ನ್ಯೂಜ್ ಡೆಸ್ಕ್:ಭಾರತದ ತಂತ್ರಜ್ಞಾನ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯನ್ನು ದೇಶದ ಮೊತ್ತಮೊದಲ ‘ಕ್ವಾಂಟಮ್ ವ್ಯಾಲಿ’ (Quantum Valley) ಎಂದು ಘೋಷಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ ಸುಮಾರು 10,000 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ನಿಗದಿಪಡಿಸಲಾಗಿದೆ.
ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಸಾಂಪ್ರದಾಯಿಕ ಕಂಪ್ಯೂಟರ್ಗಳಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಕೆಲಸ ಮಾಡುವ ತಂತ್ರಜ್ಞಾನವಾಗಿದ್ದು ಇದು ರಕ್ಷಣೆ, ಔಷಧ ಸಂಶೋಧನೆ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದಿಯಂತೆ.
ಅಮರಾವತಿಯ ಈ ವ್ಯಾಲಿಯಲ್ಲಿ ಜಾಗತಿಕ ಮಟ್ಟದ ಸಂಶೋಧನಾ ಪ್ರಯೋಗಾಲಯಗಳು, ಐಟಿ ಕಂಪನಿಗಳ ಕ್ವಾಂಟಮ್ ವಿಭಾಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದ್ದು. ಐಐಟಿ (IIT) ಮತ್ತು ಐಐಎಸ್ಸಿ (IISc) ಯಂತಹ ಸಂಸ್ಥೆಗಳು ಇಲ್ಲಿ ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.
ಈ ಯೋಜನೆಯಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 50,000 ಕ್ಕೂ ಹೆಚ್ಚು ಉನ್ನತ ತಂತ್ರಜ್ಞಾನದ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಆಂಧ್ರಪ್ರದೇಶದ ಚಂದ್ರಬಾಬು ನೇತೃತ್ವದ ಸರ್ಕಾರ ಕ್ವಾಂಟಮ್ ವ್ಯಾಲಿಗೆ ಬೇಕಾದ ಮೂಲಸೌಕರ್ಯ ಮತ್ತು ತಡೆರಹಿತ ವಿದ್ಯುತ್ ಪೂರೈಕೆಗೆ ವಿಶೇಷ ವ್ಯವಸ್ಥೆ ಮಾಡಿದೆ.

ಪೈಪೋಟಿಗಿಳಿದು ಗೆದ್ದ ನಾಯ್ಡು
ಈ ಹಿಂದೆಯೂ ಐಟಿ, ಬಿಟಿ ಉದ್ಯಮ ವಲಯವನ್ನು ಬಲಪಡಿಸುವಲ್ಲಿ ರಾಜ್ಯಕ್ಕೆ ಪ್ರಬಲ ಪೈಪೋಟಿ ನೀಡಿದ್ದ ನೆರೆಯ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಸುಮಾರು ಎರಡೂವರೆ ದಶಕಗಳ ಬಳಿಕ ಕ್ವಾಂಟಮ್ ಕಂಪ್ಯೂಟರ್ ವಿಚಾರದಲ್ಲೂ ಪ್ರಬಲ ಸ್ಪರ್ಧೆ ಪ್ರದರ್ಶನಕ್ಕೆ ಮುಂದಾಗಿ ಕ್ವಾಂಟಮ್ ವ್ಯಾಲಿ ದಕ್ಕಿಸಿಕೊಂಡಿದ್ದಾರೆ.



