ಭೈರವ ಕಾಲದ ನಿಯಂತ್ರಕ ಹಾಗಾಗಿ ಕಾಲಭೈರವ ಎಂದು ಪೂಜಿಸಿ ಆರಾಧನೆ ಮಾಡಿದರೆ ಕಾಲ ಮತ್ತು ಮೃತ್ಯುಭಯದಿಂದ ಮುಕ್ತಗೊಳಿಸುತ್ತದೆ. ಭೈರವನ ಉಗ್ರ ರೂಪ ಮನುಷ್ಯನ ಅಜ್ಞಾನ, ಭಯ ಹಾಗೂ ಅಹಂಕಾರವನ್ನು ದಹಿಸುತ್ತದೆ ಅಷ್ಟ ದಿಕ್ಪಾಲಕರು ರಕ್ಷಣೆ ನೀಡುತ್ತಾರೆ.
ಭೈರವ ಉಪಾಸನೆಯು ಶಾಸ್ತ್ರಗಳ 64 ಶಾಖೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಭೈರವಗಣಂ ಎಂಬುದು ಮಹಾಭೈರವ ಮತ್ತು ಮಹಾಭೈರವಿಯಿಂದ ಜನಿಸಿದ ಎಂಟು ಭೈರವರು ಮತ್ತು ಎಂಟು ಭೈರವಿಯರು, ಅವರ ಪತ್ನಿಯರು, ಇವರಿಂದ ರೂಪುಗೊಂಡ ಗುಂಪಾಗಿದೆ. ಭೈರವ ಆರಾಧನೆ ಅತ್ಯುನ್ನತ ಪ್ರಜ್ಞೆಯ ಸ್ಥಿತಿಯನ್ನು ತಲುಪಿಸಲು ಇರುವ ಅತ್ಯಂತ ಶಕ್ತಿಶಾಲಿ ಹಾಗೂ ಗಂಭೀರ ಆಧ್ಯಾತ್ಮಿಕ ಮಾರ್ಗವಾಗಿದ್ದು, ಕಾಶ್ಮೀರ ಶೈವ ಮತ್ತು ತಾಂತ್ರಿಕ ಪರಂಪರೆಗಳಲ್ಲಿ ಭೈರವನನ್ನು ಪರಬ್ರಹ್ಮ ಸ್ವರೂಪಿ ಹಾಗೂ ಅನಂತ ಪ್ರಜ್ಞೆಯ ಸಂಕೇತ ಎಂದು ಪರಿಗಣಿಸಲಾಗಿದೆ.

ಆದ್ಯಾತ್ಮಿಕ ಡೆಸ್ಕ್:ವಿಜ್ಞಾನ ಭೈರವ ತಂತ್ರವು ಪ್ರಾಚೀನ ಕಾಶ್ಮೀರಿ ವಿದ್ವಾಂಸರಲ್ಲಿ ಬಹಳ ಪ್ರಸಿದ್ಧವಾದ ಗ್ರಂಥ ಇದು ರುದ್ರಾಯಮಲ ತಂತ್ರದ ಒಂದು ಶಾಖೆ. ವಿಜ್ಞಾನ ಭೈರವ ತಂತ್ರವು ಕಾಶ್ಮೀರ ಶೈವ ಧರ್ಮದ ಒಂದು ಪವಿತ್ರ ಗ್ರಂಥವಾಗಿದ್ದು, ಇದರಲ್ಲಿ 112 ವಿವಿಧ ಧ್ಯಾನ ತಂತ್ರಗಳನ್ನು ವಿವರಿಸಲಾಗಿದ್ದು, ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆಯ ರೂಪದಲ್ಲಿರುವ ಈ ಗ್ರಂಥ, ನಿಜ ಸ್ವರೂಪದ ನೈಜತೆಯನ್ನು ಅರಿಯಲು ಸಹಾಯ ಮಾಡುತ್ತದೆ. ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿರುತ್ತದೆ. ಉಸಿರಾಟದ ನಿಯಂತ್ರಣ, ದೇಹದ ಕೇಂದ್ರಗಳ ಮೇಲೆ ಏಕಾಗ್ರತೆ, ಮಂತ್ರ ಪಠಣ ಮತ್ತು ಇಂದ್ರಿಯಗಳ ಬಳಕೆಯಂತಹ ವಿವಿಧ ವಿಧಾನಗಳನ್ನು ಇದು ಒಳಗೊಂಡಿರುತ್ತದೆ
ಇದರ ಮೊದಲ ಟಿಪ್ಪಣಿಯನ್ನು 1918 ರಲ್ಲಿ ಕಾಶ್ಮೀರದಲ್ಲಿ ಪ್ರಕಟಿಸಲಾಯಿತು. ಕ್ಷೇಮರಾಜ ಮತ್ತು ಶಿವಪಾಧ್ಯಾಯ ಮೊದಲ ವ್ಯಾಖ್ಯಾನಕಾರರಾಗಿದ್ದರು.28 ಅಧ್ಯಾಯಗಳಲ್ಲಿ 138 ಶ್ಲೋಕಗಳನ್ನು ಒಳಗೊಂಡಿರುವ ಈ ಪುಸ್ತಕ ಯೋಗ, ಮಂತ್ರ, ತಿಳುವಳಿಕೆ ಮತ್ತು ಮುದ್ರೆಯ ತತ್ವಶಾಸ್ತ್ರವನ್ನು ವಿವರಿಸುತ್ತದೆ.
ಭೈರವ ಪೌರಾಣಿಕ ವ್ಯಕ್ತಿಗಿಂತ ಹೆಚ್ಚಿನ ಮಹತ್ವ ಹೊಂದಿದ್ದು ಪ್ರಜ್ಞೆಯ ಅತ್ಯುನ್ನತ ಸ್ಥಿತಿ. ದೇಹ ಪ್ರಜ್ಞೆಯಿಂದ ಮನುಷ್ಯನ ಆತ್ಮ ಪ್ರಜ್ಞೆಯಲ್ಲಿ ಪ್ರಯಾಣದಲ್ಲಿ ಭೈರವ ದರ್ಶನವನ್ನು ಕಾಣಬಹುದಾಗಿರುತ್ತದೆ.
ಅಷ್ಟ ದಿಕ್ಕುಗಳ 8 ಭೈರವರು
1.ಅಸಿತಾಂಗ ಭೈರವ, 2. ಸಂಹಾರ ಭೈರವ, 3. ರುರು ಭೈರವ , 4. ಕ್ರೋಧ ಭೈರವ , 5. ಕಪಾಲ ಭೈರವ ,6.ಚಂದ ಭೈರವ , 7. ಭೀಷ್ಣ ಭೈರವ ,8. ಉನ್ಮತ್ತ ಭೈರವ ಮನುಷ್ಯನ ಪ್ರಜ್ಞೆಯ (Consciousness) ಎಂಟು ಹಂತಗಳು ಎಂಬ ಕಲ್ಪನೆ ವಿವಿಧ ಯೋಗ, ವೇದಾಂತ, ಬೌದ್ಧ, ತಾಂತ್ರಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಿಂದ ಗುರುತಿಸಬಹುದಾಗಿರುತ್ತದೆ.
1.ಜಾಗೃತ:ಬಾಹ್ಯ ಜಗತ್ತಿನ ಅರಿವು,,2.ಸ್ವಪ್ನ:ಒಳಮನಸ್ಸಿನ ಅನುಭವ, 3.ಸುಷುಪ್ತಿ:ಗಾಢ ವಿಶ್ರಾಂತಿ , 4 .ತುರೀಯ:ಸಾಕ್ಷಿಭಾವ ,5.ತುರೀಯಾತೀತ: ಅಹಂಕಾರದ ಕ್ಷಯ , 6.ಬ್ರಹ್ಮಚೈತನ್ಯ:ಏಕತ್ವದ ಅನುಭವ , 7 ಸಮಾಧಿ:ಆಳವಾದ ಧ್ಯಾನ ಮತ್ತು ಶಾಂತಿ , 8 ಮೋಕ್ಷ:ಸಂಪೂರ್ಣ ಮುಕ್ತಿ(ಲೌಕಿಕ ಮೋಹಗಳನ್ನು ಕಳಚಿಕೊಂಡು, ಆತ್ಮಸಾಕ್ಷಾತ್ಕಾರ ಪಡೆಯಲು ಸಹಕಾರಿ)
ಇವು ಮನುಷ್ಯನ ಪ್ರಜ್ಞೆಯ ಎಂಟು ಹಂತಗಳನ್ನು ಪ್ರತಿನಿಧಿಸುತ್ತವೆ, ಒಟ್ಟು 64 ಭೈರವ ರೂಪಗಳು ಈ ಪ್ರಜ್ಞೆಯ ತತ್ವಗಳ ಚಿಂತನಾ ರೂಪಗಳಾಗಿರುತ್ತವೆ. ಭಗವಾನ್ ಭೈರವನನ್ನು ಪೂಜಿಸಿ ಮಂತ್ರಗಳನ್ನು ಪಠಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ. ಆಧ್ಯಾತ್ಮಿಕ ದೃಷ್ಟಿಯಿಂದ,8 ರೂಪಗಳು ಅಷ್ಟ ದಿಕ್ಕುಗಳ ಸಂಕೇತ ಮನುಷ್ಯನು ಎಲ್ಲ ದಿಕ್ಕುಗಳಿಂದಲೂ ದೈವಿಕ ರಕ್ಷಣೆಯಲ್ಲಿರಲಿ ಎಂಬ ಆಶಯವನ್ನು ಇದು ಸೂಚಿಸುತ್ತದೆ. ಮನುಷ್ಯನ ಜಾತಕದಲ್ಲಿ ಶನಿ, ರಾಹು ಹಾಗು ಕೇತು ಮಹಾದಶ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರಜ್ಞರ ಅಭಿಪ್ರಾಯ.
ಭೈರವರ ವಾಹನಗಳು
ಸಾಮಾನ್ಯವಾಗಿ ಭೈರವನ ವಾಹನ ನಾಯಿ ಎಂದು ಹೇಳಲಾಗುತ್ತದೆ, ಸಮಯದ ಸಂಕೇತ. ಆದಾಗ್ಯೂ, ಎಂಟು ಭೈರವಗಳಲ್ಲಿ ಪ್ರತಿಯೊಂದು ಭೈರವಕ್ಕೂ ವಿಭಿನ್ನ ವಾಹನಗಳಿವೆ, ಅವುಗಳೆಂದರೆ ಹಂಸ, ನಾಯಿ, ಗೂಳಿ, ಗರುಡ, ಆನೆ, ನವಿಲು, ಸಿಂಹ ಮತ್ತು ಕುದುರೆ. ಈ ವಾಹನಗಳು ವಿಭಿನ್ನ ಶಕ್ತಿಗಳು ಮತ್ತು ಪ್ರಜ್ಞೆಯ ದಿಕ್ಕುಗಳನ್ನು ಪ್ರತಿನಿಧಿಸುತ್ತವೆ. ಭೈರವ ಚಾಲೀಸ ಭಕ್ತಿ ಪ್ರಾರ್ಥನೆಯು ಭೈರವ ಭಕ್ತರ ಮುಖ್ಯ ಸ್ತೋತ್ರವಾಗಿದೆ. ಭಾನುವಾರ ಮತ್ತು ಗುರುವಾರಗಳು ಪೂಜೆಗೆ ಅನುಕೂಲಕರ ದಿನಗಳು. ರಾಹು ದೋಷ, ಶನಿವಾರ ದೋಷ ಮತ್ತು ಪಿತೃ ದೋಷಗಳಿಗೆ ಪರಿಹಾರವಾಗಿ ಭೈರವ ಪೂಜೆ ಪ್ರಮುಖ ಎನ್ನುತ್ತಾರೆ.
ಪುರಾಣಗಳಲ್ಲಿ ಭೈರವ
ಶಿವ ಪರಮಾತ್ಮನು ಭೈರವ ರೂಪ ಧರಿಸಿ ಬ್ರಹ್ಮನ ಐದನೇ ತಲೆಯನ್ನು ತಗೆದು ಬ್ರಹ್ಮನ ದುರಹಂಕಾರವನ್ನು ಅಣಗಿಸುವ ಕಥೆ ಅತ್ಯಂತ ಪ್ರಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಕೃಷ್ಣ ಪಕ್ಷದ ಎಂಟನೇ ದಿನದಂದು ಭೈರವ ಜಯಂತಿಯನ್ನು ಆಚರಿಸಲಾಗುತ್ತದೆ. ಅಂಧಕಾಸುರನನ್ನು ಕೊಂದ ರೂಪ ಮತ್ತು ಯಮನನ್ನು ಕೊಂದು ಮಾರ್ಕಂಡೇಯನನ್ನು ರಕ್ಷಿಸಿದ ಕಾಲಭೈರವನ ರೂಪವು ಅವುಗಳಲ್ಲಿ ಪ್ರಸಿದ್ಧವಾದುವು. ಕಾಲಭೈರವನನ್ನು ಪೂಜಿಸುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ ಎಂದು ನಂಬಿಕೆ ಇದೆ.
ಹಿಂದೂ ಧರ್ಮದ ಪ್ರಕಾರ ಕೃಷ್ಣ ಪಕ್ಷದ ಎಂಟನೇ ಶುಭದಿನ ಕಾಲಾಷ್ಟಮಿಯಂದು ವ್ರತಾಚರಣೆಗೆ ಮಹತ್ವದ ದಿನ ಎಂದು ಪರಿಗಣಿಸಲಾಗುತ್ತದೆ. ಅಂದು ವ್ರತಾಚರಣೆ ಮಾಡುವ ಮೂಲಕ ಉಪವಾಸ ಇದ್ದು ಪ್ರಾರ್ಥನೆ ಸಲ್ಲಿಸಿದರೆ ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಿ ಭಯ, ಮಾಟಮಂತ್ರ, ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ. ಪರಮಾತ್ಮ ಪರಶಿವನ ಆಶೀರ್ವಾದದೊಂದಿಗೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.
ಭಾರತದ ಭೈರವ ದೇವಾಲಯಗಳು
ಉತ್ತರ ಭಾರತದ ಕಾಶಿ ವಿಶ್ವನಾಥ ದೇವಾಲಯದ ಬಳಿ ಇರುವ ಕಾಲಭೈರವ ದೇವಾಲಯವು ಅತ್ಯಂತ ಪ್ರಸಿದ್ಧವಾದುದು.ಕಾಲಭೈರವ ಕಾಶಿ ಕ್ಷೇತ್ರ ಪಾಲಕ ಎನ್ನುತ್ತಾರೆ. ತಮಿಳುನಾಡಿನ ಸೇಲಂ ಬಳಿ ಇರುವ ಅರಗಲೂರಿನ ಕಾಮಾನಂದ ಈಶ್ವರ ದೇವಾಲಯದಲ್ಲಿ ಎಂಟು ಋತುಗಳನ್ನು ಪ್ರತಿನಿಧಿಸುವ ಎಂಟು ಭೈರವ ವಿಗ್ರಹಗಳಿಗೆ ಖ್ಯಾತಿ ಪಡದಿದೆ. ಧನಭೈರವನನ್ನು ತಮಿಳುನಾಡಿನ ಪ್ರಖ್ಯಾತ ಚಿದಂಬರೇಶ್ವರ ದೇವಾಲಯದ ಆವರಣಲ್ಲಿ ಪ್ರತಿಷ್ಠಾಪಿಸಲಾಗಿದೆ, ಇಲ್ಲಿ ಕುಬೇರನನ್ನಾಗಿ ಆರಾಧಿಸಲಾಗುತ್ತದೆ.
ಕರ್ನಾಟಕದ ಪ್ರಮುಖ ಕಾಲ ಭೈರವ ದೇವಾಲಯಗಳು
ಕರ್ನಾಟಕದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿನ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ, ಹೋಸಕೋಟೆ ತಾಲೂಕು ಜಡಿಗೇನಹಳ್ಳಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನ ಪ್ರಮುಖ ಕ್ಷೇತ್ರವಾಗಿದೆ. ಬೆಂಗಳೂರು ನಗರದ ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ ಹಾಗು ವಿಶೇಷವಾಗಿ ಕೋಲಾರದ ವೇಮಗಲ್ ಬಳಿಯ ಸೀತಿ ಭೈರವೇಶ್ವರ ದೇವಾಲಯ ಅವಿಭಜಿತ ಕೋಲಾರದಲ್ಲಿ ಪ್ರಖ್ಯಾತಿ ಪಡದಿದೆ.



