ದೆಹಲಿ ಮಾದರಿಯಲ್ಲಿ ಬೆಂಗಳೂರಿನಿಂದ ಕೋಲಾರ ,ತುಮಕೂರು,ಮೈಸೂರು ಸೇರಿದಂತೆ ಇನ್ನೂ ಹಲವು ನಗರಗಳಿಗೆ ವಿಸ್ತರಿಸುವ ಆಲೋಚನೆ ಇರುವ ಸೆಮಿ-ಹೈ-ಸ್ಪೀಡ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್) ಕಾರಿಡಾರ್ಗಳನ್ನು ಪ್ರಸ್ತಾಪಿಸಿದ್ದು ತಾಂತ್ರಿಕವಾಗಿ ಆರ್ಆರ್ಟಿಎಸ್ ಎಂಬುದು ಉಪನಗರ ರೈಲಿನ ಭವಿಷ್ಯದ ಹಂತವಾಗಿದೆ. ನಮ್ಮ ಮೂಲಸೌಕರ್ಯ ಮತ್ತು ಸಿಗ್ನಲಿಂಗ್ ವಿನ್ಯಾಸವನ್ನು ಹೆಚ್ಚಿನ ವೇಗದ ಕಾರ್ಯಾಚರಣೆಗೆ ಬೆಂಬಲಿಸುವ ರೀತಿಯಲ್ಲಿ ಯೋಜಿಸಲಾಗುತ್ತಿದೆ,ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.

ನ್ಯೂಜ್ ಡೆಸ್ಕ್:ಬೆಂಗಳೂರು ಉಪನಗರ ರೈಲು ಯೋಜನೆ(Bengaluru Suburban Railway Plan) ನಾಲ್ಕು ಮಾರ್ಗಗಳಲ್ಲಿ ಸಂಚರಿಸಲಿದ್ದು ಇದರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.1980 ರಲ್ಲಿ ರೂಪುಗೊಂಡ ಈ ಯೋಜನೆಗೆ 2022ರಲ್ಲಿ ರೆಕ್ಕೆಪುಕ್ಕ ಬಂತಾದರೂ ನಂತರದಲ್ಲಿ ಮುಂದುವರಿದಿರಲಿಲ್ಲ, ಭೂ ಸ್ವಾಧೀನ, ಹಣಕಾಸು ಸಮಸ್ಯೆ, ರೈಲ್ವೆ ಸಚಿವಾಲಯದ ಜತೆಗಿನ ಸಮನ್ವಯದ ಕೊರತೆ, ಯೋಜನೆ ಅನುಷ್ಠಾನಕ್ಕೆ ಪರಿಣತ ತಂಡದ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಯೋಜನೆ ನಿಂತಲ್ಲೇ ನಿಂತು ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ 148.3 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ ನಾಲ್ಕು ಕಾರಿಡಾರ್ ಮಾಡುವ ಮೂಲಕ ಚಾಲನೆ ದೊರೆತಿದ್ದು, ಗಂಟೆಗೆ 200-250 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಾಗುವಷ್ಟು ಸಾಮರ್ಥ್ಯ ಹೊಂದಿರುವ ಯೋಜನೆಯ ಕಾರಿಡಾರ್ ವಿವರ ಹೀಗಿದ್ದು, ಸಂಪಿಗೆ ಮಾರ್ಗ: ಕೆಎಸ್ಆರ್ ಬೆಂಗಳೂರು(ಮೆಜೆಸ್ಟಿಕ್) ನಿಂದ ದೇವನಹಳ್ಳಿ ವರಿಗೂ (41.4ಕಿ.ಮೀ.), ಪಾರಿಜಾತ ಮಾರ್ಗ: ಬೈಯಪ್ಪನಹಳ್ಳಿ -ಚಿಕ್ಕಬಾಣಾವಾರ (25.1 ಕಿ.ಮೀ.) ಕಮಲ ಲೈನ್: ಕಂಗೇರಿ – ವೈಟ್ಫೀಲ್ಡ್ (35.52 ಕಿ.ಮೀ.) ಕನಕ ಲೈನ್: ರಾಜಾನುಕುಂಟೆ-ಹೀಲಲಿಗೆವರಿಗೂ (46.28ಕಿ.ಮೀ.)
ಯೋಜನೆಯನ್ನು ಜಾರಿಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ(K-RIDE) ಭವಿಷ್ಯದಲ್ಲಿ ಉಪನಗರ ರೈಲು ಯೋಜನೆ ಜಾಲ ಬೆಂಗಳೂರಿನ ನಗರ ಮಿತಿಗಳನ್ನು ಮೀರಿ ನೆರೆಯ ಜಿಲ್ಲೆಗಳಿಗೆ ವಿಸ್ತರಣೆಯಾಗಲಿದ್ದು ಇದಕ್ಕಾಗಿ ಅತಿ ವೇಗದ ರೈಲು ಕಾರಿಡಾರ್ಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಇಟಿಸಿಎಸ್ (ETCS) ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.ಸಬ್ ಅರ್ಬನ್ ಜಾಲ ಬೆಂಗಳೂರಿನ ಸುತ್ತಲಿನ ನಗರಗಳಿಗೆ ವಿಸ್ತರಣೆಯಾದಾಗ ಸಿಬಿಟಿಸಿ ತಂತ್ರಜ್ಞಾನ ಸೂಕ್ತವಾಗುವುದಿಲ್ಲ ಜೊತೆಗೆ ಈ ನೆಟ್ವರ್ಕ್ನಲ್ಲಿ ವಿವಿಧ ಕಾರಿಡಾರ್ಗಳ ನಡುವಿನ ಅಂತರ ಕಾರ್ಯಕ್ಷಮತೆಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ, ಸಿಗ್ನಲಿಂಗ್ ವ್ಯವಸ್ಥೆ ಬದಲಿಸಲು ಯೋಜಿಸಲಾಗಿದೆ ಎಂದು ಕೆ-ರೈಡ್ ಸಂಸ್ಥೆಯ ಮೂಲಗಳು ಹೇಳಿವೆ.
ಸೂಲದೇವನ ಹಳ್ಳಿ ಬಳಿ ಡೀಪೊ ನಿರ್ಮಾಣ
ಉಪನಗರ ರೈಲು ಯೋಜನೆಯ ರೈಲುಗಳ ನಿರ್ವಹಣೆಗಾಗಿ ಸೋಲದೇವನಹಳ್ಳಿಯಲ್ಲಿ 26 ಎಕರೆ ಪ್ರದೇಶದಲ್ಲಿ ಬೃಹತ್ ಡಿಪೋ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಅತ್ಯಾಧುನಿಕ ಘಟಕಕ್ಕಾಗಿ ಈಗಾಗಲೇ 26 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಜರ್ಮನಿಯ ಕೆಎಫ್ಡಬ್ಲ್ಯೂ ಬ್ಯಾಂಕ್ ನೆರವಿನೊಂದಿಗೆ 200.03 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಡಿಪೋದಲ್ಲಿ ಸ್ಟೇಬ್ಲಿಂಗ್ ಲೈನ್, ವರ್ಕ್ ಶಾಪ್ ಲೈನ್, ಇನ್ಸ್ಪೆಕ್ಷನ್ ಬೇ, ರಿಪೇರಿ ಬೇ ಮತ್ತು ಸಂಪೂರ್ಣ ಸ್ವಯಂಚಾಲಿತ ಕೋಚ್ ವಾಷಿಂಗ್ ಸೌಲಭ್ಯಗಳು ಇರಲಿವೆ. ಇದರಿಂದ ಉಪನಗರ ರೈಲು ವ್ಯವಸ್ಥೆಯು ನಿರೀಕ್ಷಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.ನೆಟ್-ಝೀರೋ ಕಾರ್ಬನ್ ನೀತಿಯನ್ನು ಹೊಂದಿರಲಿದ್ದು ಘಟಕದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಹೇಳಲಾಗುತ್ತಿದೆ.
ಕೇಂದ್ರದಿಂದ ಪ್ರಗತಿ ಪರಿಶೀಲನೆ
ಕೇಂದ್ರದ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಅಡಿಯಲ್ಲಿರುವ ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ನಿಂದ (ಪಿಎಂಜಿ) ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಬಿ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್, ಯೋಜನೆಯ ಒಟ್ಟಾರೆ ಪ್ರಗತಿ, ಕಾಲಮಿತಿಯ ಮೇಲೆ ಪರಿಣಾಮ ಬೀರುತ್ತಿರುವ ಸವಾಲು, ವಿಳಂಬವನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳು ಮತ್ತು ಕಳೆದ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ನೀಡಲಾದ ಗುರಿಗಳನ್ನು ತಲುಪಲು ಇರುವ ಮಾರ್ಗಸೂಚಿಗಳ ಕುರಿತು ತಂಡಕ್ಕೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ಸಭೆ ಬಳಿಕ ಪಿಎಂಜಿ ತಂಡದವರು ಕಾರಿಡಾರ್-2ರ ಉದ್ದಕ್ಕೂ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೆಟ್ರೋ ಮಾದರಿಯ ಬೋಗಿಗಳು
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಾರಿಗೊಳ್ಳುತ್ತಿರುವ ಉಪನಗರ ರೈಲು ಯೋಜನೆಯಲ್ಲಿ ಬೆಂಗಳೂರಿನ ನಾಗರಿಕರಿಗೆ ವಿಶ್ವ ದರ್ಜೆಯ ಉಪನಗರ ರೈಲು ಯೋಜನೆ ಅನುಷ್ಟಾನಕ್ಕೆ ಮಹತ್ವದ ಉತ್ತೇಜನ ನೀಡುವ ಉದ್ದೇಶದಿಂದ, Bengaluru Rail Infrastructure Development Company Limited (ಕೆ-ರೈಡ್/ಬಿ-ರೈಡ್) ಸಂಸ್ಥೆಯು ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ಐಸಿಎಫ್) ಗೆ 153 ಹವಾನಿಯಂತ್ರಿತ (ಎಸಿ) ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿಗಳ ಪೂರೈಕೆಗೆ 1513.75 ಕೋಟಿ ರೂಪಾಯಿ ಮೊತ್ತದ ಕಾರ್ಯಾದೇಶ ಪತ್ರವನ್ನು ಸಹ ನೀಡಲಾಗಿದೆ.



