ಅಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯರ ಹೆಸರು ಮುದ್ರಣ ತಾಲೂಕು ಆಡಳಿತದ ಶಿಷ್ಟಾಚಾರದ ಬಗ್ಗೆ ಬಿಜೆಪಿ ಮುಖಂಡ ನಲ್ಲಪಲ್ಲಿ ರೆಡ್ಡೆಪ್ಪ ವ್ಯಂಗ್ಯ.
ಶ್ರೀನಿವಾಸಪುರ: ಸಾರ್ವಜನಿಕರು, ದೇಶಪ್ರೇಮಿಗಳು ಹಾಗೂ ಕನ್ನಡಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕಾದ ತಾಲೂಕು ಆಡಳಿತವೇ ಸಾರ್ವಜನಿಕರಿಂದ ದೂರ ಉಳಿದಿದೆಯೇ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಇದೀಗ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿನ ಎಡವಟ್ಟು ಆಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ತಾಲೂಕು ಆಡಳಿತದ ಬಹುತೇಕ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಮುಖ್ಯ ಅಧಿಕಾರಿಗಳೇ ಇಲ್ಲದಿರುವುದು, ನಡೆಯುವ ಸಭೆಗಳು ಕೇವಲ ನಾಮಕಾವಸ್ಥೆಗೆ ಸೀಮಿತವಾಗಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಇದೀಗ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ಹುದ್ದೆ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಯ್ಯ ಅವರು ಈಗಾಗಲೇ ನಿವೃತ್ತರಾಗಿದ್ದಾರೆ. ಅವರಿಗೆ ಇಲಾಖೆಯಿಂದ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭವನ್ನೂ ನೀಡಲಾಗಿದೆ ಎನ್ನುತ್ತಾರೆ. ಆದರೂ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ಮುದ್ರಿಸಿ ಪತ್ರಿಕೆ ವಿತರಿಸಿರುವುದು ತಾಲೂಕು ಆಡಳಿತದ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿದೆ.
ಇನ್ನು ರಾಜ್ಯೋತ್ಸವದ ಮುಖ್ಯ ಅತಿಥಿಗಳ ಪಟ್ಟಿಯಲ್ಲಿಯೂ ಶಿಷ್ಟಾಚಾರ ಪಾಲನೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪದವೀಧರ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.ಅವರ ಅವಧಿ ಮುಗಿದಿರುವುದು ಅಧಿಕಾರಿಗಳಿಗೆ ಗೋತ್ತಿಲ್ವಾ?
ಇವರು ಯಾವ ಸೀಮೆ ಅಧಿಕಾರಿಗಳು?
ಅಗ್ನೇಯ ಪದವೀಧರ ಕ್ಷೇತ್ರಕ್ಕೆ ನೂತನ ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗಿದ್ದರೂ ಹಳೆಯ ಸದಸ್ಯರ ಹೆಸರನ್ನು ಪತ್ರಿಕೆಯಲ್ಲಿ ಮುದ್ರಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ನಲ್ಲಪಲ್ಲಿ ರೆಡ್ಡೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ:
ಕನ್ನಡ ರಾಜ್ಯೋತ್ಸವದಂತಹ ನಾಡಹಬ್ಬವನ್ನು ಆಚರಿಸುವಾಗ ಕನಿಷ್ಠ ಪರಿಜ್ಞಾನವೂ ಇಲ್ಲದೆ ಆಹ್ವಾನ ಪತ್ರಿಕೆ ಸಿದ್ಧಪಡಿಸುವ ಅಧಿಕಾರಿಗಳ ಕಾರ್ಯವೈಖರಿ ನಿಜಕ್ಕೂ ವಿಪರ್ಯಾಸ. ಅಧಿಕಾರಿಗಳ ಪ್ರಸ್ತುತ ಹುದ್ದೆ, ಜವಾಬ್ದಾರಿ ಹಾಗೂ ಶಿಷ್ಟಾಚಾರದ ನಿಯಮಗಳನ್ನು ಪರಿಶೀಲಿಸುವ ಕನಿಷ್ಠ ಜವಾಬ್ದಾರಿಯೂ ತಾಲೂಕು ಆಡಳಿತಕ್ಕೆ ಇಲ್ಲದಿರುವುದು ಆಡಳಿತದ ನಿರ್ಲಕ್ಷ್ಯ ಎಂದು ಸಾರ್ವಜನಿಕರ ಆಕ್ರೋಶ
ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಕನ್ನಡ ರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಇಂತಹ ಆಡಳಿತಾತ್ಮಕ ಲೋಪಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಶ್ರೀನಿವಾಸಪುರದಲ್ಲಿ ತಾಲೂಕು ಆಡಳಿತಕ್ಕೆ ಹೇಳುವರು ಕೇಳುವವರು ಇಲ್ಲದಂತಾಗಿದೆ.



