- ಸುಪ್ರೀಂ ಕೋರ್ಟ್ ಆದೇಶದಂತೆ ದೀಪಸ್ತಂಭದ ಮೇಲೆ ದೀಪ ಬೆಳಗಲು ವಿಫಲ
- ದೇವಸ್ಥಾನ ಆಡಳಿತ ಮಂಡಳಿ ನಿರ್ಧಾರ ಇದಕ್ಕೆ ಕಾರಣ ಜಿಲ್ಲಾಧಿಕಾರಿ
- ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯ ಸೂಚನೆ
ನ್ಯೂಜ್ ಡೆಸ್ಕ್:ತಮಿಳುನಾಡಿನ ಮಧುರೈ ಜಿಲ್ಲೆಯ ಪ್ರಸಿದ್ಧ ಸುಬ್ರಮಣ್ಯ(ಮುರುಗನ್) ದೇವಾಲಯ ಇರುವ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ‘ದೀಪತೂನ್’ (Deepathoon) ದೀಪ ಬೆಳಗುವ/ಹಚ್ಚುವ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಜಾರಿಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಹಾಗೂ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಸುಪ್ರೀಂ ಕೋರ್ಟ್ನಲ್ಲಿ ತಪ್ಪೊಪ್ಪಿಕೂಂಡು ಬೇಷರತ್ ಕ್ಷಮೆಯಾಚಿಸಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ನವೆಂಬರ್ 24ರಂದು ದೀಪತೂನ್ನಲ್ಲಿ ದೀಪ ಬೆಳಗದಿರುವುದು ರಾಜ್ಯಾದ್ಯಂತ ರಾಜಕೀಯ, ಧಾರ್ಮಿಕ ಹಾಗೂ ಕಾನೂನು ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನ್ಯಾಯಾಲಯಕ್ಕೆ ಪ್ರಾಥಮಿಕ ಸ್ಥಿತಿಗತಿ ವರದಿ ಸಲ್ಲಿಸಿ, ಘಟನೆಗೆ ಸಂಬಂಧಿಸಿದ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಮಧುರೈ ಬಳಿ ಇರುವ ತಿರುಪ್ಪರಂಕುಂದ್ರಂ ಬೆಟ್ಟವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ನೆಲೆಗೊಂಡಿರುವ ಅರುಳ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪ ಮಹೋತ್ಸವವನ್ನು ಆಚರಿಸಲಾಗುತ್ತದೆ.
ದೇವಸ್ಥಾನದ ಸಾಂಪ್ರದಾಯಿಕ ದೀಪ ಬೆಳಗಿಸುವ ಸ್ಥಳ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಸಮೀಪದಲ್ಲಿರುವ ದೀಪ ಮಂಟಪವಾಗಿದೆ. ಆದರೆ ಬೆಟ್ಟದ ಮೇಲಿರುವ ದರ್ಗಾದ ಸಮೀಪದ ಪುರಾತನ ಕಲ್ಲಿನ ಕಂಬವಾದ ‘ದೀಪತೂನ್’ನಲ್ಲಿಯೂ ಕಾರ್ತಿಕ ದೀಪ ಬೆಳಗಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಧಾರ್ಮಿಕ ಆಚರಣೆ, ಸ್ಥಳದ ಹಕ್ಕು, ದೇವಸ್ಥಾನದ ಸಂಪ್ರದಾಯ ಹಾಗೂ ಆಡಳಿತಾತ್ಮಕ ಅಧಿಕಾರಗಳ ಕುರಿತು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ
ಈ ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್ 20ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಮಹತ್ವದ ಮಧ್ಯಂತರ ಆದೇಶ ನೀಡಿತು.
ಅದರಂತೆ, ನವೆಂಬರ್ 24ರಂದು ದೀಪತೂನ್ನಲ್ಲಿ ಒಂದು ಬಾರಿಗೆ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಲಾಯಿತು.
ಆದರೆ ಈ ಆಚರಣೆಯನ್ನು ದೇವಸ್ಥಾನದ ಆಡಳಿತ ಮಂಡಳಿ (ದೇವಸ್ಥಾನ ಆಡಳಿತ) ಅಧಿಕೃತವಾಗಿ ಅನುಮೋದಿಸಿದ ಸೀಮಿತ ತಂಡದ ಮೂಲಕವೇ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು. ಜಿಲ್ಲಾಧಿಕಾರಿಯವರು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮತ್ತು ಮಧುರೈ ಪೊಲೀಸ್ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಸೂಚಿಸಿತ್ತು.
ದೇವಸ್ಥಾನದ ಆಡಳಿತ ಮಂಡಳಿ ಕಡೆ ಕೈ ತೊರಿಸಿ ಸಮಜಾಯಿಸಿ ನೀಡಿದ ಸರ್ಕಾರ
ಸುಪ್ರೀಂ ಕೋರ್ಟ್ ಆದೇಶದಂತೆ ನವೆಂಬರ್ 24ರಂದು ದೀಪತೂನ್ನಲ್ಲಿ ದೀಪ ಬೆಳಗಬೇಕಾಗಿತ್ತು. ಜಿಲ್ಲಾಡಳಿತ ಪೊಲೀಸ್ ಭದ್ರತೆ, ದೀಪ ಬೆಳಗಿಸುವ ತಂಡದ ರಚನೆ, ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ಹೇಳಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿಯು ದೀಪತೂನ್ನಲ್ಲಿ ದೀಪ ಬೆಳಗಿಸಲು ಉದ್ದೇಶಿಸಿದ್ದ ತಂಡಕ್ಕೆ ಅಧಿಕೃತ ಅನುಮೋದನೆ ನೀಡಲಿಲ್ಲ. ಬದಲಾಗಿ, ಪಾರಂಪರಿಕವಾಗಿ ದೀಪ ಬೆಳಗಿಸುವ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಸಮೀಪದ ದೀಪ ಮಂಟಪದಲ್ಲಿಯೇ ಈ ಬಾರಿಯೂ ಮಹಾದೀಪ ಬೆಳಗಿಸಲು ನಿರ್ಣಯ ಕೈಗೊಂಡಿತು.ಅದರಂತೆ ನವೆಂಬರ್ 24ರ ಸಂಜೆ ಸುಮಾರು 6 ಗಂಟೆಗೆ ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಬೆಳಗಿಸಲಾಯಿತು. ಆದರೆ ವಿವಾದಿತ ದೀಪತೂನ್ ಕಂಬದಲ್ಲಿ ದೀಪ ಬೆಳಗಲೇ ಇಲ್ಲ.
ಸುಪ್ರೀಂ ಕೋರ್ಟ್ನಲ್ಲಿ ಬೇಷರತ್ ಕ್ಷಮೆಯಾಚನೆ
ದೀಪತೂನ್ನಲ್ಲಿ ದೀಪ ಬೆಳಗದ ಬೆಳವಣಿಗೆಯ ಕುರಿತು ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಸುಪ್ರೀಂ ಕೋರ್ಟ್ಗೆ ಪ್ರಾಥಮಿಕ ಸ್ಥಿತಿಗತಿ ವರದಿ ಸಲ್ಲಿಸಿದರು.ವರದಿಯಲ್ಲಿ, ನ್ಯಾಯಾಲಯದ ಆದೇಶ ಪಾಲಿಸಲು ಜಿಲ್ಲಾಡಳಿತ ಪ್ರಾಮಾಣಿಕವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಉದ್ದೇಶಿತ ತಂಡಕ್ಕೆ ಅನುಮೋದನೆ ನೀಡದ ಕಾರಣ ದೀಪ ಬೆಳಗಿಸಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯ ಅನುಮೋದನೆ ಇಲ್ಲದೆ ಜಿಲ್ಲಾಡಳಿತವು ಸ್ವತಃ ವ್ಯಕ್ತಿಗಳನ್ನು ನೇಮಿಸಿ ದೀಪ ಬೆಳಗಿಸಲು ಅಧಿಕಾರ ಹೊಂದಿರಲಿಲ್ಲ ಎಂಬುದು ಜಿಲ್ಲಾಧಿಕಾರಿಯ ಪ್ರಮುಖ ಸಮಜಾಯಿಷಿಯಾಗಿದೆ.
ದೀಪತೂನ್ನಲ್ಲಿ ದೀಪ ಬೆಳಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಬೇಷರತ್ ಕ್ಷಮೆಯಾಚಿಸಿದ ಅವರು, ನ್ಯಾಯಾಲಯದ ಆದೇಶಗಳನ್ನು ಗೌರವಿಸುವುದಾಗಿ ಹಾಗೂ ಹೆಚ್ಚುವರಿ ದಾಖಲೆಗಳೊಂದಿಗೆ ಮತ್ತೊಂದು ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಆದರೆ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ ಎಂಬುದನ್ನೂ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲ್ ಸುಪ್ರೀಂ ಸೂಚನೆ
ನವೆಂಬರ್ 25ರಂದು ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಆದರೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿ, ಅಗತ್ಯವಿದ್ದರೆ ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ಅಂತಹ ಅರ್ಜಿ ಸಲ್ಲಿಕೆಯಾದರೆ ಪರಿಶೀಲಿಸಿ ಸೂಕ್ತ ಆದೇಶ ನೀಡುವುದಾಗಿ ತಿಳಿಸಿತು.
ಮುಖ್ಯ ಪ್ರಕರಣದ ಅಂತಿಮ ವಿಚಾರಣೆಯನ್ನು 2027ರ ಜನವರಿಯಲ್ಲಿ ನಡೆಸಲು ನ್ಯಾಯಾಲಯ ನಿಗದಿಪಡಿಸಿದೆ.
ಸ್ಥಳದಲ್ಲಿ ಉದ್ವಿಗ್ನತೆ, ಪ್ರತಿಭಟನೆ
ದೀಪತೂನ್ನಲ್ಲಿ ದೀಪ ಬೆಳಗದಿರುವುದನ್ನು ವಿರೋಧಿಸಿ ಕೆಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಹಿನ್ನೆಲೆಯಲ್ಲಿ ಮಧುರೈ ಪೊಲೀಸರು ಕೆಲವು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ. ಒಂದೆಡೆ ಧಾರ್ಮಿಕ ಆಚರಣೆಯ ಹಕ್ಕಿನ ಪ್ರಶ್ನೆ, ಮತ್ತೊಂದೆಡೆ ದೇವಸ್ಥಾನದ ಸಾಂಪ್ರದಾಯಿಕ ಆಚರಣೆ ಮತ್ತು ಕಾನೂನು ಸುವ್ಯವಸ್ಥೆಯ ವಿಚಾರಗಳು ಈ ವಿವಾದವನ್ನು ಮತ್ತಷ್ಟು ಗಂಭೀರಗೊಳಿಸಿವೆ.
ದೇಶಾದ್ಯಂತ ಆಕ್ರೋಶ.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ದೀಪ ಹಚ್ಚಲು ಅವಕಾಶ ನೀಡದಿರುವುದು ನ್ಯಾಯಾಂಗ ನಿಂದನೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ವಿರುದ್ದ ರಾಷ್ಟ್ರಮಟ್ಟದಲ್ಲಿ ತೀವ್ರ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



