ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ರೂಢಿಗೆ ತಂದಿರುವ ಹಾಗೂ ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಹಬ್ಬ-ಹರಿದಿನಗಳು, ಸಂಸ್ಕಾರಗಳು ಮತ್ತು ಸಂಪ್ರದಾಯಗಳ ಹಿಂದೆ ಅನೇಕ ಅರ್ಥಪೂರ್ಣ ಲೆಕ್ಕಾಚಾರಗಳು, ಜೀವನದ ಅನುಭವಗಳು ಹಾಗೂ ಸಾಮಾಜಿಕ ಕಾಳಜಿ ಇವೆ. ಕೇವಲ ಸಂಪ್ರದಾಯವನ್ನು ಅನುಸರಿಸುವುದಕ್ಕಿಂತ ಅದರ ಹಿಂದಿರುವ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಹಿರಿಯರು ಏಕೆ ಈ ಆಚರಣೆಯನ್ನು ರೂಢಿಗೆ ತಂದರು? ಅದರ ಮೂಲಕ ಸಮಾಜಕ್ಕೆ ಯಾವ ಸಂದೇಶವನ್ನು ನೀಡಿದರು? ಮುಂದಿನ ಪೀಳಿಗೆಗೆ ಯಾವ ಮೌಲ್ಯವನ್ನು ತಲುಪಿಸಲು ಬಯಸಿದರು? ಎಂಬುದನ್ನು ಅರಿಯುವ ಪ್ರಯತ್ನವೂ ನಮ್ಮದಾಗಬೇಕು. ಕಾಲ ಬದಲಾಗಬಹುದು, ಜೀವನಶೈಲಿ ಬದಲಾಗಬಹುದು. ಆದರೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಮೂಲ ಆಶಯಗಳು ಮರೆಯಾಗಬಾರದು. ಅವುಗಳಲ್ಲಿರುವ ಉತ್ತಮ ಮೌಲ್ಯಗಳನ್ನು ಉಳಿಸಿಕೊಂಡು, ಅವುಗಳ ಅರ್ಥವನ್ನು ಇಂದಿನ ಪೀಳಿಗೆಗೆ ತಿಳಿಸಿ, ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಪ್ರದಾಯವನ್ನು ಕೇವಲ ಆಚರಿಸುವುದಲ್ಲ; ಅದರ ಹಿಂದಿರುವ ಅರ್ಥವನ್ನು ಅರಿತು ಕೊಳ್ಳಬೇಕು. ಸಂಸ್ಕಾರವನ್ನು ಕೇವಲ ಹೇಳಿಕೊಡುವುದಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರಿಂದ ಬಂದ ಪರಂಪರೆಯನ್ನು ಕೇವಲ ಉಳಿಸುವುದಲ್ಲ; ಅದರ ಸಾರ್ಥಕತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಇದೇ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜೀವಂತವಾಗಿಡುವ ನಿಜವಾದ ಹೊಣೆಗಾರಿಕೆ.
ಶ್ರೀನಿವಾಸಪುರ: ಶ್ರಾವಣ ಮಾಸದ ಶನಿವಾರಗಳಂದು ‘ಶ್ರೀನಿವಾಸಾಯ ಮಂಗಳಂ ಶ್ರೀ ವೆಂಕಟೇಶಾಯ ಮಂಗಳಂ ಎಂದು ಕೆಲವರು ‘ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ…’ ಎನ್ನುತ್ತ ಭಗವಂತನ ನಾಮ ಸ್ಮರಣೆಯೊಂದಿಗೆ ಸಣ್ಣ ವಯಸ್ಸಿನ ವಟುಗಳಿಂದ ಹಿಡಿದು ಹಿರಿಯ ವಯಸ್ಸಿನವರವರೆಗೆ ನೆರೆಹೊರೆಯವರ ಮನೆಗಳಲ್ಲಿ ‘ಪಡಿ’ ಬೇಡುವುದು ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಪಡಿ ಬೇಡುವುದು ಎಂದರೇನು?
ಪಡಿ ಬೇಡುವುದು ಅದರ ಹಿಂದಿರುವ ಹಿನ್ನೆಲೆಯೇನು? ಶ್ರಾವಣ ಮಾಸದಲ್ಲಿಯೇ ಪಡಿಯನ್ನು ಏಕೆ ಬೇಡುತ್ತಾರೆ? ಪಡಿ ರೂಪದಲ್ಲಿ ಸಂಗ್ರಹಿಸಿದ್ದನ್ನು ಏನು ಮಾಡುತ್ತಾರೆ? ಸಹಜ ಪ್ರಶ್ನೆಗಳು.
ಶುಭ್ರವಸ್ತ್ರ, ನಾಮ ಮತ್ತು ಕೈಯಲ್ಲೊಂದು ಪಾತ್ರೆ ಶ್ರಾವಣ ಶನಿವಾರದಂದು ಪಡಿ ಬೇಡುವ ವಟುಗಳು, ಕೆಲವೊಮ್ಮೆ ದೊಡ್ಡವರೂ ಸಹ ಶುಭ್ರವಸ್ತ್ರ ಧರಿಸಿ,ಕೆಲವರು ಪಂಚೆ ಉಟ್ಟು ಹಣೆಗೆ ಮೂರು ಅಥವಾ ಒಂದು ನಾಮವನ್ನು ಧರಿಸಿ ಕೈಯಲ್ಲಿ ಪಂಚಪಾತ್ರೆ ಇಲ್ಲವೇ ಸಣ್ಣ ಚೊಂಬನ್ನು ಹಿಡಿದು ಕೊಂಡು ಅದಕ್ಕೂ ನಾಮ ಎಳೆದು, ಹೂವಿನ ಮಾಲೆ ಸುತ್ತಿಕೊಂಡು ಅಕ್ಕಪಕ್ಕದ ಮನೆಯ ಹೊಸಿಲಲ್ಲಿ ಅಥವಾ ದೇವರ ಮನೆಯ ಮುಂದೆ ನಿಂತು ‘ಶ್ರೀನಿವಾಸಾಯ ಮಂಗಳಂ… ಶ್ರೀ ವೆಂಕಟೇಶಾಯ ಮಂಗಳಂ…’ ಇಲ್ಲವೇ ‘ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ…’ ಎಂದು ಭಕ್ತಿಯಿಂದ ಕೂಗುತ್ತಾರೆ.
ಆಗ ಮನೆಯ ಒಡತಿ ಒಳಗಿನಿಂದ ಬಂದು ಹಿಡಿ ಅಕ್ಕಿಯನ್ನು ಮೂರು ಬಾರಿ ಪಾತ್ರೆಗೆ ಹಾಕುತ್ತಾರೆ. ಅದರೊಂದಿಗೆ ಬೆಲ್ಲ ಹಾಗೂ ತಮ್ಮ ಕೈಲಾದಷ್ಟು ದಕ್ಷಿಣೆಯನ್ನೂ ನೀಡುತ್ತಾರೆ. ಹೀಗೆ ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸುವ ಪದ್ಧತಿ ನಡೆಯುತ್ತದೆ.
ಕೊನೆಯ ಶ್ರಾವಣ ಶನಿವಾರದ ವಿಶೇಷತೆ
ವೆಂಕಟರಮಣ ಸ್ವಾಮಿ ಅಥವಾ ನರಸಿಂಹ ಸ್ವಾಮಿಯನ್ನು ಮನೆದೇವರಾಗಿ ಆರಾಧಿಸುವ ಕುಟುಂಬಗಳಲ್ಲಿ ಶ್ರಾವಣ ಮಾಸದ ಪ್ರತಿ ಶನಿವಾರ ಕನಿಷ್ಠ ಐದು ಮನೆಗಳಲ್ಲಾದರೂ ಪಡಿ ಬೇಡುವ ಪದ್ಧತಿ ಕೆಲವೆಡೆ ಆಚರಿಸುತ್ತಾರೆ. ಹೀಗೆ ಸಂಗ್ರಹಿಸಿದ ಅಕ್ಕಿ, ಬೆಲ್ಲ ಮತ್ತು ದಕ್ಷಿಣೆಯ ಹಣವನ್ನು ಜೋಪಾನವಾಗಿ ಎತ್ತಿಡುತ್ತಾರೆ. ಕೊನೆಯ ಶ್ರಾವಣ ಶನಿವಾರದಂದು ಸಂಗ್ರಹಿಸಿದ ಅಕ್ಕಿ ಮತ್ತು ಬೆಲ್ಲದಿಂದ ಪಾಯಸ, ಸಿಹಿ ಹುಗ್ಗಿ ಅಥವಾ ಬೆಲ್ಲದ ಅನ್ನವನ್ನು ತಯಾರಿಸಿ ತಮ್ಮ ಮನೆದೇವರಿಗೆ ನೈವೇದ್ಯ ಮಾಡುತ್ತಾರೆ. ನಂತರ ಕುಟುಂಬದ ಸದಸ್ಯರೆಲ್ಲರೂ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ.
ಪಡಿ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಪ್ರತ್ಯೇಕವಾಗಿ ಮುಡಿ ಕಟ್ಟಿ ಇಟ್ಟು, ನಂತರ ತಮ್ಮ ಮನೆದೇವರ ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ದೇವಾಲಯದ ಹುಂಡಿಗೆ ಭಕ್ತಿಯಿಂದ ಸಮರ್ಪಿಸುವ ಪದ್ಧತಿಯೂ ಇದೆ.
ಮಕ್ಕಳಿಗೆ ಪಡಿ ಬೇಡುವುದೇ ಸಾಮಾಜಿಕ ಪಾಠ
ಸಣ್ಣ ಮಕ್ಕಳು ಪಡಿ ಬೇಡಲು ಕೆಲವೊಮ್ಮೆ ಅತ್ತು, ಹಠ ಮಾಡಿ, ಗೋಳಾಡುವುದೂ ಉಂಟು. ಸ್ವಲ್ಪ ದೊಡ್ಡವರಾದ ಮಕ್ಕಳು ಪಡಿ ಬೇಡುವುದಕ್ಕೆ ಸಂಕೋಚ ಪಡುವುದು ಸಹ ಸಾಮಾನ್ಯ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ತಂದೆ ಅಥವಾ ತಾಯಿ ಸಣ್ಣ ಮಕ್ಕಳೊಂದಿಗೆ ಪಡಿ ಬೇಡಲು ಬರುತ್ತಾರೆ. ದೊಡ್ಡ ಮಕ್ಕಳಿಗೆ ತಂದೆ-ತಾಯಿಯ ಒತ್ತಾಯ ಅಥವಾ ಗದರಿಕೆಯಿಂದಾಗಿ ಇಷ್ಟವಿಲ್ಲದಿದ್ದರೂ ಪಡಿ ಬೇಡಲು ಬರುವ ಪರಿಸ್ಥಿತಿಯೂ ಕಂಡುಬರುತ್ತದೆ. ಆದರೆ ಇದರ ಹಿಂದೆ ಒಂದು ಜೀವನಪಾಠವೂ ಇದೆ ಎನ್ನುವುದು ಹಿರಿಯರ ಅಭಿಪ್ರಾಯ.
ಪಡಿ ಬೇಡುವುದರ ಮಹತ್ವವೇನು? ಪಡಿ ಬೇಡುವ ಪದ್ಧತಿ ಮಕ್ಕಳಲ್ಲಿರುವ ಸಂಕೋಚ ಸ್ವಭಾವವನ್ನು ಕಡಿಮೆ ಮಾಡಿ, ಸಮಾಜದಲ್ಲಿ ಬೆರೆಯುವ ಗುಣವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎನ್ನಲಾಗುತ್ತದೆ. ಜೀವನದಲ್ಲಿ ಕಷ್ಟ ಬಂದಾಗ ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ, ಅಗತ್ಯವಿದ್ದರೆ ಮಧುಕರಿವೃತ್ತಿಯ ಮೂಲಕವಾದರೂ ಬದುಕನ್ನು ಸಾಗಿಸಬಹುದು ಎಂಬ ಮನೋಭಾವವನ್ನು ಕಲಿಸುವುದೂ ಇದರ ಉದ್ದೇಶಗಳಲ್ಲಿ ಒಂದು ಎಂದು ಹಿರಿಯರು ಹೇಳುತ್ತಾರೆ.
ಮತ್ತೊಬ್ಬರ ಮನೆಯ ಮುಂದೆ ನಿಂತು ಪಡಿ ಕೇಳುವ ಅನುಭವ ಮಕ್ಕಳಲ್ಲಿನ ಅಹಂಕಾರವನ್ನು ಕಡಿಮೆ ಮಾಡಿ, ತಾವು ತಿನ್ನುವ ಅನ್ನದ ಹಿಂದೆ ಇರುವ ಶ್ರಮ ಮತ್ತು ಸಂಪಾದನೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಮತ್ತೊಬ್ಬರ ಮುಂದೆ ತಗ್ಗಿ-ಬಗ್ಗಿ ನಡೆದುಕೊಳ್ಳುವುದು ಅವಮಾನವಲ್ಲ; ಅಗತ್ಯದ ಸಂದರ್ಭದಲ್ಲಿ ವಿನಯದಿಂದ ಬದುಕುವುದೂ ಜೀವನದ ಒಂದು ಭಾಗ ಎಂಬ ಅರಿವನ್ನು ಮೂಡಿಸುತ್ತದೆ.
ಅದೇ ರೀತಿ, ನೆರೆಹೊರೆಯವರಿಂದ ದವಸ-ಧಾನ್ಯ ಸ್ವೀಕರಿಸುವುದರ ಮೂಲಕ ಕೊಡುವವರಿಗೂ, ಪಡೆಯುವವರಿಗೂ ಪರಸ್ಪರ ಸಹಕಾರ ಮತ್ತು ಹಂಚಿಕೊಳ್ಳುವ ಮನೋಭಾವ ಬೆಳೆಯುತ್ತದೆ.
ಮೂರು ಬಾರಿ ಅಕ್ಕಿ ಹಾಕುವುದರ ಹಿಂದಿನ ನಂಬಿಕೆ ಪಡಿ ಕೇಳಿದಾಗ ಮನೆಯ ಒಡತಿ ಮೂರು ಬಾರಿ ಅಕ್ಕಿ ಹಾಕುವುದು ಕೂಡ ಒಂದು ಸಂಕೇತವೆಂದು ಹಿರಿಯರು ವಿವರಿಸುತ್ತಾರೆ. ಕೊನೆಯಲ್ಲಿ ಪಡಿ ಬೇಡುವವರ ಪಾತ್ರೆಯಿಂದ ಕೆಲವು ಅಕ್ಕಿಕಾಳುಗಳನ್ನು ತಮ್ಮ ಪಾತ್ರೆಗೆ ಹಾಕಿಕೊಳ್ಳುವ ಪದ್ಧತಿಯೂ ಕೆಲವೆಡೆ ಇದೆ. ಹೀಗೆ ಮಾಡುವುದರಿಂದ ತಮ್ಮ ಮನೆಯಲ್ಲಿ ಧನ-ಧಾನ್ಯಗಳು ಸದಾ ಅಕ್ಷಯವಾಗಿರಲಿ, ಅನ್ನದ ಕೊರತೆ ಉಂಟಾಗದಿರಲಿ ಎಂಬ ಶುಭ ಹಾರೈಕೆಯ ಸಂಕೇತವಿದೆ ಎಂಬ ನಂಬಿಕೆ ಇದೆ. ಇದು ಧಾರ್ಮಿಕ ವಿಧಿಯಷ್ಟೇ ಅಲ್ಲದೆ, ‘ನಮ್ಮ ಮನೆಯಲ್ಲಿ ಇರುವುದನ್ನು ಹಂಚಿಕೊಂಡರೆ ದೇವರು ನಮ್ಮ ಮನೆಯನ್ನು ಇನ್ನಷ್ಟು ಸಮೃದ್ಧಗೊಳಿಸುತ್ತಾನೆ’ ಎಂಬ ಜನಪದ ನಂಬಿಕೆಯ ಪ್ರತೀಕವೂ ಆಗಿದೆ.
ಮನೆದೇವರ ದರ್ಶನಕ್ಕೆ ಪ್ರೇರಣೆ
ಪಡಿ ಬೇಡುವಾಗ ಸಂಗ್ರಹಿಸಿದ ಹಣವನ್ನು ಮನೆದೇವರಿಗೆ ಸಮರ್ಪಿಸುವ ಪದ್ಧತಿಯ ಹಿಂದೆ ಮತ್ತೊಂದು ಉದ್ದೇಶವೂ ಇದೆ ಎನ್ನಲಾಗುತ್ತದೆ. ವರ್ಷಕ್ಕೊಮ್ಮೆಯಾದರೂ ತಮ್ಮ ಮನೆದೇವರ ದೇವಾಲಯಕ್ಕೆ ತೆರಳಿ ದರ್ಶನ ಪಡೆದು, ಭಕ್ತಿಯಿಂದ ಕಾಣಿಕೆ ಸಲ್ಲಿಸುವಂತೆ ಕುಟುಂಬದ ಸದಸ್ಯರನ್ನು ಪ್ರೇರೇಪಿಸುವುದು ಈ ಆಚರಣೆಯ ಒಂದು ಭಾಗವಾಗಿದೆ.
ವೈಷ್ಣವರಿಗೆ ಶ್ರಾವಣ, ಶೈವರಿಗೆ ಕಾರ್ತೀಕ
ಸಾಮಾನ್ಯವಾಗಿ ವೈಷ್ಣವ ಸಂಪ್ರದಾಯಸ್ಥರಿಗೆ ಶ್ರಾವಣ ಮಾಸ ಬಹಳ ಪ್ರಮುಖವಾದರೆ, ಶಿವನ ಆರಾಧಕರಿಗೆ ಕಾರ್ತೀಕ ಮಾಸಕ್ಕೆ ವಿಶೇಷ ಮಹತ್ವವಿದೆ. ‘ತಿರುಪತಿ ತಿಮ್ಮಪ್ಪ ಸಾಲಗಾರ’ ಎಂಬುದು ಜನಪ್ರಚಲಿತ ನಂಬಿಕೆ. ಶ್ರೀ ವೆಂಕಟೇಶ್ವರನು ಕುಬೇರನಿಂದ ಸಾಲ ಪಡೆದಿದ್ದು, ಕಲಿಯುಗದ ಅಂತ್ಯದವರೆಗೆ ಆ ಸಾಲವನ್ನು ತೀರಿಸುತ್ತಾನೆ ಎಂಬ ಜನಮಾಸದಲ್ಲಿ ಇರುವ ಪೌರಾಣಿಕ ನಂಬಿಕೆ. ಈ ಹಿನ್ನೆಲೆಯಲ್ಲಿ ವಿಷ್ಣುವಿನ ಆರಾಧಕರು ಶ್ರಾವಣ ಮಾಸದಲ್ಲಿ ಪಡಿ ಬೇಡಿ ಸಂಗ್ರಹಿಸಿದ ಹಣವನ್ನು ತಿರುಪತಿ ವೆಂಕಟೇಶ್ವರನ ಹುಂಡಿಗೆ ಸಮರ್ಪಿಸುವ ಮೂಲಕ ತಿಮ್ಮಪ್ಪನ ಸಂಪತ್ತಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತೇವೆ ಎಂಬ ಭಾವನೆ ಹೊಂದಿದ್ದಾರೆ.
ಶ್ರಾವಣದಲ್ಲಿಯೇ ಏಕೆ ಪಡಿ?
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ನಾಗರ ಪಂಚಮಿ, ವರಮಹಾಲಕ್ಷ್ಮೀ ವ್ರತ, ಕೃಷ್ಣಾಷ್ಟಮಿ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ಈ ಮಾಸದಲ್ಲಿ ನಡೆಯುತ್ತವೆ. ಈ ಮಾಸದಲ್ಲಿ ದಾನ-ಧರ್ಮ ಮಾಡಿದರೆ ಹೆಚ್ಚಿನ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಮತ್ತೊಂದೆಡೆ, ಗುರುಕುಲ ಪದ್ಧತಿಯ ಕಾಲದಲ್ಲಿ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮಧುಕರಿ ಮೂಲಕ ಸಂಗ್ರಹಿಸುತ್ತಿದ್ದ ದವಸ-ಧಾನ್ಯಗಳಿಂದ ಗುರುಕುಲದಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸುತ್ತಿದ್ದರು ಎಂಬ ಪರಂಪರೆಯೂ ಈ ಆಚರಣೆಯ ಹಿನ್ನೆಲೆಯೊಂದಿಗೆ ಜೋಡಿಸಿಕೊಂಡಿದೆ. ಹೀಗಾಗಿ ಶ್ರಾವಣ ಮಾಸದ ಶನಿವಾರದಂದು ಪಡಿ ಬೇಡುವ ಪದ್ಧತಿ ಯಾವ ಕಾಲದಲ್ಲಿ ನಿಖರವಾಗಿ ಆರಂಭವಾಯಿತು ಎಂಬುದಕ್ಕೆ ಒಂದೇ ಒಂದು ಖಚಿತವಾದ ಉತ್ತರ ಇಲ್ಲದಿದ್ದರೂ, ಭಕ್ತಿ, ದಾನ, ಅನ್ನದ ಮಹತ್ವ, ವಿನಯ, ಸಾಮಾಜಿಕ ಸಹಕಾರ ಮತ್ತು ದೇವರ ಸೇವೆ—ಇವೆಲ್ಲವನ್ನೂ ಒಂದೇ ಆಚರಣೆಯಲ್ಲಿ ಬೆಸೆಯುವ ಉದ್ದೇಶದಿಂದ ಈ ಪದ್ಧತಿ ಬೆಳೆದು ಬಂದಿರಬಹುದು ಎಂಬುದು ಧಾರ್ಮಿಕ ಚಿಂತಕರ ಅಭಿಪ್ರಾಯ.
ಇಂದಿನ ಆಧುನಿಕ ಜೀವನದಲ್ಲಿ ಮನೆ ಮನೆಗೆ ತೆರಳಿ ಪಡಿ ಬೇಡುವ ಪದ್ಧತಿ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಅದರ ಹಿಂದಿರುವ ಸಂದೇಶ ಮಾತ್ರ ಇಂದಿಗೂ ಪ್ರಸ್ತುತ.
‘ಅನ್ನವನ್ನು ಗೌರವಿಸು, ಇದ್ದುದನ್ನು ಹಂಚಿಕೊ, ಅಹಂಕಾರ ತೊರೆ, ಸಮಾಜದೊಂದಿಗೆ ಬೆರೆತು ಬಾಳು, ದೇವರಿಗೆ ಕೃತಜ್ಞತೆ ಸಲ್ಲಿಸು’—ಎಂಬ ಜೀವನಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಒಂದು ಸರಳವಾದ ಜನಪದ ಸಂಪ್ರದಾಯವೇ ಶ್ರಾವಣ ಶನಿವಾರದ ‘ಪಡಿ’ ಎಂದು ಹಿರಿಯರು ಹೇಳುತ್ತಾರೆ.



