ನ್ಯೂಜ್ ಡೆಸ್ಕ್:ಶ್ರೀಶೈಲ ಕ್ಷೇತ್ರದಲ್ಲಿ ಇರುವ ರಹಸ್ಯ ಕ್ಷೇತ್ರವಾದ ಮಾತೆ ಇಷ್ಟಕಾಮೇಶ್ವರಿ ಅಮ್ಮನವರು ಮನುಷ್ಯನ ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎನ್ನುತ್ತಾರೆ.ಶ್ರೀಶೈಲದಿಂದ ಸುಮಾರು 21 ಕಿಮೀ ದೂರದಲ್ಲಿ ನಲ್ಲಮಲ್ಲ ಕಾಡಿನಲ್ಲಿರುವ 8 ಅಥವಾ 9 ನೇ ಶತಮಾನದ ಪ್ರಾಚೀನ ಕಾಲಕ್ಕೆ ಸೇರಿದ ದೇವಾಲಯ.
ಇಷ್ಟ+ಕಾಮ+ ಈಶ್ವರಿ ಈ ಮೂರು ಪದ ಸೇರಿ, ಆಕೆ ಇಷ್ಟಕಾಮೇಶ್ವರಿ ದೇವಿ ಆಗಿದ್ದಾಳೆ. ಇಷ್ಟ ಅಂದರೆ ಮನದ ಆಸೆ, ಕಾಮ ಅಂದರೆ ಕೋರಿಕೆ, ಈಶ್ವರಿ ಅಂದರೆ ದೇವತೆ. ಮನದಲ್ಲಿ ಇರುವ ಸದುದ್ದೇಶದ ಆಸೆಯ ಕೋರಿಕೆಗಳನ್ನು ಈಡೇರಿಸುವುದಕ್ಕೆ ಅನುಗ್ರಹ ನೀಡುವ ದೇವತೆ ಆಕೆ ಆದ್ದರಿಂದ ಇಷ್ಟಕಾಮೇಶ್ವರಿ ಎಂದು ಕರೆಯಲಾಗುತ್ತದೆ.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬಿಕಾ ಅಮ್ಮನವರು ನೆಲೆಸಿರುವ ಶ್ರೀ ಶೈಲ ಕ್ಷೇತ್ರದಲ್ಲಿ ಅನೇಕ ಆಧ್ಯಾತ್ಮಿಕ ರಹಸ್ಯಗಳ ನೆಲೆ ಎನ್ನಬಹುದು.ಪುರಾಣಗಳ ಪ್ರಕಾರ, ಲಲಿತಾ ತ್ರಿಪುರ ಸುಂದರಿ ದೇವಿಯ ಶಕ್ತಿಯುತ ರೂಪವೇ ಇಷ್ಟಕಾಮೇಶ್ವರಿದೇವಿ ಎನ್ನುತ್ತಾರೆ. ಭಕ್ತರಿಗೆ ಅರಿವಿಲ್ಲದೆ ಮೂಡುವ ದುರಾಸೆಗಳನ್ನು ಹತೋಟಿಗೆ ತಂದು, ಅವರ ಹಿತಕ್ಕೆ ಪೂರಕವಾದ ‘ಇಷ್ಟಗಳನ್ನು’ ಮಾತ್ರ ಈ ತಾಯಿ ಕರಣಿಸುತ್ತಾಳೆ. ಆದಿ ಶಂಕರಾಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರು. ಅವರು ಶಿವಾನಂದ ಲಹರಿ ಬರೆದ ನಂತರದಲ್ಲಿ ಈ ಸ್ಥಳಕ್ಕೆ ಬಂದಿದ್ದರು ಎನ್ನಲಾಗುತ್ತದೆ. ಇನ್ನು ಈ ದಟ್ಟ ಕಾಡಿನಲ್ಲಿ ಅನೇಕ ಮುನಿಗಳು, ಸಿದ್ಧರು ತಪಸ್ಸನ್ನು ಮಾಡುತ್ತಿದ್ದರು. ಅವರಿಗೆ ಸಿದ್ಧಿಯನ್ನು ಕರುಣಿಸಿದವಳು ಇಷ್ಟಕಾಮೇಶ್ವರಿ ದೇವಿ ಅಂತಲೂ ಸ್ಥಳೀಯವಾಗಿ ವಾಸ ಇರುವಂಥ ಚೆಂಚು ಬುಡಕಟ್ಟಿನ ಜನರಿಗೆ ಈಕೆ ಕಾಡನ್ನು ರಕ್ಷಣೆ ಮಾಡುವ ಅಧಿದೇವತೆಯೂ ಆಗಿದ್ದಾಳೆ.ಸಿದ್ಧರು ಸಾಧಕರು ತಪ್ಪಸ್ಸು ಮಾಡಿದ ನೆಲೆ ಶ್ರೀ ಶೈಲ ಸಿದ್ಧಕ್ಷೇತ್ರದಲ್ಲಿ ತಾಯಿಯ ದರ್ಶನಕ್ಕೆ.ದಟ್ಟವಾದ ನಲ್ಲಮಲ್ಲ ಕಾಡಿನ ಮಧ್ಯದಲ್ಲಿ ದುರ್ಗಮವಾದ ಅತ್ಯಂತ ಕಷ್ಟಕರವಾದ ದಾರಿ ಮೂಲಕ ಸಾಗಿದರೆ ಪಕ್ಷಿಗಳ ಚಿಲಿಪಿಲಿ ನಾದ ಭೋರ್ಗೇರೆಯುವ ಜಲಪಾತಗಳ ನಡುವೆ, ಹರಿಯುವ ಸಣ್ಣ-ಸಣ್ಣ ಝರಿಗಳ ಮದ್ಯದಲ್ಲಿ ಪ್ರಶಾಂತವಾದ ವಾತವರಣದಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾತೆ ಇಷ್ಟಕಾಮೇಶ್ವರಿ ದೇವಾಲಯ ಇದೆ.
ದೇವರ ದರ್ಶನ ಅಷ್ಟು ಸುಲಭ ಸಾಧ್ಯವಲ್ಲ ಇದೊಂದು ನಿರ್ಭಂದಿತ ಅರಣ್ಯ ಪ್ರದೇಶ ಸಾಮಾನ್ಯ ವಾಹನಗಳ ಮೂಲಕ ಇಲ್ಲಿಗೆ ಹೋಗಲು ಸಾಧ್ಯವಾಗದು.
ಇಷ್ಟಕಾಮೇಶ್ವರಿ ದೇವಾಲಯ ತಲುಪಲು ವಿಶೇಷ ಜೀಪುಗಳಲ್ಲಿ ಪ್ರಯಾಣಿಸಬೇಕು. ನಂತರ ಅಂದಾಜು 1 ಕೀ.ಮಿ ಕಾಡಿನ ಬೆಟ್ಟಗಳು ಮತ್ತು ಕಣಿವೆಗಳ ಮದ್ಯ ನಡೆದು ಸಾಗಿದರೆ ಅಭೂತಪೂರ್ವ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸಿಗುತ್ತದೆ ಇಲ್ಲಿ ಅಮ್ಮನವರು ಇಷ್ಟಕಾಮೇಶ್ವರಿ ಮಾತೆ ಚತುರ್ಭುಜ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಆಕೆಯ ಎರಡೂ ಕೈಗಳಲ್ಲಿ ಕಮಲದ ಮೊಗ್ಗುಗಳು, ಒಂದು ಕೈಯಲ್ಲಿ ರುದ್ರಾಕ್ಷ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಶಿವಲಿಂಗವನ್ನು ಧರಿಸಿದ ಯೋಗಿನಿಯ ರೂಪದಲ್ಲಿ ದರ್ಶನ ನೀಡುತ್ತಾಳೆ.
ಭಾರತದಲ್ಲಿ ಶ್ರೀ ಇಷ್ಟಕಾಮೇಶ್ವರಿ ಅಮ್ಮ ನೆಲೆ ನಿಂತ ಏಕೈಕ ಸ್ಥಳ ಭಕ್ತರ ನಂಬಿಕೆ.ದೇವಿಯ ಸನ್ನಿಧಿಯಲ್ಲಿ ಭಕ್ತಿಯಿಂದ ಕೋರಿದ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ಅನುಭವದ ಮಾತು. ಅದಕ್ಕಾಗಿಯೇ ದೇವಿಯನ್ನು ‘ಇಷ್ಟಾರ್ಥಗಳನ್ನು ನೇರವೇರಿಸುವ ಕಾಮೇಶ್ವರಿ’ ಎಂದು ಕರೆಯಲಾಗುತ್ತದೆ. ಮತ್ತೊಂದು ವಿಶೇಷವೆಂದರೆ ದೇವಿಯ ಶಿಲಾ ವಿಗ್ರಹ ಇಂದಿಗೂ ರಹಸ್ಯವಾಗಿ ಉಳಿದಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಮನೋಭೀಷ್ಟ ಈಡೇರಲಿ ಎಂದು ಪ್ರಾರ್ಥಿಸಿ,ದೇವಿಯ ಹಣೆಗೆ ಕುಂಕುಮ ಇಟ್ಟರೆ ಅಮ್ಮನ ಹಣೆ ಕಲ್ಲಿನ ಅನುಭವ ನೀಡುವುದಿಲ್ಲ ಅದು ಮಾನವ ಹಣೆಯಷ್ಟೇ ಮೃದುವಾಗಿರುತ್ತದೆ ಎನ್ನುತ್ತಾರೆ ಭಕ್ತರು.ಈ ವಿಚಾರದ ಹಿಂದಿನ ರಹಸ್ಯವನ್ನು ಇಂದಿಗೂ ಯಾರಿಂದಲೂ ಭೇದಿಸಲು ಸಾಧ್ಯವಾಗಿಲ್ಲ.
ಇಷ್ಟಕಾಮೇಶ್ವರಿ ದೇವಸ್ಥಾನ ತುಂಬ ಆಡಂಬರದ್ದೇನಲ್ಲ. ಜತೆಗೆ ಪ್ರವಾಸೋದ್ಯಮ ಸವಲತ್ತುಗಳು ಸಹ ಇರುವುದಿಲ್ಲ ಸರಳವಾದ ಮಂಟಪದಲ್ಲಿ ಇದ್ದು, ಅದರೊಳಗೆ ದೇವಿಯ ವಿಗ್ರಹ ಇದೆ.ಇಲ್ಲಿಗೆ ತೆರಳುವುದಕ್ಕೆ ನಿಯಮಾವಳಿಗಳು ಇದ್ದು ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರಿಗೂ ದೇವಿ ದರ್ಶನ ಮಾಡಬಹುದು. ಸಂಜೆಯಾಗುತ್ತಾ ಬಂದಂತೆ ವನ್ಯಜೀವಿಗಳ ಸಂಚಾರ ಇರುತ್ತದಾದ್ದರಿಂದ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅಲ್ಲಿಂದ ಹೊರಟು ಬರಬೇಕು.
ಶ್ರೀಶೈಲಂನಿಂದ ಜೀಪುಗಳು ಬಾಡಿಗೆಗೆ ದೊರೆಯುವುದು. ಅದರ ಮೂಲಕವೇ ತೆರಳುವುದು ಉತ್ತಮ ಆಯ್ಕೆ. ದೈಹಿಕವಾದ ಸಮಸ್ಯೆ ಇರುವಂತವರು,ಬೆನ್ನು ನೋವು ಮೂಳೆ ಸಂಬಂದಿ ಇತ್ಯಾದಿ ಸಮಸ್ಯೆ ಇರುವವರು, ಗರ್ಭಿಣಿಯರು ಇಲ್ಲಿಗೆ ಭೇಟಿ ನೀಡುವ ಮುನ್ನ ಸಾಗುವ ಹಾದಿಯ ಸವಾಲುಗಳ ಬಗ್ಗೆ ತಿಳಿದುಕೊಂಡು ಹೋಗುವುದು ಉತ್ತಮ.ಜೋತೆಗೆ ಉಪಾಹಾರ- ಊಟ ತೆಗೆದುಕೊಂಡು ಹೋಗುವವರು ಪರಿಸರದ ಬಗ್ಗೆ ಕಾಳಜಿ ಇರಲಿ ಪ್ಲಾಸ್ಟಿಕ್ ಚೀಲ ಪೇಪರ್ ಹಾಗು ಬಾಟಲು ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ನೋಡಿಕೊಳ್ಳಿ. ಋಷಿಗಳು, ಯೋಗಿಗಳು ಮತ್ತು ತಪಸ್ವಿಗಳಿಂದ ಪೂಜಿಸಲ್ಪಟ್ಟ ಈ ಸ್ಥಳವು ಇನ್ನೂ ಧ್ಯಾನ ಮತ್ತು ಆಧ್ಯಾತ್ಮಿಕ ಅಭ್ಯಾಸಕ್ಕೆ ಅತ್ಯಂತ ಸೂಕ್ತವಾದ ಸ್ಥಳವೆಂದು ಪರಿಗಣಿಸಲಾಗಿದೆ. ಇಷ್ಟಕಾಮೇಶ್ವರಿಯ ಅನುಗ್ರಹದಿಂದ ಎಲ್ಲರ ಜೀವನದ ಇಷ್ಟಾರ್ಥಗಳು ನೇರವೇರಲಿ ಎಂದು ಆಶಿಸೋಣ.



