ಶ್ರೀನಿವಾಸಪುರ: ತಾಲ್ಲೂಕಿನ ಗುಂಡಮನತ್ತ ಗ್ರಾಮದ ವೇದಿಕ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರು ಹಾಗು ಯಶಸ್ವಿ ಸಿರಿಧಾನ್ಯ ಮಹಿಳಾ ಉದ್ಯಮಿ ರತ್ನಮ್ಮ ಅವರು ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದು ತಾಲ್ಲೂಕಿಗೆ ಹೆಮ್ಮೆ ತಂದಿದ್ದಾರೆ.
ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ರತ್ನಮ್ಮ ಅವರಿಗೆ ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ರತ್ನಮ್ಮ ಸೇರಿದಂತೆ ಹಲವು ಯಶಸ್ವಿ ಮಹಿಳಾ ಉದ್ಯಮಿದಾರರನ್ನು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದವ ಅವರು, ಭಾರತದ ಆರ್ಥಿಕ ಪ್ರಗತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮಹಿಳಾ ಉದ್ಯಮಶೀಲತೆ ಎಂದರೆ ಕೇವಲ ಲಾಭ ಗಳಿಸುವುದಕ್ಕೆ ಸೀಮಿತವಾಗಿಲ್ಲ. ಸಮಾಜದ ಏಳಿಗೆ, ಮಾನವೀಯ ಮೌಲ್ಯಗಳ ಪೋಷಣೆ, ನೈತಿಕ ವ್ಯಾಪಾರ ಪದ್ಧತಿ ಹಾಗೂ ಸುಸ್ಥಿರ ಅಭಿವೃದ್ಧಿಗೂ ಮಹಿಳಾ ಉದ್ಯಮಿಗಳು ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ಗುಡಿ ಕೈಗಾರಿಕೆಗಳು ಮತ್ತು ಗ್ರಾಮೀಣ ಉದ್ಯಮಗಳಿಂದ ಹಿಡಿದು ಜೈವಿಕ ತಂತ್ರಜ್ಞಾನ, ಔಷಧ ತಯಾರಿಕೆ, ಹಣಕಾಸು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅಂತರ್ಜಾಲ ವ್ಯಾಪಾರ ಸೇರಿದಂತೆ ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಲಿಜ್ಜತ್ ಪಾಪಡ್ನಂತಹ ಯಶಸ್ವಿ ಮಹಿಳಾ ಉದ್ಯಮಗಳ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮಹಿಳೆಯರ ನೇತೃತ್ವದ ಉದ್ಯಮಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೂ ನೆರವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಹಳ್ಳಿ ಇಂದ ಡಿಲ್ಲಿ ತನಕ
ಗುಂಡಮನತ್ತ ಸಣ್ಣ ಗ್ರಾಮೀಣ ಪ್ರದೇಶದಿಂದ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡು ರಾಜ್ಯಮಟ್ಟದ ಗೌರವಕ್ಕೆ ಪಾತ್ರರಾಗಿರುವ ರತ್ನಮ್ಮ ಅವರ ಸಾಧನೆ ಇತರ ಮಹಿಳೆಯರಿಗೂ ಪ್ರೇರಣೆ ಎನ್ನುತ್ತಾರೆ ಗ್ರಾಮಸ್ಥರು.
ಕೃಷಿಯಿಂದ ಆಹಾರ ಉತ್ಪನ್ನಗಳ ತಯಾರಿಕೆಯವರೆಗೆ!
3–4 ಎಕರೆ ಜಮೀನಿನಲ್ಲಿ ಕೃಷಿ ಕ್ರಾಂತಿ ಮಾಡಿದ ಗುಂಡಮನತ್ತ ಗ್ರಾಮದ ಸಿರಿಧಾನ್ಯ ರತ್ನಮ್ಮ
,ಕೋಲಾರದ ಕೃಷಿ ವಿಜ್ಞಾನ ಕೇಂದ್ರ (ICAR-KVK) ಸೇರಿದಂತೆ ವಿವಿಧ ಸಂಸ್ಥೆಗಳ ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆದು, ಗ್ರಾಮೀಣ ಮಹಿಳೆಯರಿಗೆ ಮಾದರಿಯಾಗುವಂತೆ ಇವರು ಸ್ವಾವಲಂಬಿ ಉದ್ಯಮಿಯಾಗಿ ಮಾವು ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದಿರುತ್ತಾರೆ. ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲ, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಉದ್ಯಮವಾಗಿ ರೂಪಿಸಿದರೆ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು ಎಂಬುದನ್ನು ಸಿರಿಧಾನ್ಯ ರತ್ನಮ್ಮ ಅವರು ಸಾಧಿಸಿ ತೋರಿಸಿದ್ದಾರೆ.

ಕೃಷಿಕ ಕುಟುಂಬದ ಮಹಿಳೆ
ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ ಮೂಲಕ ಉದ್ಯಮಕ್ಕೆ ಹೊಸ ರೂಪ ನೀಡಿದ್ದಾರೆ. ವೇದಿಕ್ ಫುಡ್ ಪ್ರಾಡಕ್ಟ್ಸ್’ ಎಂಬ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳು, ವಿವಿಧ ಬಗೆಯ ಉಪ್ಪಿನಕಾಯಿ, ಚಟ್ನಿಪುಡಿ ಹಾಗೂ ಮಾವಿನ ಉತ್ಪನ್ನಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆ ಮತ್ತು ಅಂತರ್ಜಾಲದ ಮೂಲಕ ಮಾರಾಟ ಮಾಡುತ್ತಿದ್ದಾರೆ.
₹5 ಸಾವಿರದಿಂದ ₹1 ಕೋಟಿಗೂ ಅಧಿಕ ವಹಿವಾಟು!
ಆರಂಭದಲ್ಲಿ ಕೇವಲ ₹5,000 ಬಂಡವಾಳದೊಂದಿಗೆ ಪ್ರಾರಂಭಿಸಿದ ಇವರ ಉದ್ಯಮ ಇಂದು ವಾರ್ಷಿಕ ₹1 ಕೋಟಿಗೂ ಅಧಿಕ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ.
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕೃಷಿ ಸಾಧಕಿ!
ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕ್ಷೇತ್ರದಲ್ಲಿನ ಸಾಧನೆಗಾಗಿ ಸಿರಿಧಾನ್ಯರತ್ನಮ್ಮ ಅವರು ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ರಾಜ್ಯಮಟ್ಟದ ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿಯ ಜೊತೆಗೆ, 2023ರಲ್ಲಿ ನಡೆದ ‘ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ’ ಪ್ರಶಸ್ತಿ ಸಮಾರಂಭದಲ್ಲಿ ‘ಭಾರತದ ಅತ್ಯಂತ ಶ್ರೀಮಂತ ರೈತ ಮಹಿಳೆ’ ಎಂಬ ಗೌರವವನ್ನೂ ಪಡೆದಿದ್ದಾರೆ.
ಕಡಿಮೆ ಭೂಮಿಯಲ್ಲಿಯೂ ಆಧುನಿಕ ಕೃಷಿ ಪದ್ಧತಿ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ದೊಡ್ಡ ಉದ್ಯಮವನ್ನು ಕಟ್ಟಬಹುದು ಎಂಬುದಕ್ಕೆ ಸಿರಿಧಾನ್ಯರತ್ನಮ್ಮ ಅವರ ಸಾಧನೆ ಪ್ರೇರಣೆ ಎನ್ನಬಹುದು.
ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ, ವಿಭಿನ್ನ ಸಾಮಾಜಿಕ ಹಿನ್ನೆಲೆ ಹಾಗೂ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಉದ್ಯಮಿಗಳಿಗೆ ಎಫ್ಕೆಸಿಸಿಐ ಮಹಿಳಾ ಉದ್ಯಮಿಗಳ ಶ್ರೇಷ್ಠತಾ ಪ್ರಶಸ್ತಿ–2026 ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್ಕೆಸಿಸಿಐ ಅಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ವಹಿಸಿದ್ದರು ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಬಿ.ಪಿ. ಶಶಿಧರ್, ಉಪಾಧ್ಯಕ್ಷ ಸತೀಶ್ ನಾಗರಾಜ್, ತಕ್ಷಣದ ಹಿಂದಿನ ಅಧ್ಯಕ್ಷೆ ಉಮಾ ರೆಡ್ಡಿ, ಮಹಿಳಾ ಉದ್ಯಮಶೀಲತಾ ಸಮಿತಿ ಅಧ್ಯಕ್ಷೆ ಉದಯಾ ರೆಡ್ಡಿ, ಸಮಿತಿಯ ಸಲಹೆಗಾರ ಹಾಗೂ ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ತಲ್ಲಂ ಆರ್. ದ್ವಾರಕನಾಥ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕೈಗಾರಿಕಾ ಕ್ಷೇತ್ರದ ಉದ್ಯಮದಾರರು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸಿರಿಧ್ಯಾನ ರತ್ನಮ್ಮ ಯಶಸ್ವಿ ಮಹಿಳಾ ಉದ್ಯಮಿಯಾಗಿ ಕರ್ನಾಟಕದ ಪ್ರತಿಷ್ಟಿತ ಸಂಸ್ಥೆಯಾದ FKCCI ಪ್ರಶಸ್ತಿ ಗಳಿಸಿರುವುದು ಕೋಲಾರ ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಕೋಲಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ(KDCCI) ಮಾಜಿ ಅಧ್ಯಕ್ಷ ಬಿ.ಸುರೇಶ್ ಅವರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಸ್ವಾವಲಂಬನೆ ಸಾಧಿಸುವ ಜೊತೆಗೆ ಹಲವು ಮಹಿಳೆಯರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿರು ರತ್ನಮ್ಮ ಅವರನ್ನು ಅಭಿನಂದಿಸಿದ್ದಾರೆ.



