ಚಿಂತಾಮಣಿ:ಕೋಲಾರ ಅವಿಭಿಜಿತ ಜಿಲ್ಲೆಯ ವಾಣಿಜ್ಯ ನಗರ ಚಿಂತಾಮಣಿಯ ಹೃದಯ ಭಾಗ ಎಂದೇ ಕರೆಯಬಹುದಾದ ಅಜಾದ್ ಚೌಕ ಹಳೇ ಊರಿನ ಹೆಮ್ಮೆಯ ಐಕಾನ್. ಇದೀಗ ಹೊಸ ರೂಪದ ವೈಭವ ತರಲಾಗಿದ್ದು, ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ. ಚೌಕದ ವಿನ್ಯಾಸದಿಂದ ಬಾಹುಬಲಿ ಸಿನಿಮಾದ ದೃಶ್ಯ ವೈಭವದಂತೆ ಕಲ್ಪಿತ ಪ್ರಾಚೀನ ನಗರ ಮಾಹಿಷ್ಮತಿ ಸಾಮ್ರಾಜ್ಯದ ಭವ್ಯ ವಾಸ್ತುಶಿಲ್ಪವನ್ನು ನೆನಪಿಸುವ ರೀತಿಯಲ್ಲಿ ಅಜಾದ್ ಚೌಕವನ್ನು ವಿನ್ಯಾಸ ಮಾಡಲಾಗಿದೆ.
ಚಿಂತಾಮಣಿಯ ಹೃದಯ ಭಾಗ ಅಜಾದ್ ಚೌಕ ಹೊಸ ರೂಪದಲ್ಲಿ ಕಾಣುತ್ತಿದೆ. ಯುರೋಪಿಯನ್ ನಗರಗಳ ಪ್ರಾಚೀನ ವಾಸ್ತುಶಿಲ್ಪವನ್ನು ನೆನಪಿಸುವ ವಿನ್ಯಾಸದೊಂದಿಗೆ ‘ಬಾಹುಬಲಿ’ ಸಿನಿಮಾದ ಭವ್ಯತೆಯ ಸ್ಪರ್ಶ ನೀಡಲಾಗಿದೆ. ಅಜಾದ್ ಚೌಕದ ಸುತ್ತಮುತ್ತಲಿನ ಪ್ರದೇಶಕ್ಕೆ ತನ್ನದೇ ಆದ ಐತಿಹಾಸಿಕ ಹಾಗೂ ವಾಣಿಜ್ಯ ಹಿನ್ನೆಲೆಯಿದೆ. ಪುರಾತನ ಹರಿಹರೇಶ್ವರ ದೇವಾಲಯ, ಹಳೆಯ ಕಾಲದ ಕಟ್ಟಡಗಳು, ಅಲ್ಲಿನ ಬಂಗಾರದ ಅಂಗಡಿಗಳು ಸಿಹಿ ತಿನಿಸಿನ ಸ್ಟಾಲಗಳು ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಹುರಿಗಾಳು–ಶ್ರೀರಾಮಯ್ಯ ಅಂಗಡಿ, ಹಲವು ವರ್ಷಗಳಿಂದ ಜನಪ್ರಿಯವಾಗಿರುವ ತಿಂಡಿ ಹೋಟೆಲ್ಗಳು ಹಾಗೂ ಸಂಜೆ ವೇಳೆ ಚೌಕದ ಸುತ್ತಮುತ್ತ ಸಾಲುಗಟ್ಟಿ ನಿಲ್ಲುವ ತಿಂಡಿ ಬಂಡಿಗಳು ಅಜಾದ್ ಚೌಕದ ವಿಶೇಷಗಳು ಈ ವಿಶೇಷಗಳ ನಡುವಿನ ಆಜಾದ್ ಚೌಕಕ್ಕೆ ಹೊಸ ರೂಪ ಕೊಡಲಾಗಿದೆ.
ನಾಲಿಗೆಗೆ ರುಚಿ ನೀಡುತ್ತಿದ್ದ ಚೌಕದಲ್ಲಿ ಕಲಾತ್ಮಕ ಕಲ್ಲಿನ ವೈಭವ
ಈ ಪಾರಂಪರಿಕ ವಾತಾವರಣಕ್ಕೆ ಇದೀಗ ಆಧುನಿಕ ವಿನ್ಯಾಸ ಕಲ್ಪಿಸಲಾಗಿದೆ ಪರಿಣಾಮ ಚೌಕದ ರಸ್ತೆಗೆ ಕಲ್ಲುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದ್ದು, ಯುರೋಪಿಯನ್ ಶೈಲಿಯ ಪ್ರಾಚೀನ ರಸ್ತೆಗಳನ್ನು ನೆನಪಿಸುವ ರೀತಿಯಲ್ಲಿ ರೂಪಿಸಲಾಗಿದೆ. ಸಾರ್ವಜನಿಕರು ಕುಳಿತು ವಿಶ್ರಾಂತಿ ಪಡೆಯಲು ಗ್ರಾನೈಟ್ ಜಗಲಿಗಳು, ಮಕ್ಕಳು ಸಮಯ ಕಳೆಯಲು ಕಲ್ಲಿನ ಉಯ್ಯಾಲೆ ಹಾಗೂ ಬೌಲ್ಡರಿಂಗ್ ವಾಲ್ (Bouldering Wall) ಅಳವಡಿಸಲಾಗಿದೆ. ಮಕ್ಕಳಿಗೆ ನೀತಿ ಪಾಠವನ್ನು ಸರಳವಾಗಿ ತಿಳಿಸಿಕೊಡುವ ಉದ್ದೇಶದಿಂದ, ಮಹಾತ್ಮ ಗಾಂಧೀಜಿ ಮೆಚ್ಚಿದ್ದ ಮೂರು ಬುದ್ಧಿವಂತ ಕೋತಿಗಳ ನೈತಿಕ ಸಂದೇಶವನ್ನು ಸಾರುವ ‘ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಮೂರು ಸಂದೇಶಗಳನ್ನು ಸಾರುವ ಪ್ರತಿಮೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ತಾಯಿ ಮಮತೆ ಹಾಗೂ ಕರುಣೆಯ ಭಾವನೆಯನ್ನು ಸಾರುವಂತ ಸುಂದರ ಕಲ್ಲಿನ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನೋಡುಗರ ಮನಸೆಳೆಯುತ್ತಿದೆ. ಕಲಾತ್ಮಕ ಕಲ್ಲಿನ ವೈಭವದ ನಡುವೆ, ಬಿಸಿಲಿನ ಝಳವನ್ನು ತಡೆದು ಬರುವಂತವರಿಗೆ ತಂಪಿನ ಅನುಭವ ನೀಡುವ ಉದ್ದೇಶದಿಂದ ವಿವಿಧ ಬಗೆಯ ದೊಡ್ಡ ಗಾತ್ರದ ಗಿಡಗಳನ್ನು ನೆಡಲಾಗಿದೆ. ಹಸಿರು ಸಸ್ಯಗಳು ಕಲ್ಲಿನ ವಿನ್ಯಾಸಕ್ಕೆ ನೈಸರ್ಗಿಕ ಸೊಬಗು ಬೆರೆಸಿದಂತಾಗಿದೆ.
‘ಅಜಾದ್ ಚೌಕ’ ಹೆಸರು ಹೊತ್ತ ಕಲಾತ್ಮಕ ಕಂಬಗಳು
ಬೃಹದಾಕಾರದ ಆಕರ್ಷಕ ಕಂಬಗಳನ್ನು ಸ್ಥಾಪಿಸಿ, ಅದರ ಮೇಲ್ಭಾಗದಲ್ಲಿ ‘ಅಜಾದ್ ಚೌಕ’ ಎಂಬ ಹೆಸರನ್ನು ಕಲಾತ್ಮಕವಾಗಿ ಅಳವಡಿಸಿರುವುದು ಚೌಕದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ದೂರದಿಂದಲೇ ಗಮನ ಸೆಳೆಯುವ ಈ ಕಂಬಗಳು ಅಜಾದ್ ಚೌಕದ ಹೊಸ ವಿನ್ಯಾಸಕ್ಕೆ ವಿಶಿಷ್ಟ ಮೆರುಗು ನೀಡಿತ್ತಿದೆ. ಅಜಾದ್ ಚೌಕ ಮದ್ಯೆ ಕಂಗೊಳಿಸುವ ದೀಪದ ಕಂಬಗಳು ಅಜಾದ್ ಚೌಕದ ರಾತ್ರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಲ್ಲಿನ ಬೃಹತ್ ಎಲ್ಇಡಿ ಪರದೆ ಅಜಾದ್ ಚೌಕದ ರಾತ್ರಿಗೆ ಆಕರ್ಷಣೆಯಾಗಿದೆ.
ಅಜಾದ್ ಚೌಕದಲ್ಲಿ ಇದುವರೆಗೆ ನಾಲಿಗೆಗೆ ರುಚಿ ಸೀಗುವ ತಿನಿಸುಗಳಿಂದ ಪ್ರಸಿದ್ಧವಾಗಿತ್ತು ಇದೀಗ ತನ್ನ ಹೊಸ ರೂಪದಿಂದ ಕಣ್ಣಿಗೂ ಹಬ್ಬ ಸೃಷ್ಟಿಸುತ್ತಿದೆ. ಅಜಾದ್ ಚೌಕವನ್ನು ಆಕರ್ಷಕ ವಾಸ್ತುಶಿಲ್ಪಗಳಿಂದ ಅಲಂಕರಿಸಲಾಗಿದೆ. ತಿಂಡಿ ಸವಿಯಲು ಕುಟುಂಬ ಸಮೇತರಾಗಿ ಅಗಮಿಸುವಂತ ಸಾರ್ವಜನಿಕರು ತಿಂಡಿ ಸವಿಯುತ್ತ ಕಲ್ಲಿನ ವಿನ್ಯಾಸದ ಸೌಂದರ್ಯ ಸವಿಯಲು ವಾತಾವರಣವನ್ನು ಸೃಷ್ಟಿಸಲಾಗಿದ್ದು ವೃತ್ತಕ್ಕೆ ಹೊಸ ರೂಪ ಸಿಕ್ಕಂತಾಗಿದೆ.





ಆದರೆ ಹೊಸ ರೂಪ, ಹೊಸ ಕಳೆ ಬಂದಿದ್ದರೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸುವ ಸಂದರ್ಭದಲ್ಲಿ ಅಜಾದ್ ಚೌಕದ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆ ಆಗಬಹುದು ಎನ್ನುವ ಮಾತು ಕೇಳಿಬರುತ್ತಿದೆ ವಾಹನ ಸಂಚಾರವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು ಕುತೂಹಲದ ಪ್ರಶ್ನೆ!



