- 1,000 ವರ್ಷಗಳ ಹಿಂದೆ ಮತಾಂಧ ಮೊಹಮ್ಮದ್ ಘಜ್ನಿ ಕ್ರಿ.ಶ. 1026ರಲ್ಲಿ ಸೋಮನಾಥದ ಮೇಲೆ ದಾಳಿ
- ಸ್ವಾತಂತ್ರ್ಯ ನಂತರ ಸರ್ದಾರ್ ಪಟೇಲರು ಸೋಮನಾಥ ದೇವಾಲಯ ಪುನರ್ನಿರ್ಮಾಣ ಮಾಡಿ 75 ವರ್ಷ
- ರಾಷ್ಟ್ರದ ಏಳಿಗೆಗಾಗಿ ದೇವಾಲಯದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ
- ಭಕ್ತರ ಜೊತೆ ಬೆರೆತು ಭಕ್ತಿಯಿಂದ ಸಾಮೂಹಿಕ ‘ಓಂಕಾರ ಮಂತ್ರ’ ಪಠಣ


ನ್ಯೂಜ್ ಡೆಸ್ಕ್:ದಾಳಿಕೊರ ಮತಾಂಧ ಮೊಹ್ಮದ್ ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲಾ ಮಣ್ಣು ಮುಕ್ಕಿ ಸಮಾಧಿಯಾದರು.ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು.ಆದರೆ ಭಗವಾನ್ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ಅಚಲವಾಗಿ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊಹ್ಮಮದ್ ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಕಳದಿದೆ ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.ಶಿವನ ಮೊದಲ ಜ್ಯೋತಿರ್ಲಿಂಗವಾದ ಸೋಮನಾಥ ದೇವಾಲಯದ ನೆಲದಲ್ಲಿ ಪ್ರಧಾನಿ ಮೋದಿ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಿದರಲ್ಲದೆ, ಸ್ವಾಭಿಮಾನ, ಶೌರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸ್ಪಷ್ಟ ಸಂದೇಶವನ್ನು ಸಹ ನೀಡಿದರು.
ನಾವು ಜೀವಿಗಳಲ್ಲೂ ಶಿವನನ್ನು ನೋಡುವ ಜನ, ಸೋಮನಾಥ ದೇವಾಲಯದ ಶೌರ್ಯದ ಗಾಥೆ 1000 ವರ್ಷಗಳನ್ನು ಪೂರೈಸಿದ್ದರೆ, ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಪೂರ್ವಜರು ತಮ್ಮ ಭಗವಾನ್ ಶಿವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಪ್ರಾಣವನ್ನೇ ಪಣಕ್ಕಿಟ್ಟವರಿಗೆ ನಮನ
ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ವಿಧ್ಯುಕ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶೌರ್ಯ ಯಾತ್ರೆಯು ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾದ 108 ಕುದುರೆಗಳನ್ನು ಹೊಂದಿರುವ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು.
ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಅದೇ ಶಕ್ತಿಗಳು ನಮ್ಮ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ ಎಂದು ಕುಟಕಿದರು. ಸರ್ದಾರ್ ಪಟೇಲ್ ಸೋಮನಾಥವನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದಾಗ (1951 ರಲ್ಲಿ), ಅವರನ್ನು ತಡೆಯಲು ಪ್ರಯತ್ನಗಳು ನಡೆದವು.ಮುಂದೆಯೂ ಸಹ ನಾವು ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.



