ಕುರುಡುಮಲೆ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪ್ರಖ್ಯಾತ ಕುರುಡುಮಲೆ ಶ್ರೀ ವಿನಾಯಕ ಸ್ವಾಮಿ ದೇವಾಲಯದಲ್ಲಿ ವಿನಾಯಕ ಬ್ರಹ್ಮೋತ್ಸವವು ಭಕ್ತಿಭಾವ ಹಾಗೂ ಸಡಗರದಿಂದ ನಡೆಯಿತು. ಸೆ. 15 ರಂದು ಮಂಗಳವಾರ ಇಂದು ಮಧ್ಯಾಹ್ನ 1 ಗಂಟೆಗೆ ಅಪಾರ ಭಕ್ತ ಸಮೂಹದ ನಡುವೆ ನಡೆದಂತ ರಥೋತ್ಸವ ಕಾರ್ಯಕ್ರಮದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಸೆ.14ರಂದು ಬೆಳಗ್ಗೆ ಶ್ರೀವಿನಾಯಕ ದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಲ್ಯಾಣೋತ್ಸವ. 15ರಂದು ಬೆಳಗ್ಗೆ 10 ಗಂಟೆಗೆ ಕಳಶ ಸ್ಥಾಪನೆ, ಮಧ್ಯಾಹ್ನ 1ಗಂಟೆಗೆ ರಥೋತ್ಸವ ನಡೆಸಲಾಯಿತು.
ಐದು ದಿನಗಳ ಬ್ರಹ್ಮೋತ್ಸವ.ಸೆ. 14 ರಿಂದ ಆರಂಭಗೊಂಡು 15 ರಥೋತ್ಸವ 16ರಂದು ರಾತ್ರಿ ದೂಪೋತ್ಸವ, 17ರಂದು ಬೆಳಗ್ಗೆ ವಸಂತೋತ್ಸವ, ರಾತ್ರಿ 8 ಗಂಟೆಗೆ ಪುಷ್ಪ ಪಲ್ಲಕ್ಕಿ ಉತ್ಸವ, 18ರಂದು ಶಯನೋತ್ಸವ ಐದು ದಿನಗಳ ಕಾಲನಡೆಯಲಿದೆ. ದೇಗುಲದ ಪ್ರಧಾನ ಅರ್ಚಕ ವಿಶ್ವನಾಥ್ ದೀಕ್ಷಿತ್ ನೇತೃತ್ವದಲ್ಲಿ ವೇದ ಪಂಡಿತರು ಧಾರ್ಮಿಕ ವಿಧಿವಿಧಾನಗಳು ನಡೆಸಲಿದ್ದಾರೆ.
ಕುರುಡುಮಲೆ ವಿನಾಯಕನನ್ನು ಆರಾಧಿಸಿದ ಶ್ರೀ ಕೃಷ್ಣ
ದ್ವಾಪರಯುಗದಲ್ಲಿ ಶಮಂತಕಮಣಿಯ ವಿಚಾರವಾಗಿ ಶ್ರೀಕೃಷ್ಣನಿಗೆ ಅಪವಾದ ಬಂದ ಸಂದರ್ಭದಲ್ಲಿ, ಅಪವಾದದಿಂದ ಮುಕ್ತರಾಗಲು ಶ್ರೀ ಲಕ್ಷ್ಮೀ ಗಣಪತಿಯನ್ನು ಆರಾಧಿಸಿದ್ದರು ಎಂಬ ಪೌರಾಣಿಕ ನಂಬಿಕೆ ಕ್ಷೇತ್ರದೊಂದಿಗೆ ಬೆಸೆದುಕೊಂಡಿದೆ.
ಅದೇ ರೀತಿ, ಮಹಾಭಾರತದ ಪಂಚಪಾಂಡವರು ವನವಾಸ ಪೂರ್ಣಗೊಳಿಸಿ ಕೌರವರ ವಿರುದ್ಧ ಯುದ್ಧಕ್ಕೆ ತೆರಳುವ ಮುನ್ನ ಗಣಪತಿಯನ್ನು ಪೂಜಿಸಿದ್ದರು ಎಂಬ ನಂಬಿಕೆಯೂ ಇದೆ. ಈ ಕಾರಣದಿಂದ ಕುರುಡುಮಲೆ ಕ್ಷೇತ್ರವು ಭಕ್ತರ ಪಾಲಿಗೆ ವಿಶೇಷ ಧಾರ್ಮಿಕ ಮಹತ್ವ ಪಡೆದಿದೆ ಎಂದು ಹೇಳಲಾಗುತ್ತದೆ.
ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯರು ಕುರುಡುಮಲೆಯಲ್ಲಿ ಬಯಲಿನಲ್ಲಿ ವಿರಾಜಮಾನವಾಗಿದ್ದ ಗಣಪತಿ ವಿಗ್ರಹವನ್ನು ಕಂಡು, ಬಳಿಕ ದೇವಾಲಯ ನಿರ್ಮಿಸಿದರು ಎಂಬ ಪ್ರತೀತಿಯೂ ಸ್ಥಳೀಯವಾಗಿ ಪ್ರಚಲಿತದಲ್ಲಿದೆ.





