ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವಾಗದ ಅಧಿಕಾರಿಗಳು ತೋಲಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ನಮಗೆ ಬೇಡ ಗ್ರಾಮಸ್ಥರ ಅಗ್ರಹ
ಶ್ರೀನಿವಾಸಪುರ: ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಗ್ರಾಮಸ್ಥರ ವಿವಿಧ ಕೆಲಸಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಆರೋಪಿಸಿದ್ದಾರೆ.
ಈ ಕುರಿತು ಲಕ್ಷ್ಮೀಸಾಗರ ಹಾಗೂ ಮಂಜಲನಗರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮಹೇಶ್ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಸಮಾಜ ಸೇವಕ ರಘುನಾಥ್ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಒಂದೂವರೆ–ಎರಡು ತಿಂಗಳಿಂದ ವಿವಿಧ ಕೆಲಸಗಳು ಹಾಗೂ ಬಿಲ್ಗಳಿಗೆ ಸಂಬಂಧಿಸಿದಂತೆ ಸ್ಪಂದನೆಗಾಗಿ ಪಂಚಾಯಿತಿಗೆ ಅಲೆದಾಡುತ್ತಿದ್ದರೂ, ಪಿಡಿಒ ಅವರು ಸಿಗುತ್ತಿಲ್ಲ ಎಂದು ದೂರಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿದ್ದರೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒಂದಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳ ಇನ್ಚಾರ್ಜ್ ಹೊಂದಿರುವುದನ್ನೇ ನೆಪ ಮಾಡಿಕೊಂಡು ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯಲ್ಲಿ ಕೇವಲ ಹಾಜರಾತಿಗಾಗಿ ಬೆರಳಚ್ಚು ಹಾಕಿ ತೆರಳುತ್ತಿದ್ದಾರೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿಬಂದಿದೆ. ಅಭಿವೃದ್ಧಿ ಅಧಿಕಾರಿ ಮಹೇಶ್ ಅವರು ಕಚೇರಿಯಲ್ಲಿ ಸಿಕ್ಕರೂ ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುವುದಿಲ್ಲ. “ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂಬ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಮಂಜಲನಗರ ಗ್ರಾಮದ ರಘುನಾಥ್ ಆರೋಪಿಸಿದ್ದಾರೆ. ಇ-ಸ್ವತ್ತು ಸೇರಿದಂತೆ ವಿವಿಧ ಕೆಲಸಗಳಿಗಾಗಿ ಹಲವು ದಿನಗಳಿಂದ ಸಾರ್ವಜನಿಕರು ಪಂಚಾಯಿತಿಗೆ ಅಲೆದಾಡುತ್ತಿದ್ದರೂ ಪಿಡಿಒ ಹಾಗೂ ಕಾರ್ಯದರ್ಶಿಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಸಿಕ್ಕರೂ ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡುತ್ತಾ ಸಾರ್ವಜನಿಕರನ್ನು ಸತಾಯಿಸಲಾಗುತ್ತಿದೆ ಎಂದು ರಘುನಾಥ್ ದೂರಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಅನುದಾನ ಬಂದಿಲ್ಲ ಎಂಬ ಕಾರಣ ನೀಡಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡಲಾಗುತ್ತಿದ್ದರೂ, ನಕಲಿ ವೋಚರ್ಗಳ ಮೂಲಕ ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ ಮೂರು ತಿಂಗಳಿಂದ ಪಂಚಾಯಿತಿಯ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಕೇವಲ ಹಾಜರಾತಿ ಹಾಕಿ ತೆರಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜಲನಗರದ ವಿಶ್ವನಾಥ್, ಸುರೇಶ್, ಶಿವಣ್ಣ, ಮುಳಬಾಗಿಲಪ್ಪ, ಲಕ್ಷ್ಮೀಸಾಗರದ ಹರೀಶ್ ಗೌಡ, ಶ್ಯಾಗತ್ತೂರಿನ ಎಸ್.ಟಿ. ನಾಗರಾಜ್, ನಾರಾಯಣಪುರದ ರಘುಪತಿ, ಶೇಷಪುರದ ಶಿವ, ಬೈರಾರೆಡ್ಡಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.



