- ಶ್ರೀನಿವಾಸಪುರ–ಬೆಂಗಳೂರು ಪ್ರಯಾಣಕ್ಕೆ ₹147 ಟಿಕೆಟ್ ದರ
- ಬಸ್ ಪ್ರಯಾಣ ದುಬಾರಿ – ಪ್ರಯಾಣಿಕರ ಜೇಬಿಗೆ ಕತ್ತರಿ!
ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಳದ ಬಗ್ಗೆ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ, ಜೀವನ ನಿರ್ವಹಣೆ ವೆಚ್ಚ ಹಾಗೂ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ ಈಗ ದುಬಾರಿಯಾದ ಸಾರಿಗೆ ಪ್ರಯಾಣ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಶ್ರೀನಿವಾಸಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ದರ ₹147 ದುಬಾರಿ ಎನ್ನುವಂತಾಗಿದೆ.
ಪ್ರತಿದಿನ ಬದುಕು ಆರಿಸಿ ಉದ್ಯೋಗ, ವ್ಯಾಪಾರ, ಶಿಕ್ಷಣ, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ದಿನನಿತ್ಯದ ಪ್ರಯಾಣಿಕರಿಗೆ ಆರ್ಥಿಕ ಹೊರೆ ಎನ್ನುವಂತಾಗಿದೆ. ಇದು ನೇರವಾಗಿ ಮಧ್ಯಮ ತರಗತಿ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಬಿರುತ್ತದೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು.
ಶ್ರೀನಿವಾಸಪುರದಿಂದ ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಬಸ್ ಪ್ರಯಾಣ ಅತ್ಯಂತ ಅಗತ್ಯವಾಗಿದೆ. ಟಿಕೆಟ್ ದರದಲ್ಲಿ ಹೆಚ್ಚಳವಾದರೆ ತಿಂಗಳ ಪ್ರಯಾಣ ವೆಚ್ಚವೂ ಗಣನೀಯವಾಗಿ ಏರಿಕೆಯಾಗುತ್ತದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಬಜೆಟ್ ಮೇಲೆ ಇದು ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಸರ್ಕಾರದ ನಿರ್ಧಾರಕ್ಕೆ ಪ್ರಯಾಣಿಕರ ಅಸಮಾಧಾನ
ಸಾರಿಗೆ ದರ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಜನಸಾಮಾನ್ಯರಿಗೆ ಅನುಕೂಲಕರ ಹಾಗೂ ಕೈಗೆಟುಕುವ ಸಾರಿಗೆ ವ್ಯವಸ್ಥೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ನಿರಂತರವಾಗಿ ಹೆಚ್ಚುತ್ತಿರುವ ಪ್ರಯಾಣ ವೆಚ್ಚದಿಂದ ಸಾಮಾನ್ಯ ಜನರು ಹೈರಾಣವಾಗುತ್ತಿದ್ದಾರೆ.
ಪ್ರಯಾಣಿಕರ ಪ್ರಮುಖ ಬೇಡಿಕೆಗಳೇನು?
ಟಿಕೆಟ್ ದರ ಏರಿಕೆಯನ್ನು ಮರುಪರಿಶೀಲಿಸಬೇಕು. ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಶ್ರೀನಿವಾಸಪುರ–ಬೆಂಗಳೂರು ಮಾರ್ಗದಲ್ಲಿ ಸಾಕಷ್ಟು ಬಸ್ಗಳನ್ನು ಕಾರ್ಯಾಚರಣೆಗೊಳಿಸಬೇಕು. ಜನದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಬೇಕು.
ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಸೌಲಭ್ಯ ಕಲ್ಪಿಸಬೇಕು.ಜನಸಾಮಾನ್ಯರಿಗೆ ಹೊರೆಯಾಗದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

ಸಾರಿಗೆ ವ್ಯವಸ್ಥೆ ಕೇವಲ ಪ್ರಯಾಣದ ಸಾಧನವಲ್ಲ
KSRTC ಜನಸಾಮನ್ಯರ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಟಿಕೆಟ್ ದರ ನಿಗದಿಪಡಿಸುವಾಗ ಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣಿಸಿ ಸರ್ಕಾರ ಆರ್ಥಿಕ ತಜ್ನರ ಸಲಹೆ ಸೂಚನೆ ಪಡೆದು KSRTC ಅಧಿಕಾರಿಗಳಿಗೆ ಸೂಚಿಸಿ ದರ ಏರಿಕೆ ಕುರಿತು ಮರುಪರಿಶೀಲನೆ ನಡೆಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.



