ಗುಪ್ತಚರ ಇಲಾಖೆಗೆ ಲಭ್ಯವಾದ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮಾಹಿತಿ ಆಧರಿಸಿ ತನಿಖೆ ಆರಂಭಿಸಲಾಗಿದ್ದು, ಚಿಕ್ಕಬಳ್ಳಾಪುರ ಪೊಲೀಸರು ಶಬ್ಬೀರ್ ಎಂಬುವನನ್ನು ಬಂಧಿಸಿದ್ದಾರೆ. ಆತನ ವಿಚಾರಣೆಯ ಆಧಾರದ ಮೇಲೆ ಉತ್ತರ ಭಾರತ ಮೂಲದ ಸಲ್ಮಾನ್ ಎಂಬ ಮತ್ತೊಬ್ಬ ಶಂಕಿತನನ್ನೂ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ನ್ಯೂಜ್ ಡೆಸ್ಕ್: ದೇಶಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರು ಶಂಕಿತ ಉಗ್ರರರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರ ಬಡಾವಣೆಯ ಶಬ್ಬೀರ್ ಹಾಗೂ ಉತ್ತರ ಭಾರತ ಮೂಲದ ಸಲ್ಮಾನ್ ಬಂಧಿತ ಶಂಕಿತ ಉಗ್ರರಾಗಿದ್ದು,ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.
ಆರೋಪಿಗಳು ಟೆಲಿಗ್ರಾಂನಲ್ಲಿ ಗ್ರೂಪ್ ರಚಿಸಿಕೊಂಡು ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ ನಡೆಸುತ್ತಿದ್ದು ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಬಳಸುವ ಬಗ್ಗೆ ಗುಂಪಿನಲ್ಲಿ ಚರ್ಚೆ ನಡೆದಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಸೆಕ್ಷನ್ 113ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ವಿವಿಧ ರೀತಿಯ ದಾಳಿ ನಡೆಸುವ ಕುರಿತು ಆರೋಪಿಗಳು ಪ್ರತಿದಿನ ಟೆಲಿಗ್ರಾಂ ಗುಂಪಿನಲ್ಲಿ ಚರ್ಚಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಚರ್ಚೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ನಾಯಕರ ಹತ್ಯೆಗೆ ಸಂಚು
ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿಸ್ಸು ರಾಜ್ಯದ ಮೂವರು ಪ್ರಭಾವಿ ಬಿಜೆಪಿ ನಾಯಕರನ್ನು ಹತ್ಯೆಗೆ ಟಾರ್ಗೇಟ್ ಮಾಡಿಕೊಂಡು ಟೆಲಿಗ್ರಾಂ ಗ್ರೂಪ್ನಲ್ಲಿ ಚರ್ಚೆ ಮಾಡುತ್ತ ಇದ್ದ ಶಂಕಿತರು ಮುಸ್ಲಿಂ ವಿರೋಧಿಗಳನ್ನು ಮುಗಿಸಬೇಕು ಎಂದು ಗ್ರೂಪ್ನಲ್ಲಿ ಚರ್ಚೆ ನಡೆದಿದ್ದು, ಹಲವರನ್ನು ಮುಗಿಸಬೇಕು ಎಂದು ಈ ಶಂಕಿತ ಉಗ್ರರು ಟಾರ್ಗೆಟ್ ಹಾಕಿಕೊಂಡಿದ್ದರು ಎನ್ನಲಾಗಿದೆ.
ಹೊಸಕೋಟೆಯ ಇಬ್ಬರು ಹಾಗೂ ಹಾಸನದ ಒಬ್ಬರನ್ನು ಶಬ್ಬೀರ್ ಟೆಲಿಗ್ರಾಮ್ ಗ್ರೂಪ್ಗೆ ಸೇರಿಸಿದ್ದನಂತೆ. ಇನ್ನು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಶಬ್ಬೀರ್ ಗ್ರೂಪ್ಗೆ ಸೇರಿದ್ದ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಓದುತ್ತಿದ್ದ ಈತ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಗಾಂಜಾ ವ್ಯಸನಿಯಾಗಿದ್ದ ಎಂಬ ಮಾಹಿತಿ ಇದೆ. ಈತನಿಗೆ 6 ತಿಂಗಳ ನಂತರ ಗನ್ ಟ್ರೈನಿಂಗ್ ಕೊಡುವುದಾಗಿ ಅಡ್ಮಿನ್ ತಿಳಿಸಿದ್ದ ಎನ್ನಲಾಗಿದೆ.



