ಕೋಲಾರ:ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಲಿದ್ದು ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸೂಚನೆ ನೀಡಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಸೆಪ್ಟೆಂಬರ್ 29, 2026ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅಕ್ಟೋಬರ್ 23ರಂದು ಮತದಾನ ಹಾಗೂ ಅಕ್ಟೋಬರ್ 27ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಂತಿಮವಾಗಿ 31,497 ಮತದಾರರಿದ್ದು, 27 ಮೂಲ ಹಾಗೂ 16 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 43 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಬ್ಯಾನರ್, ಬಂಟಿಂಗ್ಸ್ ಮತ್ತು ಕಟೌಟ್ ಅಳವಡಿಸುವಂತಿಲ್ಲ. ಪ್ರಚಾರ ಕಾರ್ಯಗಳಿಗೆ ಬಳಸುವ ವಾಹನಗಳು, ಧ್ವನಿವರ್ಧಕಗಳು ಹಾಗೂ ಸಭೆ-ಸಮಾರಂಭಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಎಚ್ಚರಿಸಿದರು.
ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಹಣ, ಉಡುಗೊರೆ ಹಂಚುವುದು ಹಾಗೂ ಹಬ್ಬಗಳ ನೆಪದಲ್ಲಿ ಬಾಡೂಟದಂತಹ ಸಾಮೂಹಿಕ ಅನ್ನಸಂತರ್ಪಣೆ ಆಯೋಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳ ಆವರಣ ಹಾಗೂ ಸರ್ಕಾರಿ ಅತಿಥಿಗೃಹಗಳನ್ನು ಪ್ರಚಾರದ ಚಟುವಟಿಕೆಗಳಿಗೆ ಬಳಸುವಂತಿಲ್ಲ.
ನೀತಿ ಸಂಹಿತೆ ಉಲ್ಲಂಘನೆ ಮೇಲ್ವಿಚಾರಣೆಗಾಗಿ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವೀಕ್ಷಕ ತಂಡಗಳನ್ನು ರಚಿಸಲಾಗಿದ್ದು, ದೂರು ನೀಡಲು ಕಂಟ್ರೋಲ್ ರೂಮ್ ಸಹ ತೆರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಚುನಾವಣೆ ತಹಶೀಲ್ದಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
Trending
- ವಿಧ್ವಂಸಕ ಕೃತ್ಯಗಳಿಗೆ ಸಂಚು, ಇಬ್ಬರು ಶಂಕಿತ ಉಗ್ರರ ಬಂಧನ!
- ಪದವೀಧರ ಚುನಾವಣೆ ನೀತಿ ಸಂಹಿತೆ ಪಾಲಿಸಲು DC ಸೂಚನೆ.
- ಚಿರಂಜೀವಿ”ಕಾಕಾ”ಸಿನಿಮಾ ಪಾತ್ರದ ಹೆಸರು”ಕದರಿ ಕಾಳಿದಾಸು”!
- ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಡ್ರೋನ್ ಟೆಸ್ಟಿಂಗ್ ಹಬ್!
- ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಅದ್ದೂರಿ ಅಮೃತ ಮಹೋತ್ಸವ ಆಚರಣೆ!
- ಸೆ26 ರಿಂದ ದೇಶಾದ್ಯಂತ 5 ದಿನಗಳ ಕಾಲ ಬ್ಯಾಂಕ್ ಶಾಖ ಸೇವೆ ಇರಲ್ಲ!
- ತಾಡಿಗೋಳು ಕ್ರಾಸ್ ರಸ್ತೆ ಮಾರ್ಗಸೂಚಿ ಇಲ್ಲ ಬೆಳಕು ಇಲ್ಲದ ಕತ್ತಲೇಯ ಜಂಕ್ಷನ್!
- ಶ್ರೀನಿವಾಸಪುರ:ಯಲ್ದೂರು ಇತಿಹಾಸದ ಕುಂಟೆಗೆ ಚರಂಡಿ ನೀರು: ಗಬ್ಬು ನಾರುತ್ತಿದೆ ಊರು!
Saturday, September 26



