ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ದೇವಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಆರ್.ಎಸ್. ವಿಜಯ್ ಕುಮಾರ್ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರ ಶ್ರೀನಿವಾಸಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲೂಕಿನ ದೇವಲಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಜಯ್ ಕುಮಾರ್ ಅವರ ವಿರುದ್ಧ ವಿದ್ಯಾರ್ಥಿಗಳು ಮಾಡಿದರು ಎನ್ನಲಾದ ಆರೋಪಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4ರಂದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು ಪ್ರಕರಣವನ್ನು ಖಂಡಿಸಿ ಶ್ರೀನಿವಾಸಪುರದ ನೌಕರರ ಭವನದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ತಾಲೂಕು ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿ, ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಬೈರೇಗೌಡ, ಕಳೆದ 21 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವಿಜಯ್ ಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.
ಶಾಲೆಯ ಆಂತರಿಕ ವಿಚಾರಗಳಲ್ಲಿ ಸ್ಥಳೀಯ ರಾಜಕೀಯ ಹಸ್ತಕ್ಷೇಪ ಇದ್ದು ಶಿಕ್ಷಕರ ಹೇಳಿಕೆಯನ್ನು ಸಮರ್ಪಕವಾಗಿ ಪಡೆಯದೆ ಹಾಗೂ ಸಂಪೂರ್ಣ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರ ಪರವಾಗಿ ಹೇಳಿದರು. ಈ ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ಹೊರತರಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮುಳಬಾಗಿಲು ವಿಭಾಗದ ಡಿವೈಎಸ್ಪಿ ಮನಿಷಾ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಪ್ರಕರಣವನ್ನು ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತನಿಖೆಯಲ್ಲಿ ತಪ್ಪು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಆರೋಪಗಳು ಸುಳ್ಳು ಎಂದು ಸಾಬೀತಾದಲ್ಲಿ ಪ್ರಾಮಾಣಿಕ ಶಿಕ್ಷಕರಿಗೆ ಅನ್ಯಾಯವಾಗಬಾರದು ಎಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.

ಪ್ರಕರಣದಲ್ಲಿ ಸೂಕ್ತ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ದೇವಲಪಲ್ಲಿ ಪ್ರತಿಭಟನೆಯಲ್ಲಿ ಶಿಕ್ಷಕಿಯರು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡು ಶಾಲೆ ಶಿಕ್ಷಕ ಆರ್.ಎಸ್. ವಿಜಯ್ ಕುಮಾರ್ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.



