಕ್ಷತೆಯ ಪ್ರಮುಖ ಅಂಶವಾಗಿದೆ. ಆದರೆ ತಾಡಿಗೋಳು (ಪೈ ಕ್ರಾಸ್)ನಂತಹ ಪ್ರಮುಖ ಜಂಕ್ಷನ್ನಲ್ಲಿ ಅಗತ್ಯ ದಿಕ್ಕು ಸೂಚನಾ ಫಲಕಗಳ ಕೊರತೆ ಇರುವುದರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.



