ಕೋಲಾರ-ಮಾಲೂರು ನಡುವಿನ ವಕ್ಕಲೇರಿ ಬಳಿ ಇರುವ ಮಾರ್ಕಂಡೇಯ ದೇವಾಲಯ ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಸಿಗುತ್ತದೆ ಎನ್ನುವ ನಂಬಿಕೆ.ಯಮಧರ್ಮ ಸ್ವತಃ ಬಂದು ಮಾರ್ಕಂಡೇಯನ ಮೆಲೆ ಪಾಶ ಹಾಕಿ ಎಳೆದಾಗ ಮಾರ್ಕಂಡೇಯ ತನ್ನ ಕೈಗಳಿಂದ ಶಿವಲಿಂಗವನ್ನು ತಬ್ಬಿ ಹಿಡಿದ ಪರಿಣಾಮ ಶಿವಲಿಂಗದ ಮೇಲೆ ಉಗುರಿನ ಗುರುತುಗಳು ಮೂಡಿದ್ದು ಈಗಲೂ ಶಿವಲಿಂಗದ ಮೇಲಿವಿಯಂತೆ.
ಮಾಲೂರು:ಬಂಗಾರದನಾಡು ರೇಷ್ಮೆಯ ಬೀಡು ಹಾಲಿನಭೂಮಿ ಹಾಗು ಅಪಾರ ಪ್ರಾಕೃತಿಕ ಸಂಪತ್ತು ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಕೋಲಾರ-ಮಾಲೂರು ನಡುವಿನ ವಕ್ಕಲೇರಿ ಬಳಿ ಪುರಾತನ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ಮಾರ್ಕಂಡೇಯ ದೇವಾಲಯ ಇದೆ.
ಅರಣ್ಯಪ್ರದೇಶದ ಬೆಟ್ಟಗುಡ್ಡಗಳ ಸಾಲಿನಲ್ಲಿ ರಮಣೀಯ ಪ್ರಕೃತಿ ಹಸಿರಿನ ಮದ್ಯೆ ಮಾರ್ಕಂಡೇಶ್ವರಸ್ವಾಮಿ ಬೆಟ್ಟ ಇದ್ದು ಅಲ್ಲಿ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯವಿದೆ ಇಲ್ಲಿ ಈಶ್ವರನನ್ನು ಮಾರ್ಕಂಡೇಶ್ವರ ಎಂದು ಕರೆಯಲಾಗುತ್ತದೆ.
ಬೆಟ್ಟ ಸಾಲುಗಳಲ್ಲಿ ಬಿಳಿಬೆಟ್ಟ ಭೃಗು ವಂಶಿಯಾದಲ್ಲಿ ಭಾರ್ಗವ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯ ನಿರ್ಮಾಣ ಮಾಡಲಾಗಿದೆ.

ಮಾರ್ಕಂಡೇಯ ಪುರಾಣ
ಹಿಂದೂ ಧರ್ಮದಲ್ಲಿ ಹಲವಾರು ಪುರಾಣಗಳಿದ್ದು ಇದರಲ್ಲಿ ಮಾರ್ಕಂಡೇಯ ಪುರಾಣವು Markandeya Purana ಹಿಂದೂ ಸಾಹಿತ್ಯದ ಪುರಾಣಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ ಸೃಷ್ಟಿ, ವಿನಾಶ, ಪುನರ್ಜನ್ಮ, ಕರ್ಮ, ಮೋಕ್ಷ ಮತ್ತು ಧಾರ್ಮಿಕ ವಿಷಯಗಳ ಕುರಿತು ಸಾಕಷ್ಟು ಮಾಹಿತಿಯನ್ನು ಒಳಗೊಂಡಿದೆ. ಈ ಪುರಾಣವನ್ನು ಋಷಿ ಮಾರ್ಕಂಡೇಯನು ವಿಷ್ಣುವಿನ ನಾನಾ ಅವತಾರಗಳಲ್ಲಿ ಒಂದಾದ ಶ್ರೀಕೃಷ್ಣನಿಗೆ ವಿವರಿಸಿದ್ದನು. ಈ ಪುರಾಣದಲ್ಲಿ ಸಾಕಷ್ಟು ಕಥೆಗಳು, ಬೋಧನೆಗಳು ಇವೆ, ಅವುಗಳಲ್ಲಿ ಋಷಿ ಮಾರ್ಕಂಡೇಯರ ಅಮರತ್ವದ ಕಥೆಯು ಅತ್ಯಂತ ಪ್ರಸಿದ್ಧವಾಗಿದೆ. ದೇವಾಲಯದ ಸ್ಥಳ ಪುರಾಣ
ಮಾರ್ಕಂಡೇಯ ಪುರಾಣದಲ್ಲಿ ಉಲ್ಲೆಖಿಸಿರುವಂತೆ ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ದಿನಗಳ ಕಾಲ ಮಕ್ಕಳಿಲ್ಲದ ಕೊರಗು ಕಾಡುತಿತ್ತು ಇದಕ್ಕೆ ಮೃಕಂಡುಮುನಿ ಪುತ್ರಾರ್ಥಿಗಾಗಿ ಪರಮೇಶ್ವರನನ್ನು ಕುರಿತು ಕಠಿಣ ತಪಸ್ಸು ಆಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿದ ಪರಮೇಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡುಮುನಿ ಅಲ್ಪಾಯುಷಿಯಾದರೂ ಪರ್ವಾಗಿಲ್ಲ ಜ್ಞಾನವಂತನಾದ ಮಗ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ. ಮುಂದೆ ಮಾರ್ಕಂಡೇಯ ಬೆಳೆದು ಪ್ರೌಢಾವಸ್ಥೆಯಲ್ಲಿ ತಾನು ಅಲ್ಪಾಯು ಎಂದು ತಿಳಿದುಕೊಂಡು ತನ್ನ ತಂದೆ, ತಾಯಿಗಳ ಸಂತುಷ್ಠಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ.
ಮಾರ್ಕಂಡೇಯ ತಪವನ್ನಾಚರಿಸುವ ಸಂದರ್ಭದಲ್ಲಿ ಶಿವಧ್ಯಾನದಲ್ಲಿ ಮಗ್ನನಾಗಿದ್ದಾಗ ಆತನ ಆಯುಸ್ಸು ಮುಗಿಯುತ್ತದೆ, ಅಯಸ್ಸು ಮುಗಿಯುತ್ತಲೆ ಮಾರ್ಕಂಡೇಯನ ಪ್ರಾಣ ಕೊಂಡೊಯ್ಯಲು ಯಮಭಟರು ಆಗಮಿಸಿ ಯಮ ಪಾಶ ಬಿಸುತ್ತಾರೆ ಆದರೆ ಮಾರ್ಕಂಡೇಯ ಶಿವಧ್ಯಾನದಲ್ಲಿ ಮಗ್ನನಾಗಿದ್ದರಿಂದ ಕೊಂಡಯ್ಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಸ್ವತಃ ಯಮಧರ್ಮನೆ ಬಂದು , ಮಾರ್ಕಂಡೇಯನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮಧರ್ಮ ಬಲವಂತ ಮಾಡಿ ಎಳೆದಾಗ,ಲಿಂಗದಿಂದ ಕೋಪಿಷ್ಟನಾಗಿ ಶಿವ ಪ್ರತ್ಯಕ್ಷನಾಗುತ್ತಾನೆ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾದ ಶಿವ ಮಾರ್ಕಂಡೇಯನಿಗೆ ಚಿರಂಜೀವಿಯಾಗು ಎಂದು ವರ ನೀಡುತ್ತಾನೆ.ಯಮನನ್ನು ಗೆದ್ದು ಚಿರಂಜೀವಿಯಾಗುತ್ತಾನೆ. ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಪರಮೇಶ್ವರ ಶಿವ ಬೆಟ್ಟದಲ್ಲಿ ಮಾರ್ಕಂಡೇಶ್ವರನಾಗಿ ನೆಲೆ ನಿಂತು ಭಕ್ತರನ್ನು ಸಲಹುತ್ತಿದ್ದಾನೆ.
ವಕ್ಕಲೇರಿಯಾದ ಕಥೆ
ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣಕ್ಕೆ ‘ ವರಪುರಿ “ ಎಂದು ಹೆಸರು ನಾಮಕರಣವಾಯಿತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ಕ್ರಮೇಣ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.
ಗಂಗರ ಕಾಲದಲ್ಲಿ ದೇವಾಲಯ ನಿರ್ಮಾಣ
12ನೇ ಶತಮಾನದಲ್ಲಿ ಚೋಳರ ಅವದಿಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ಆಗಿದ್ದು ವಿಜಯನಗರದ ಅರಸರ ಆಳ್ವಿಕೆಯಲ್ಲಿ ದೇವಾಲಯ ಅಭಿವೃದ್ಧಿ ಪಡಿಸಿದ್ದಾರೆ ಎಂದು ವೀರಗಲ್ಲುಗಳ ಅಧ್ಯಯನಕಾರರು ಹಾಗು ಇತಿಹಾಸಕಾರ ಪ್ರೊಫೆಸರ್ ನರಸಿಂಹನ್ ಅಭಿಪ್ರಾಯ ಪಡುತ್ತಾರೆ. 1988ರಲ್ಲಿ ದೇವಾಲಯಕ್ಕೆ ಗಾಳಿ ಗೋಪುರ ನಿರ್ಮಾಣ ಕಾರ್ಯ ಆರಂಭವಾಗಿ, 1990 ರಲ್ಲಿ ಪೂರ್ಣಗೊಂಡು ಅನಾವರಣಗೊಂಡಿತು.ಈ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜಿವರೆಡ್ಡಿ ಮತ್ತಿತರರು ಭಾಗವಹಿಸಿದ್ದರು.1970 ರಲ್ಲಿ ಪಟೇಲ್ ವೆಂಕಟರಾಮೇಗೌಡ ಎನ್ನುವರು ಭಕ್ತರು ಬೆಟ್ಟ ಹತ್ತಲು ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ.ದೇವಾಲಯದ ಆವರಣದಲ್ಲಿದ್ದ ಸುಬ್ರಮಣ್ಯ, ಪಾರ್ವತಿ, ಗಣಪತಿ ಹಾಗೂ ಶ್ರೀವಳ್ಳಿ ವಿಗ್ರಹಗಳನ್ನು ಭಗ್ನಗೊಳಿಸಿದಾಗ, ಅಂದು ವೇಮಗಲ್ ಶಾಸಕರಾಗಿದ್ದ ಬೈರೇಗೌಡರು ನೂತನವಾಗಿ ವಿಗ್ರಹಗಳನ್ನು ಕೆತ್ತನೆ ಮಾಡಿಸಿ,ಪುನರ್ ಪ್ರತಿಷ್ಠೆ ಮಾಡಿಸಿದರು.
ಈ ದೇವಸ್ಥಾನಕ್ಕೆ ಮಹಾದ್ವಾರ, ಬಹೃತ್ ವಿಶಾಲವಾದ ಬಸವಮಂಟಪ, ಕಲ್ಯಾಣ ಮಂಟಪ, ಸುಖನಾಸಿ, ನವರಂಗ, ಯಾಗ ಮಂಟಪ, ಗರ್ಭಾಂಕಣವಿದೆ. ಆವರಣದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಮೂಲಸ್ಥಾನದ ಸುತ್ತಲೂ ವಿವಿಧ ಉಪಾಲಯಗಳು ಇವೆ ವೀರಭದ್ರಸ್ವಾಮಿ ಸಮೇತ ಸಪ್ತಮಾತೃಕೆಯರು, ವಿಘ್ನೇಶ್ವರ, ಸುಬ್ರಹ್ಮಣ್ಯೇಸ್ವಾಮಿ, ಪ್ರಸನ್ನ ಪಾರ್ವತಿದೇವಿ,ಚಂಡಿಕೇಶ್ವರಸ್ವಾಮಿ, ಶ್ರೀವೆಂಕಟರಮಣ ಸ್ವಾಮಿ, ಶ್ರೀಕಾಲಭೈರವಸ್ವಾಮಿ ದೇವರ ಗುಡಿಗಳಿವೆ.
ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಅತ್ಯಂತ ಸುಂದರವಾಗಿ ಗಮನ ಸೆಳೆಯುವಂತಿವೆ.ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿನ ಕಂಬಗಳು ಅತಿ ಸುಂದರವಾಗಿ ಸೂಕ್ಷ್ಮವಾಗಿ ಕೆತ್ತನೆ ಮಾಡಿದ್ದು ಮನಸೂರೆಗೊಳ್ಳುತ್ತವೆ. ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಶ್ರೀಮಾರ್ಕಂಡೇಶ್ವರ ದೇವಾಲಯ ಅಭಿವೃದ್ದಿ ದತ್ತಿ ವತಿಯಿಂದ ದೇವಾಲಯದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.



ದೇವಾಲಯದಲ್ಲಿ ವಿಶೇಷ ದಿನಗಳು
ಆಷಾಡ ಶುದ್ಧ ತದಿಗೆಯಂದು ಬೆಟ್ಟದ ಮೇಲೆ ಶ್ರೀ ಮಾರ್ಕಂಡೇಯಸ್ವಾಮಿಯ ಜಯಂತಿ ನಡೆಯುತ್ತದೆ. ಮತ್ತು ಮಹಾ ಶಿವರಾತ್ರಿಯಂದು ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಪದ್ಮಶಾಲಿ ಸಮಾಜದವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ.
ದೇವಾಲಯಕ್ಕೆ ಬರಲು ಮಾರ್ಗ
ದೇವಾಲಯಕ್ಕೆ ಬೆಂಗಳೂರಿನಿಂದ ಬರಲು ರೈಲು ಹಾಗು ಬಸ್ ಮಾರ್ಗ ಇದೆ ರೈಲಿನಲ್ಲಿ ಬರುವಂತವರು ಮಾಲೂರು ರೈಲ್ವೇ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾರು ಅಥವ ಆಟೋ ಮೂಲಕ ದೇವಾಲಯಕ್ಕೆ ಬರಬಹುದಾಗಿದೆ ಕೋಲಾರ ಭಾಗದಿಂದ ಬರುವಂತವರಿಗೆ ಕೋಲಾರದಿಂದ ವಕ್ಕಲೇರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ಆಟೋ ಮೂಲಕ ದೇವಾಲಯಕ್ಕೆ ಬರಬಹುದಾಗಿದೆ.ಬಂಗಾರಪೇಟೆ ಯಿಂದಲೂ ಬೆಟ್ಟಕ್ಕೆ ಬರಲು ಉತ್ತಮ ರಸ್ತೆ ಮಾರ್ಗ ಇದೆ ಸ್ವಂತ ವಾಹನಗಳು ಇದ್ದವರು ನೇರವಾಗಿ ಬೆಟ್ಟ ಹತ್ತಲು ಉತ್ತಮವಾಗಿ ರಸ್ತೆ ಮಾಡಲಾಗಿದ್ದು ದೇವಾಲಯದ ಬಳಿ ಬರಬಹುದಾಗಿದೆ.ದೇವಾಲಯ ಪ್ರತಿದಿನ ಬೆಳಿಗ್ಗೆ 10 ರಿಂದ 1 ಗಂಟೆಯವರಿಗೂ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯವರಿಗೂ ತೆರೆದಿರುತ್ತದೆ ಅರ್ಚಕ ರವಿಶಂಕರ್ ಅವರ ಮೊಬೈಲ್ ಸಂಖ್ಯೆ 9448641948 and 97310 29823.