ನ್ಯೂಜ್ ಡೆಸ್ಕ್: ಪೌರಾಡಳಿತ ಇಲಾಖೆ ನಗರಸಭೆಯಲ್ಲಿ 34 ವರ್ಷಗಳಿಂದ ದಿನಗೂಲಿ ಆಧಾರದಲ್ಲಿ ಟೈಪಿಸ್ಟ್ ಆಗಿ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತ ಮಹಿಳೆಗೆ ಹೈಕೋರ್ಟ್ ಮಧ್ಯಪ್ರವೇಶದಿಂದ 64ನೇ ವಯಸ್ಸಿನಲ್ಲಿ ಸೇವೆ ಕಾಯಂಗೊಳಿಸಿಕೊಳ್ಳುವ ಹಾಗೂ 34 ವರ್ಷಗಳ ಸೇವೆಯನ್ನು ಪರಿಗಣಿಸಿ ನೌಕರಿಯನ್ನು ಕ್ರಮಬದ್ಧಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದರೊಂದಿಗೆ ಅದರ ಫಲವಾಗಿ ದೊರೆಯುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ 1988ರಲ್ಲಿ ಸೇವೆಗೆ ಸೇರಿ, 2022ರಲ್ಲಿ ನಿವೃತ್ತರಾದ ಗೀತಾ ರಾಮಪ್ಪ ತೇರದಾಳ ಅವರು ಅವರಿಗಿಂತ ನಂತರ ಸೇವೆಗೆ ಸೇರಿದ್ದ 12 ಮಂದಿ ನೌಕರರ ಸೇವೆಯನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿತ್ತು. ಈ ಬಗ್ಗೆ ಗೀತಾ ರಾಮಪ್ಪ ತೇರದಾಳ ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರ ಶಾಶ್ವತ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಯ ದುರ್ಬಲತೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಶಾಶ್ವತ ಸಾಧನವನ್ನಾಗಿ ಪರಿವರ್ತಿಸಲಾಗದು. ಉದ್ಯೋಗಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಸೇವಾವಧಿಯಲ್ಲಿ ಉದ್ಭವಿಸಿದ್ದ ನ್ಯಾಯಸಮ್ಮತ ಹಕ್ಕುಗಳು ಅಥವಾ ಖಾಯಂಗೊಳಿಸುವ ಕೋರಿಕೆಯು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಮೂರು ದಶಕಗಳ ಕಾಲ ಸರ್ಕಾರದ ವ್ಯವಸ್ಥೆಯಲ್ಲಿ ಶ್ರಮ ಪಡೆದುಕೊಂಡು, ಕೊನೆಗೆ ನಿವೃತ್ತಿಯ ಹೊಸ್ತಿಲಲ್ಲಿ ಖಾಯಂಗೊಳಿಸಲು ನಿರಾಕರಿಸುವುದು ಶೋಷಣೆಗೆ ಸಮನಾಗುತ್ತದೆ. ಈ ನಡೆ ಮಾದರಿ ಸರ್ಕಾರದ ಲಕ್ಷಣವಂತೂ ಅಲ್ಲ ಎಂದು ಪೀಠ ಹೇಳಿದೆ.
ಅರ್ಜಿದಾರರು ಅಕ್ರಮವಾಗಿ ನೇಮಕವಾಗಿಲ್ಲ. ಸರ್ಕಾರ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕವಾಗಿದ್ದಾರೆ. ಟೈಪಿಸ್ಟ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಅವರ ಸೇವೆಯನ್ನು ಖಾಯಂಗೊಳಿಸುವಂತೆ ಪುರಸಭೆಯಿಂದ ಸಿಫಾರಸು ಮಾಡಲಾಗಿದೆ. ಆದರೂ ಖಾಯಂ ಮಾಡಲಿಲ್ಲ. ಉದ್ಯೋಗದ ಸಮಯದಲ್ಲಿ ಸಿಗಬೇಕಾದ ಪ್ರಯೋಜನಗಳನ್ನು ಕಾನೂನುಬಾಹಿರವಾಗಿ ನಿರಾಕರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಕಾಯಂಗೊಳಿಸಲು ಅರ್ಹರಾಗಿದ್ದಾರೆ.
ಅರ್ಜಿದಾರರು ನಿವೃತ್ತಿ ವಯಸ್ಸನ್ನು ತಲುಪುವ ಸಂದರ್ಭದಲ್ಲಿ ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ, ಅದೇ ವೃಂದದಲ್ಲಿ ಅವರ ಸೇವೆಯನ್ನು ಕಾಯಂಗೊಳಿಸಲು ಅರ್ಹರಾಗಿದ್ದಾರೆ. ಅವರು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ 1998ರ ಫೆಬ್ರವರಿ 11ರಿಂದ ಪೂರ್ವ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಜೊತೆಗೆ, ಅದರಿಂದ ದೊರೆಯುವ ಎಲ್ಲ ಅನುಸಂಗಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅನುಸಂಗಿಕ ಸೌಲಭ್ಯಗಳ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯಾಲಯ, ವೇತನ ನಿಗದಿ ಹಾಗೂ ಇತರ ಎಲ್ಲ ಅರ್ಹ ಸೇವಾ ಸೌಲಭ್ಯಗಳ ಉದ್ದೇಶಕ್ಕಾಗಿ 10 ವರ್ಷಗಳ ಸೇವೆ ಪೂರ್ಣಗೊಂಡ ದಿನಾಂಕದಿಂದಲೇ ನಿಯಮಿತ ಸೇವೆಯ ನಿರಂತರತೆಯನ್ನು ಲೆಕ್ಕಾಚಾರದ ದೃಷ್ಟಿಯಿಂದ ಪರಿಗಣಿಸಬೇಕು ಎಂದು ತಿಳಿಸಿದೆ.
ಅಲ್ಲದೆ, ಮೇಲ್ಮನವಿದಾರರು ಸಲ್ಲಿಸಿರುವ ಸಂಪೂರ್ಣ 34 ವರ್ಷಗಳ ಸೇವಾವಧಿಯನ್ನು ಪಿಂಚಣಿ, ಗ್ರಾಚ್ಯುಟಿ (ಉಪದಾನ) ಹಾಗೂ ಇತರ ಎಲ್ಲ ಅರ್ಹ ನಿವೃತ್ತಿ ಮತ್ತು ಸೇವಾಂತ್ಯ ಸೌಲಭ್ಯಗಳನ್ನು ನಿರ್ಧರಿಸಲು ಹಾಗೂ ಲೆಕ್ಕಹಾಕಲು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಈ ವೇಳೆ ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ನ್ಯಾಯಾಲಯ, ಮಾದರಿ ಉದ್ಯೋಗದಾತನಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರದ ನಡೆ, ನ್ಯಾಯಸಮ್ಮತತೆ ಮತ್ತು ಸ್ವೇಚ್ಛಾಚಾರರಹಿತ ಆಡಳಿತಕ್ಕೆ ಸಂಬಂಧಿಸಿದ ಸಾಂವಿಧಾನಿಕ ಮಾನದಂಡಗಳನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
Trending
- ಸೀಗರೇಟ್ ಸಾಲ ನೀಡದ ಅಂಗಡಿ ಮಾಲೀಕನ ಕೊಚ್ಚಿ ಕೊಲೆ!
- Municipal:34 ವರ್ಷ ದಿನಗೂಲಿ ಟೈಪಿಸ್ಟ್ ಆಗಿದ್ದ ಮಹಿಳೆ ಸೇವೆ ಖಾಯಂಗೆ ಹೈಕೋರ್ಟ್ ಸೂಚನೆ.
- ಸರ್ಕಾರಿ ಬಸ್ ನಲ್ಲಿ ಸೀಟು ಕಿತ್ತಾಟ ರೌಡಿಗಳಿಂದ ಮಹಿಳೆಯರ ಮೇಲೆ ಹಲ್ಲೆ!
- ಶ್ರೀನಿವಾಸಪುರ:ಪದವೀಧರ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ತ್ರಿಮೂರ್ತಿಗಳು ಒಂದಾದರ?
- ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
- ಚಿಂತಾಮಣಿ ಪಾಲಿಟೆಕ್ನಿಕ್ ಮೈದಾನದಲ್ಲಿ ದಸರಾ ಉತ್ಸವದ ವೈಭವ!
Monday, October 26



