ನ್ಯೂಜ್ ಡೆಸ್ಕ್:ಕೋಲಾರ ಜಿಲ್ಲೆ ಗಡಿಯಾಚಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಕುಪ್ಪಂ ಮತ್ತು ಪಲಮನೇರು ಭಾಗಗಳಲ್ಲಿ ಬೆಳೆದಿದ್ದ ಉತ್ತಮ ಮಾವಿನ ಹಣ್ಣುಗಳನ್ನು ಸಂಗ್ರಹಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕಳೆದ ವಾರ ಎರಡನೆ ಬಾರಿಗೆ ತೋತಾಪುರಿ ಮತ್ತು ಬಂಗಿನಪಲ್ಲಿ(ಬೇನುಷ) ಮಾವಿನ ತಳಿಗಳನ್ನು ಸಿಂಗಾಪುರಕ್ಕೆ ರಫ್ತು ಮಾಡಲಾಗಿದ್ದು.ಉತ್ತಮ ಮಾವಿನ ಹಣ್ಣುಗಳನ್ನು ಸಂಗ್ರಹಿಸಿ ಚಿಂತಾಮಣಿ ಬಳಿಯ ಮಾಡಕೇರಿಯಲ್ಲಿನ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMC) ನಿರ್ವಹಣೆ ಹಾಗು ಅಪೇಡಾ ಸಹಯೋಗದ ಮಾವಿನ ನಂತರದ ಕೊಯ್ಲು ನಿರ್ವಹಣೆ ಕೇಂದ್ರ(ಪ್ಯಾಕ್ ಹೌಸ್)ನಲ್ಲಿ ಇಡಲಾಗಿತ್ತು. ನಂತರ ಅವುಗಳನ್ನು ಕಂಟೇನರ್ ಹಡಗಿನಲ್ಲಿ ಸಿಂಗಾಪುರಕ್ಕೆ ಕಳುಹಿಸಲಾಗಿದ್ದು 12ದಿನಗಳ ನಂತರ ಹಡಗು ಸಿಂಗಾಪುರ ತಲುಪಲಿದೆ ಎನ್ನುತ್ತಾರೆ.
ವಿದೇಶಗಳಲ್ಲಿ ದಕ್ಷಿಣ ಭಾರತದ ಮಾವಿಗೆ ಬೆಡಿಕೆ ಹೆಚ್ಚು
ಪ್ರಪಂಚದಾದ್ಯಂತ ವಿಶೇಷವಾಗಿ ದಕ್ಷಿಣ ಭಾರತದ ಮಾವಿನ ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ ಅದರಲ್ಲೂ
ವಿದೇಶಗಳಲ್ಲಿ ಆಂಧ್ರದ ಬೇನುಷ ಪ್ರಭೇದವನ್ನು ಹೆಚ್ಚು ಬಯಸುತ್ತಾರೆ. ಈ ಹಿನ್ನಲೆಯಲ್ಲಿ ಆಂಧ್ರದ ಚಿತ್ತೂರು ಜಿಲ್ಲೆಯಿಂದ ಮಾವಿನ ಹಣ್ಣುಗಳನ್ನು ಸಿಂಗಾಪುರಕ್ಕೆ ರಫ್ತು ಮಾಡಲು ಪ್ರಾರಂಭಿಸಲಾಗಿದ್ದು ಅದೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಕ್ಷೇತ್ರದಿಂದಲೇ ಆರಂಭವಾಗಿದೆ ಎಂಬುದು ಗಮನಾರ್ಹ ಎಂಬ ಮಾತು ಕೇಳಿಬರುತ್ತಿದೆ. ತೋತಾಪುರಿ ಮತ್ತು ಬಂಗಿನಪಲ್ಲಿ ಮಾವಿನಹಣ್ಣುಗಳು ಚಿತ್ತೂರು ಜಿಲ್ಲೆಯಲ್ಲಿ ಹೆಚ್ಚು ಬೆಳೆಯಲಾಗುತ್ತೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು CISH ಬೆಂಬಲದೊಂದಿಗೆ, ಬಂಗಿನಪಲ್ಲಿ ಮತ್ತು ತೋತಾಪುರಿ ಮಾವಿನಹಣ್ಣುಗಳನ್ನು ಹಡಗಿನ ಮೂಲಕ ಸಿಂಗಾಪುರಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಮೊದಲ ಹಂತದಲ್ಲಿ ಕಳೆಸಿದ ಮಾವಿಗೆ ಉತ್ತಮ ಸ್ಪಂದನೆ ಸಿಕ್ಕ ನಂತರ ಎರಡನೆ ಬಾರಿಗೆ ಕಳೆಸಿದ ಬಗ್ಗೆ ಅವೆಸ್ಮ್ ಫುಡ್ಸ್ನ ನಿರ್ದೇಶಕ ಕೋಟೇಶ್ವರ ರಾವ್ ಹೇಳುತ್ತಾರೆ.
ದುಬಾರಿ ಧರಕ್ಕೆ ಮಾವು ಖರೀದಿ
ರೈತರಿಂದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಉತ್ತಮ ಬೆಲೆಗೆ ಖರೀದಿಸಿದ್ದೇವೆ ಎನ್ನುವ ವ್ಯಾಪಾರಿಗಳು ಕಿಲೋ ತೋತಾಪುರಿಗೆ 50 ರೂ. ಮತ್ತು ಬಂಗಿನಪಲ್ಲಿ ಕಿಲೋಗೆ 120 ರೂ.ಗೆ ಖರೀದಿಸಿದ್ದಾರಂತೆ, ಕಳೆದ ತಿಂಗಳು 9 ರಂದು ಐದು ಟನ್ ಬಂಗಿನಪಲ್ಲಿ ಮಾವಿನ ಹಣ್ಣುಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗಿದ್ದು ಸಾಗಣೆ ಮತ್ತು ಇತರ ವೆಚ್ಚಗಳ ಕಳೆದು ಪ್ರತಿ ಕಿಲೋಗೆ 40 ರೂ. ಲಾಭ ಗಳಿಸಿದ್ದಾಗಿ ಹೇಳುತ್ತಾರೆ.
ಅಧಿಕಾರಿಗಳ ಸ್ಪಷ್ಟನೆ
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMC) ನಿರ್ವಹಣೆ ಹಾಗು ಅಪೇಡಾ ಸಹಯೋಗದ ಮಾವಿನ ನಂತರದ ಕೊಯ್ಲು ನಿರ್ವಹಣೆ ಕೇಂದ್ರ(ಪ್ಯಾಕ್ ಹೌಸ್) ಸೇವೆಯನ್ನು ಆಂಧ್ರದ ಮಾವು ರಪ್ತಾಗಲು ಬಳಸಿಕೊಂಡ ಬಗ್ಗೆ ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.



