ಸರ್ಕಾರಿ ಬಸ್ಗಳಲ್ಲಿ ಸೀಟು ಹಿಡಿಯುವ ವಿಚಾರವಾಗಿ ಮಹಿಳಾ ಪ್ರಯಾಣಿಕರ ನಡುವೆ ಹಾಗೂ ಮಹಿಳಾ ಪ್ರಯಾಣಿಕರು ಮತ್ತು ಬಸ್ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು KSRTC ಬಸ್ಸುಗಳಲ್ಲಿ ಸಾಮನ್ಯ ಎನ್ನಬಹುದು.
ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ, ಸೀಟುಗಳಿಗಾಗಿ ಪೈಪೋಟಿ ಉಂಟಾಗಿ ಮಹಿಳೆಯರ ನಡುವೆ ಜಗಳ ನಡೆಯುತ್ತ ಗೊಂದಲ ಉಂಟಾಗಿ ಕೆಲವೊಮ್ಮೆ ವಾಗ್ವಾದಕ್ಕೆ ಕಾರಣವಾಗುತ್ತವೆ.ಇಳಿಯುವ ನಿಲ್ದಾಣ ಬಂದಾಗ ಜಗಳ-ಗಿಗಳ ಅಲ್ಲಿಗೇ ಬಿಟ್ಟು ತಮ್ಮ ದಾರಿಯಲ್ಲಿ ಹೊರಟು ಹೋಗುತ್ತಾರೆ ಇದು ನಮ್ಮ ರಾಜ್ಯದ ಸಾರಿಗೆಯಲ್ಲಿ ಉಚಿತ ಪ್ರಯಾಣದ ಆರಂಭದ ದಿನಗಳಲ್ಲಿ ಸಾಮಾನ್ಯ. ವಾಗಿತ್ತು ಈಗ ಪ್ರಯಾಣದ ಅನುಭವ ಪಡೆದ ಮಹಿಳೆಯರು ಸದ್ದುಗದ್ದಲ ಇಲ್ಲದೆ ಪ್ರಯಾಣಿಸುತ್ತಿದ್ದಾರೆ.ಆದರೆ ಆಂಧ್ರಪ್ರದೇಶದಲ್ಲಿ ನಡೆದಿರುವ ಘಟನೆ ಮಾತ್ರ ಕೇಳಲು ವಿಚಿತ್ರವಾಗಿದ್ದು, ಮಹಿಳೆಯರು ಮಾರಣಾಂತಿಕವಾಗಿ ಹಲ್ಲೆಗೊಳಗಾದ ಆಘಾತಕಾರಿ ಘಟನೆ ನಡೆದಿದೆ. ಆತಂಕ ಮೂಡಿಸುವಂತೆ ನಡೆದ ಘಟನೆಯಿಂದ ಅಮಾಯಕ ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬುದು ನಿಜಕ್ಕೂ ಕಳವಳಕಾರಿ ಸಂಗತಿ. ಕ್ಷುಲ್ಲಕ ವಿಚಾರವೊಂದು ವಿಕೋಪಕ್ಕೆ ತಿರುಗಿ ಇತರರ ಜೀವಕ್ಕೆ ಅಪಾಯ ಉಂಟುಮಾಡುವುದು ಎಷ್ಟರಮಟ್ಟಿಗೆ ಸಮಂಜಸ?
ನ್ಯೂಜ್ ಡೆಸ್ಕ್: ಸರ್ಕಾರಿ ಬಸ್ಸಿನಲ್ಲಿ ಸೀಟಿಗಾಗಿ ಆರಂಭವಾದ ಕಿತ್ತಾಟ ಕೊನೆಗೆ ಬಾಡಿಗೆ ರೌಡಿಗಳಿಂದ ಸಹ ಪ್ರಯಾಣಿಕ ಮಹಿಳೆಯರು ಒದೆ ತಿಂದ ಘಟನೆ ಆಂಧ್ರದ ರಾಜಮಂಡ್ರಿ ಬಳಿ ನಡೆದಿದೆ. ತುನಿಯಿಂದ ರಾಜಮಂಡ್ರಿಗೆ ತೆರಳುತ್ತಿದ್ದ ಎಪಿಆರ್ಟಿಸಿ (APSRTC) ಬಸ್ನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ರಾಜಮಂಡ್ರಿಗೆ ತೆರಳುತ್ತಿದ್ದ ಸಿರಿಪುರಂ ಗ್ರಾಮದ ಮಹಿಳೆಯೊಬ್ಬಳು ಕುಳಿತುಕೊಳ್ಳಲು ಸಹ ಪ್ರಯಾಣಿಕ ಮಹಿಳೆಯರೊಂದಿಗೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಿದ್ದು ಸಿರಿಪುರಂ ಮಹಿಳೆ ತನ್ನ ಪತಿಗೆ ಫೋನ್ ಮಾಡಿ ಬಸ್ನಲ್ಲಿ ತನ್ನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾಳೆ.
ಪತ್ನಿಯ ಮಾತು ಕೇಳಿ ಪಟಾಲಂನೊಂದಿಗೆ ಬಂದ ಪತಿ
ಪತ್ನಿಯ ಮಾತನ್ನು ಕೇಳಿ ಆವೇಶಗೋಂಡ ಪತಿ, ತನ್ನ ಗ್ರಾಮದ ಯುವಕರ ಪಟಾಲಂನೊಂದಿಗೆ ಚಿನ್ನಂಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಂತು ಪತ್ನಿ ಪ್ರಯಾಣಿಸುತ್ತ ಬಂದ ಬಸ್ಗಾಗಿ ಕಾಯುತ್ತಿದ್ದ. ಬಸ್ ಚಿನ್ನಂಪೇಟೆಗೆ ತಲುಪುತ್ತಿದ್ದಂತೆ ಪಟಾಲಂ ಏಕಾಏಕಿ ಬಸ್ ಒಳಗೆ ನುಗ್ಗಿದೆ. ಜಗಳವಾಡಿದ ರಾಜಮಂಡ್ರಿಯ ಮಹಿಳೆಯರು ಮತ್ತು ಅವರೊಂದಿಗಿದ್ದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ರಾಡ್, ದೊಣ್ಣೆಗಳಿಂದ ಮನಬಂದಂತೆ ಬಡಿದಿದ್ದಾರೆ. ಬಸ್ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ಮಹಿಳೆಯರ ಚೀರಾಟ, ಆಕ್ರಂದನ ಹೆದ್ದಾರಿಯಲ್ಲಿ ಕೇಳಿಬಂದಿದೆ.
ಮದ್ಯ ಗಾಂಜ ವೆಸನಿಗಳಿಂದ ಹಲ್ಲೆ
ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ದಾಳಿ ನಡೆಸಿದ ವ್ಯಕ್ತಿಗಳಲ್ಲಿ ಹಲವರು ಮದ್ಯ ಮತ್ತು ಗಾಂಜಾದಂತಹ ಅಮಲು ಪದಾರ್ಥಗಳನ್ನು ಸೇವಿಸಿದ್ದರು ಎಂದು ಸಂತ್ರಸ್ತರು ಗಂಭೀರವಾಗಿ ಆರೋಪಿಸಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು ತುರ್ತು ಸಹಾಯವಾಣಿ ‘112’ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳೀಯ ಯಲೇಶ್ವರಂ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿ ನಡೆಸಿದ ಮಹಿಳೆ, ಆಕೆಯ ಪತಿ ಹಾಗೂ ಪುಂಡರ ಗ್ಯಾಂಗ್ ಸ್ಥಳದಿಂದ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ತಕ್ಷಣವೇ ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಯಲೇಶ್ವರಂ ಪೊಲೀಸರು ಕೊಲೆಯತ್ನ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಗಲಭೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆದ್ದಾರಿಯ ಟೋಲ್ ಗೇಟ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಸಿರಿಪುರಂ ಮೂಲದ ದಂಪತಿ ಹಾಗೂ ದಾಳಿಕೋರ ಯುವಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.



