- ತಾಯಿ-ಮಗಳ ಮೇಲೆ ಲಾಂಗ್ನಿಂದ ದಾಳಿ
- ರಕ್ತಸ್ರಾವದಿಂದ ಮಹಿಳೆ ಸಾವು
- ಜೊತೆಯಲ್ಲಿದ್ದ ಮಗಳು ಬಚಾವ್
- ಮೊದಲ ಪತಿಯ ಬಗ್ಗೆ ಮಗಳ ಅನುಮಾನ
ಚಿಂತಾಮಣಿ: ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ಆಯೋಜಿಸಲಾಗಿದ್ದ ದುರ್ಗಾ ಮಹೋತ್ಸವವನ್ನು ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದ ತಾಯಿ ಮತ್ತು ಮಗಳ ಮೇಲೆ ದುಷ್ಕರ್ಮಿಯೊಬ್ಬ ಲಾಂಗ್ನಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ನಡೆದಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಮಿತ್ರಮ್ಮ (35) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಪುತ್ರಿಯೂ ಗಾಯಗೊಂಡಿದ್ದಾಳೆ.
ಮೃತ ಸುಮಿತ್ರಮ್ಮ ಚಿಂತಾಮಣಿ ನಗರದ ಫಿಲ್ಟರ್ ಬೆಡ್ ರಸ್ತೆಯಲ್ಲಿ ವಾಸವಾಗಿದ್ದರು. ದುರ್ಗಾ ಮಹೋತ್ಸವ ವೀಕ್ಷಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗಳು, ಮಾರ್ಗಮಧ್ಯೆ ತರಕಾರಿ ಅಂಗಡಿಯೊಂದರಲ್ಲಿ ತರಕಾರಿ ಖರೀದಿಸಿ ಮುಂದಕ್ಕೆ ಸಾಗುತ್ತಿದ್ದರು ಎನ್ನಲಾಗಿದೆ.
ಹಿಂದಿನಿಂದ ಹಿಂಬಾಲಿಸಿ ಬಂದು ಭೀಕರ ದಾಳಿ
ತಾಯಿ-ಮಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರವಾಹನದಲ್ಲಿ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಟೋಪಿ ಧರಿಸಿದ್ದ ಅಪರಿಚಿತ ವ್ಯಕ್ತಿ ಜನಸಂದಣಿ ಕಡಿಮೆ ಇದ್ದ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಲಾಂಗ್ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ದಾಳಿಯಿಂದ ಸುಮಿತ್ರಮ್ಮ ಅವರ ಮುಖ, ತಲೆ, ಎದೆ ಹಾಗೂ ಹೊಟ್ಟೆಯ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಪುತ್ರಿ ಕಿರುಚಿಕೊಂಡಿದ್ದಾಳೆ. ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ತೀವ್ರವಾಗಿ ಗಾಯಗೊಂಡಿದ್ದ ಸುಮಿತ್ರಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದಾಂಪತ್ಯ ಕಲಹ ಹತ್ಯೆಗೆ ಕಾರಣವೇ?
ಸುಮಿತ್ರಮ್ಮ ಮತ್ತು ಅವರ ಮೊದಲ ಪತಿ ವೆಂಕಟರೆಡ್ಡಿ ನಡುವೆ ಅನ್ಯೋನ್ಯತೆ ಇರಲಿಲ್ಲ ಎನ್ನಲಾಗಿದ್ದು, ಇಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಪ್ರಕರಣ ವಿಚಾರಣೆಯಲ್ಲಿದೆ ಎನ್ನಲಾಗಿದೆ.
ಶ್ರೀನಿವಾಸಪುರ ತಾಲೂಕಿನ ಬೈಪಲ್ಲಿ ಗ್ರಾಮದವರಾಗಿದ್ದು ಮೊದಲ ಗಂಡ ವೆಂಕಟರೆಡ್ಡಿಯಿಂದ ದೂರವಾದ ನಂತರ ಅವರು ಚಿಂತಾಮಣಿ ತಾಲೂಕಿನ ಕಾಪಲ್ಲಿ ಗ್ರಾಮದ ರಮೇಶ್ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದರಂತೆ.
ಮೊದಲ ಪತಿಯ ಬಗ್ಗೆ ಮಗಳ ಅನುಮಾನ
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಧಾವಿಸಿದ ಸುಮಿತ್ರಮ್ಮ ಅವರ ಎರಡನೇ ಪತಿ ರಮೇಶ್ ಮಾತನಾಡಿ, ಸುಮಿತ್ರಮ್ಮ ಕುಟುಂಬದ ಸಹೋದರರು ತಿಳಿಸಿದ್ದರಿಂದ ತಾವು ಅವರನ್ನು ಮದುವೆಯಾಗಿದ್ದಾಗಿ ಹೇಳಿದ್ದಾರೆ. ಅಲ್ಲದೆ, “ನನಗೆ ಯಾರ ಮೇಲೂ ಅನುಮಾನವಿಲ್ಲ ಎಂದಿರುತ್ತಾರೆ ಆದರೆ, ಮೊದಲ ಪತಿ ವೆಂಕಟರೆಡ್ಡಿ ಅವರ ಮೇಲೆ ಮಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾಳೆ. ಹಲ್ಲೆಯ ಹಿಂದಿನ ನಿಖರ ಕಾರಣ ಹಾಗೂ ಘಟನೆಯಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಸ್ಥಳಕ್ಕೆ SP ಪದ್ಮಿನಿಸಾಹು ಭೇಟಿ
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ SP ಪದ್ಮಿನಿಸಾಹು ಹಾಗು ಡಿವೈಎಸ್ಪಿ ರಘು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.ನಗರದಲ್ಲಿ ನಡೆದ ಈ ಭೀಕರ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.



