ಶ್ರೀನಿವಾಸಪುರ: ತಾಲೂಕಿನ ರೋಣೂರು ಪಂಚಾಯಿತಿ ವ್ಯಾಪ್ತಿಯ ನಾರಮಾಕಲಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆಯ ಸಂಕಷ್ಟ ಗ್ರಾಮಸ್ಥರು ಎದುರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಳವಡಿಸಿರುವ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಜಲ ಜೀವನ್ ಮಿಷನ್ (JJM) ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ ಎಂಬುದು ಸ್ಥಳೀಯರ ಆರೋಪ. ನೀರಿನ ನಳಗಳು ಬಳಕೆಯಲ್ಲಿಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿರುವಾಗ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸದೆ ಇರುವುದು ದುರಂತ ಎನ್ನುತ್ತಾರೆ.ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿದಿನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನೀರಿನ ಮೂಲ, ಪೈಪ್ಲೈನ್, ನಳಗಳ ಕಾರ್ಯನಿರ್ವಹಣೆ ಹಾಗೂ ನೀರು ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರ ಒತ್ತಾಯ. ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ ನಿಯಮಿತ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪಂಚಾಯಿತಿ ಅಧಿಕಾರಿ ಹೇಳಿದ್ದೇನು
ಗ್ರಾಮದಲ್ಲಿ ನೀರಿನ ಸಮಸ್ಯೆ ಕಳೆದ ನಾಲ್ಕೈದು ದಿನಗಳಿಂದ ಇದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಹೇಳುತ್ತಾರೆ.ಗ್ರಾಮ ನೀರು ಸರಬರಾಜು ಆಗುವ ಬೊರ್ ವೆಲ್ ಕೆಟ್ಟಿರುವುದರಿಂದ ಸರಿಮಾಡುವ ಸಂಬಂದ ತಂತ್ರಜ್ಞರಿಗೆ ಸೂಚಿಸಲಾಗಿದ್ದು. ಭಾನುವಾರಕ್ಕೆಲ್ಲ ಬೊರ್ ವೆಲ್ ರೀಪೇರಿಯಾಗಿ ಗ್ರಾಮಕ್ಕೆ ನೀರು ಸರಬರಾಜು ಆಗಲಿದೆ. ಕುಡಿಯುವ ನೀರಿನ ಘಟಕಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎನ್ನುತ್ತಾರೆ.



