ಅಧಿಕಾರ ಕಳೆದುಕೊಂಡ ತೆಲಂಗಾಣದ ಸರ್ಕಾರದ ಮಹಿಳಾ ಸಚಿವೆ ಕೊಂಡಾ ಸುರೇಖಾ!
ನ್ಯೂಜ್ ಡೆಸ್ಖ್: ಮಗಳು ಆಡಿದ ಮಾತಿನಿಂದ ತಾಯಿಯ ಮಂತ್ರಿ ಪದವಿಗೆ ಧಕ್ಕೆಯಾಗಿದೆ.ಅಧಿಕಾರ ಕಳೆದುಕೊಂಡ ಮಹಿಳಾ ಮಂತ್ರಿ ತೆಲಂಗಾಣ ಸರ್ಕಾರದಲ್ಲಿ ಅರಣ್ಯ ಇಲಾಖೆ ಹಾಗು ಧಾರ್ಮಿಕ ದತ್ತಿ ಸಚಿವೆ ಕೊಂಡಾ ಸುರೇಖಾ. ಈ ವಿಚಾರ ತೆಲಂಗಾಣ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕೊಂಡಾ ಸುರೇಖಾ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿಯ ಶಿಫಾರಸು ಪ್ರಮುಖ ಕಾರಣವಾಗಿದೆ. ಈ ಬೆಳವಣಿಗೆಯ ಹಿಂದೆ ಕಾಂಗ್ರೆಸ್ ಶಿಸ್ತು ಸಮಿತಿಯ ಶಿಫಾರಸು ಪ್ರಮುಖ ಕಾರಣವಾಗಿದೆ ಎಂಬುದು ವರದಿಗಳಲ್ಲಿದೆ.
ಮಗಳ ಹೇಳಿಕೆ ತಂದ ಸಂಕಷ್ಟ
ಕೊಂಡಾ ಸುರೇಖಾ ಅವರ ಪುತ್ರಿ ಕೊಂಡಾ ಸುಷ್ಮಿತಾ ಪಟೇಲ್ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ನ ಕೆಲವು ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದರು. ಇದೇ ವೇಳೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾರ್ಕಲ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದರು .
ಪಾರ್ಕಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹಾಲಿ ಕಾಂಗ್ರೆಸ್ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರಿಗೆ ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಸುಷ್ಮಿತಾ ಪಟೇಲ್ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ತಿರುವು ಪಡೆದುಕೊಂಡಿದ್ದವು.
ಪುತ್ರಿಯ ಹೇಳಿಕೆಗಳಿಗೆ ತಾವು ಹೊಣೆಗಾರರಲ್ಲ
ಮಾಜಿ ಮಂತ್ರಿ ಕೊಂಡಾ ಸುರೇಖಾ ಸ್ಪಷ್ಟಪಡಿಸಿದ್ದು ಏನೆಂದರೆ ಪುತ್ರಿ ವಯಸ್ಕರಾಗಿದ್ದು, ಅವರ ವೈಯಕ್ತಿಕ ರಾಜಕೀಯ ಅಭಿಪ್ರಾಯಗಳಿಗೆ ತಾಯಿಯನ್ನು ಹೊಣೆ ಮಾಡಬಾರದು ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದರು.
ಸಿಎಂ ಮಾತೇ ಅಂತಿಮವೇ?
ಕೊಂಡಾ ಸುರೇಖಾ ಅವರ ಪದಚ್ಯುತಿ ಬಳಿಕ ತೆಲಂಗಾಣ ಕಾಂಗ್ರೆಸ್ನಲ್ಲಿ ಪ್ರಮುಖ ಪ್ರಶ್ನೆಯೊಂದು ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನಿರ್ಧಾರವೇ ಸರ್ಕಾರ ಮತ್ತು ಪಕ್ಷದಲ್ಲಿ ಅಂತಿಮವಾಗುತ್ತಿದೆಯೇ?
ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಗೆ ಅವರು ಕಟ್ಟುನಿಟ್ಟಿನ ಸಂದೇಶ ನೀಡುತ್ತಿದ್ದಾರೆಯೇ?
ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಮಟ್ಟಿಗೆ ಮುಖ್ಯಮಂತ್ರಿ ತಮ್ಮ ನಾಯಕತ್ವದ ಪ್ರಭಾವವನ್ನು ಬಳಸುತ್ತಿರುವುದು ರೇವಂತ್ ರೆಡ್ಡಿ ಅವರ ರಾಜಕೀಯ ಹಿಡಿತವನ್ನು ತೋರಿಸುತ್ತದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಆದರೆ ಇದನ್ನು ವಿರೋಧಿಸುವವರು, ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷದಲ್ಲಿ ಪ್ರಮುಖ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗುವುದಿಲ್ಲ; ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕತ್ವದ ಸಮನ್ವಯವೂ ಇರುತ್ತದೆ ಎಂದು ಹೇಳುತ್ತಿದ್ದಾರೆ.
ಒನ್ ಮ್ಯಾನ್ ಶೋ ಚರ್ಚೆ
ಕೊಂಡಾ ಸುರೇಖಾ ಪ್ರಕರಣದ ನಂತರ “ರೇವಂತ್ ರೆಡ್ಡಿ ಮೋಸ್ಟ್ ಪವರ್ಫುಲ್?”, “ತೆಲಂಗಾಣ ಕಾಂಗ್ರೆಸ್ನಲ್ಲಿ ಸಿಎಂ ಮಾತೇ ಅಂತಿಮವೇ?” ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಸರ್ಕಾರದ ಆಡಳಿತ ಮಾತ್ರವಲ್ಲದೆ, ಪಕ್ಷದೊಳಗಿನ ಶಿಸ್ತು ಮತ್ತು ನಾಯಕತ್ವದ ವಿಚಾರದಲ್ಲೂ ರೇವಂತ್ ರೆಡ್ಡಿ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದ್ದು ಒನ್ ಮ್ಯಾನ್ ಶೋ ಎಂಬ ಮಾತು ಕೇಳಿಬರುತ್ತಿದೆ.ಒಟ್ಟಾರೆಯಾಗಿ ತೆಲಂಗಾಣದ ಕಾಂಗ್ರೆಸ್ ನಲ್ಲಿ ಕೊಂಡಾ ಸುರೇಖಾ ಪ್ರಕರಣ ಹೊಸ ಆಯಾಮ ನೀಡಿದೆ.
ಕೊಂಡಾ ಸುಷ್ಮಿತಾ ಪಟೇಲ್ ಯಾರು? ಕೊಂಡಾ ಸುಷ್ಮಿತಾ ಪಟೇಲ್ ಅವರು ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಸಚಿವ ದಂಪತಿ ಕೊಂಡಾ ಸುರೇಖಾ ಮತ್ತು ಕೊಂಡಾ ಮುರಳಿಧರ್ ರಾವ್ ಅವರ ಪುತ್ರಿ.
ತೆಲಂಗಾಣದ ವರಂಗಲ್ ಜಿಲ್ಲೆಯ ಪಾರ್ಕಲ್ ರಾಜಕೀಯದಲ್ಲಿ ಪ್ರಭಾವ ಹೊಂದಿರುವ ಕೊಂಡಾ ಕುಟುಂಬದ ರಾಜಕೀಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. 2022ರಲ್ಲಿ ಬಿಡುಗಡೆಯಾದ Konda ಸಿನಿಮಾಗೆ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದು ಒಂದಷ್ಟು ಸಿನಿಮಾ ಸಂಪರ್ಕ ಇದೆ.
ಮುಂದಿನ ದಿನಗಳಲ್ಲಿ ತೆಲಂಗಾಣದ ಪಾರ್ಕಲ್ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡುವ ಆಸಕ್ತಿ ಹೊಂದಿದ್ದರು. ಈ ಮದ್ಯೆ ಆಗಸ್ಟ್ನಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪಾರ್ಕಲ್ನಲ್ಲಿ ರೇವೂರಿ ಪ್ರಕಾಶ್ ರೆಡ್ಡಿ ಅವರನ್ನು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಇದು ಕೊಂಡಾ ಸುಷ್ಮಿತಾ ಪಟೇಲ್ ಅವರನ್ನು ಕೆರಳಿಸಿ ರಾಜಕೀಯ ವಿವಾದಕ್ಕೆ ದಾರಿಯಾಗಿತ್ತು
ರೇವಂತ್ ರೆಡ್ಡಿ ವಿರುದ್ದ ಬಹಿರಂಗ ಹೇಳಿಕೆ
ಕೊಂಡಾ ಸುಷ್ಮಿತಾ ಪಟೇಲ್ ಪಾರ್ಕಲ್ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಕೆಲವು ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿ ಸುದ್ದಿಯಾದರು
ಅವರ ಹೇಳಿಕೆಗಳ ಬಳಿಕ ತೆಲಂಗಾಣ ಕಾಂಗ್ರೆಸ್ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿತು. ಸುಷ್ಮಿತಾ ಅವರ ತಾಯಿ ಕೊಂಡಾ ಸುರೇಖಾ ವಿರುದ್ಧ ಪಕ್ಷದ ಶಿಸ್ತು ಕ್ರಮದ ಚರ್ಚೆ ಆರಂಭವಾಯಿತು.
ಕೊನೆಗೆ ಮಗಳ ಮಾತು ಅಮ್ಮನ ಮಂತ್ರಿ ಪದವಿ ಕಸಿಯಿತು.



