- ತಾಲೂಕು ಕಚೇರಿ ಮುಂಭಾಗದಲ್ಲಿ
- ಧರಣಿ ಸತ್ಯಾಗ್ರಹಕ್ಕೆ ವೇದಿಕೆ
- ಅಧಿಕಾರಿಗಳ ನಿರ್ಲಕ್ಷ್ಯ ಶಾಸಕರ ಆಕ್ರೋಶ!
ಶ್ರೀನಿವಾಸಪುರ:ತಾಲೂಕು ಆಡಳಿತ ಕಂದಾಯ ಇಲಾಖೆ ಹಾಗು ಪೋಲಿಸ್ ಇಲಾಖೆ ಕಾರ್ಯವೈಖರಿ ವಿರೋಧಿಸಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಈ ವಿಚಾರ ತಾಲೂಕು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ತಾಲೂಕು ಆಡಳಿತದ ವಿರುದ್ಧ ಶಾಸಕರು ಈಗ ಎಚ್ಚೆತ್ತುಕೊಂಡಿದ್ದಾರ ಎಂಬ ಪ್ರ್ರಶ್ನೆ ಈಗ ಎಲ್ಲಡೆ ಕೇಳಿಬರುತ್ತಿದೆ.
ಕಂದಾಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಜನರಲ್ಲಿನ ಅಸಮಾಧಾನ ಇಂದು ನಿನ್ನೆಯದಲ್ಲ ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಕೇಳಿಬರುತ್ತಿದೆ ಎಂದು ಬಾಬು ಹೇಳುತ್ತಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಭೂ ದಾಖಲೆಗಳ ಸಮಸ್ಯೆಗಳು, ಬಗರ್ಹುಕುಂ ಸಾಗುವಳಿದಾರರ ಹಕ್ಕುಪತ್ರಗಳು, ಜಮೀನುಗಳ ಸರ್ವೆ ಹಾಗೂ ಸಾರ್ವಜನಿಕರ ವಿವಿಧ ಅರ್ಜಿಗಳ ವಿಲೇವಾರಿ ಪ್ರಮುಖ ವಿಚಾರಗಳಾಗಿವೆ.
ವಿಶೇಷವಾಗಿ ರೈತರ ಭೂಹಕ್ಕಿನ ವಿಚಾರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಜಂಟಿ ಸರ್ವೆ ನಡೆಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಕೇಳಿಬರುತ್ತಿದೆ.
ಈ ಸಮಸ್ಯೆಗಳ ಪರಿಹಾರದಲ್ಲಿ ಅಧಿಕಾರಿಗಳ ಸ್ಪಂದನೆ ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ಶಾಸಕರು ಈಗ ಎಚ್ಚೆತ್ತುಕೊಂಡಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದಿಗಿಳಿಯಲು ಮುಂದಾಗಿರುವ ಶಾಸಕ!
ಸಾಮಾನ್ಯವಾಗಿ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳ ಮುಂದೆ ಧರಣಿ ನಡೆಸುತ್ತಾರೆ. ಆದರೆ ಜನರಿಂದ ಆಯ್ಕೆಯಾದ ಶಾಸಕ ತಾಲೂಕು ಆಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸಿ ಅದೇ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿಗೆ ಮುಂದಾಗಿರುವುದು ಗಮನಾರ್ಹವಾಗಿದೆ.
ಇದು ಆಡಳಿತ ವ್ಯವಸ್ಥೆಯ ಕಾರ್ಯನಿರ್ವಹಣೆ, ಅಧಿಕಾರಿಗಳ ಹೊಣೆಗಾರಿಕೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



