ಶ್ರೀನಿವಾಸಪುರ: ಅರಣ್ಯ ಇಲಾಖೆ ವಿರುದ್ಧ ಭೂಸಂತ್ರಸ್ತರು ಕಳೆದ ಒಂದು ವಾರದಿಂದ ತಾಲೂಕು ಕಚೇರಿ ಬಳಿ ಧರಣಿ ನಡೆಸುತ್ತಿದ್ದು, ಇವರ ಹೋರಾಟಕ್ಕೆ ಜನಪರ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸಿದೆ. ಅನಿರ್ದಿಷ್ಟಾವಧಿಯಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೂಸಂತ್ರಸ್ತರು ಮತ್ತು ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಅರಣ್ಯ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಒಂದು ತಿಂಗಳ ಅವಧಿಯೊಳಗೆ ಎಸ್ಐಟಿ ರಚಿಸಿ, ಜಂಟಿ ಸರ್ವೆ ನಡೆಸಲು ಸಚಿವರು ಸೂಚನೆ ನೀಡಿದ್ದಾರೆ. ಈ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಶೋಷಿತರು ಹಾಗೂ ರೈತ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ನನ್ನ ಬೆಂಬಲ ನಿರಂತರವಾಗಿರುತ್ತದೆ. ಬಗರ್ ಹುಕುಂ ಸಾಗುವಳಿ ಜಮೀನುಗಳಿಗೆ ಹಕ್ಕುಪತ್ರ ಕೊಡಿಸುವ ವಿಚಾರದಲ್ಲಿಯೂ ಅಗತ್ಯ ಕ್ರಮಗಳಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಪ್ರಮುಖ ಮುಖಂಡರು, ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಭೂಸಂತ್ರಸ್ತರು ಉಪಸ್ಥಿತರಿದ್ದರು.




