ನ್ಯೂಜ್ ಡೆಸ್ಕ್: ಶ್ರೀ ಕೃಷ್ಣನ ನಗರ ಗುಜರಾತನ ದ್ವಾರಕದಲ್ಲಿರುವ ಅರಬ್ಬಿ ಸಮುದ್ರದ ಆಳಕ್ಕಿಳಿದ ಪ್ರಧಾನಿ ನರೇಂದ್ರ ಮೋದಿ,
ಸಮುದ್ರ ತಟದಲ್ಲಿ ಸಮುದ್ರದೊಳಗಿರುವ ದ್ವಾರಕಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.
ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಗುಜರಾತ್ ರಾಜ್ಯದಲ್ಲಿರುವ ದ್ವಾರಕ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವ ಮೋದಿಯ ಅತ್ಯಂತ ಕಠಿಣವಾದ ಸಾಧನೆ ಬಗ್ಗೆ ಸರ್ವತಾ ಶ್ಲಾಘನೆಗೆ ವ್ಯಕ್ತವಾಗಿದೆ.
ಭಾರತದ ಅತ್ಯಂತ ಪ್ರಾಚೀನ ನಗರಿಗಳಲ್ಲಿ ಒಂದಾಗಿರುವ ದ್ವಾರಕಾಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಅಂಡರ್ ವಾಟರ್ ನಲ್ಲಿ ಸಾಹಸಮಯವಾಗಿ ಪೂಜೆ ಸಲ್ಲಿಸಿದ್ದಾರೆ.ಸಮುದ್ರದ ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ತಮ್ಮ ಎಕ್ಸ್ Xನಲ್ಲಿ (ಟ್ವಿಟರ್) ಮೋದಿ ಬರೆದುಕೊಂಡಿದ್ದಾರೆ. ಅಲ್ಲದೆ ನೀರಿನಲ್ಲಿ ಮುಳುಗಿದ ಕೆಲವು ಫೋಟೊಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ದ್ವಾರಕಾದದಲ್ಲಿ ಪ್ರಧಾನಿ ಮೋದಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಗುಜರಾತ್ನ ಪ್ರಸಿದ್ಧ ದೇವಭೂಮಿ ದ್ವಾರಕಾ ನಗರದಿಂದ ಬೇಟ್ ದ್ವಾರಕಾ ದ್ವೀಪಕ್ಕೆ ಓಖಾ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಅರಬ್ಬಿ ಸಮುದ್ರದ ಮೇಲೆ 2.32 ಕಿಮೀ ದೇಶದ ಅತಿ ಉದ್ದದ ಕೇಬಲ್ ತಂಗುವ ಸೇತುವೆ ‘ಸುದರ್ಶನ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಬೇಟ್ ದ್ವಾರಕಾದಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಇಂದಿನ ಕಾರ್ಯಕ್ರಮವನ್ನು ಆರಂಭಿಸಿದ ಅವರು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳು ಮತ್ತು ಎರಡೂ ಬದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಪಾದಚಾರಿ ಮಾರ್ಗವನ್ನು ಒಳಗೊಂಡಿರುವ ವಿಶಿಷ್ಟ ವಿನ್ಯಾಸದ ‘ಸುದರ್ಶನ ಸೇತು’ ಎಂಬ ನಾಲ್ಕು ಪಥದ ಕೇಬಲ್-ತೂಗು ಸೇತುವೆಯನ್ನು ಉದ್ಘಾಟಿಸಿರುತ್ತಾರೆ.
ಕೇಬಲ್ ಸೇತುವೆಯ ವಿಶೇಷ
2.32 ಕಿಮೀ ಉದ್ದದ ಸೇತುವೆ, 900 ಮೀಟರ್ ಸೆಂಟ್ರಲ್ ಡಬಲ್ ಸ್ಪ್ಯಾನ್ ಕೇಬಲ್-ಸ್ಟೇಡ್ ಭಾಗ ಮತ್ತು 2.45 ಕಿಮೀ ಉದ್ದದ ಸಂಪರ್ಕ ರಸ್ತೆಯನ್ನು 979 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ನಾಲ್ಕು ಪಥದ 27.20 ಮೀಟರ್ ಅಗಲದ ಸೇತುವೆಯು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಕಾಲುದಾರಿಗಳನ್ನು ಹೊಂದಿದೆ. ‘ಸಿಗ್ನೇಚರ್ ಸೇತುವೆ’ ಎಂದು ಕರೆಯಲಾಗುತ್ತಿದ್ದ ಸೇತುವೆಯನ್ನು ‘ಸುದರ್ಶನ ಸೇತು’ ಎಂದು ಮರುನಾಮಕರಣ ಮಾಡಲಾಗಿದೆ.
ಬೆಟ್ ದ್ವಾರಕ ವಿಶೇಷ ಏನು
ಬೆಟ್ ದ್ವಾರಕಾ, ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ, ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ಪ್ರಾಚಿನ ದೇವಾಲಯವಿದೆ.ಇಲ್ಲಿಗೆ ಭಕ್ತರು ಭೇಟಿ ನೀಡಲು ದೋಣಿ ಮೂಲಕ ಪ್ರಯಾಣಿಸಬಹುದಾಗಿದ್ದು ಅದು ಹಗಲಿನಲ್ಲಿ ಮಾತ್ರ ಸಾಧ್ಯವಾಗುತಿತ್ತು,ಸುದರ್ಶನ ಸೇತುವೆ ನಿರ್ಮಾಣದಿಂದ ಎಲ್ಲಾ ಸಮಯದಲ್ಲೂ ಪ್ರಯಾಣಿಕರು ವಾಹನಗಳ ಮೂಲಕ ಸುಗಮವಾಗಿ ಪ್ರಯಾಣಿಸಲು ಅನುವು ಅಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ. ಈ ಸೇತುವೆಯು ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಬಹಳ ಮುಖ್ಯವಾದುದಾಗಿದೆ. ಸ್ಕೂಬಾ ಡೈವಿಂಗ್ ಅನ್ನು ದ್ವಾರಕ ನಗರಕ್ಕೆ ಸುಮಾರು 30 ಕೀ.ಮಿ ದೂರದ ಬೇಟ್ ದ್ವಾರಕಾ ದ್ವೀಪದ ಬಳಿ ನಡೆಸಲಾಗುತ್ತದೆ. ಸಮುದ್ರ ಆಳದಲ್ಲಿ ಪುರಾತತ್ವ ತಜ್ಞರು ಉತ್ಖನನ ಮಾಡಿದ ಪ್ರಾಚೀನ ನಗರವಾಗಿದ್ದ ದ್ವಾರಕಾದ ಅವಶೇಷಗಳು ಅಲ್ಲಿ ಕಾಣಸಿಗುತ್ತದೆ.ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳಿಗೆ ಅಪರೂಪದ ಮತ್ತು ಆಳವಾದ ಸಂಪರ್ಕಕ್ಕೆ ಈ ಭೇಟಿ ಕಾರಣವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.