ಶ್ರೀನಿವಾಸಪುರ ತಾಲೂಕಿನ ಆಂಧ್ರದ ಗಡಿಯಂಚಿನ ಪುಲಗೂರುಕೋಟೆ ಭಾಗದಲ್ಲಿ ಬೋರ್ವೆಲ್ ಕೇಬಲ್ ಕಳ್ಳತನದಿಂದ ರೈತರಿಗೆ ಸಂಕಷ್ಟ
ಶ್ರೀನಿವಾಸಪುರ: ತಾಲೂಕಿನ ಆಂಧ್ರದ ಗಡಿಯಂಚಿನಲ್ಲಿ ಇರುವ ಪುಲಗೂರುಕೋಟೆ ಭಾಗದ ರೈತರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡುತ್ತಿದೆ. ಒಂದೆಡೆ ಬರಗಾಲದ ಬಿಸಿಲಿಗೆ ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಮತ್ತೊಂದೆಡೆ ಅಷ್ಟೋ ಇಷ್ಟೋ ನೀರಿರುವ ಕೊಳವೆಬಾವಿಗಳನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಕಳ್ಳರ ಕಾಟ ಶುರುವಾಗಿದೆ .
ಪುಲಗೂರುಕೋಟೆ ಸುತ್ತಮುತ್ತಲಿನ ರೈತರ ಕೊಳವೆಬಾವಿಗಳಿಗೆ ಅಳವಡಿಸಿರುವ ತಾಮ್ರದ ತಂತಿ ಹಾಗೂ ವಿದ್ಯುತ್ ಕೇಬಲ್ಗಳನ್ನು ರಾತ್ರಿಯ ಸಮಯದಲ್ಲಿ ಕಳ್ಳರು ಸರಣಿಯಾಗಿ ಕತ್ತರಿಸಿಕೊಂಡು ಹೋಗುತ್ತಿದ್ದಾರೆ.ಕತ್ತರಿಸಿಕೊಂಡು ಕದ್ದೊಯ್ಯುತ್ತಿರುವ ಘಟನೆಗಳು ನಿರಂತರವಾಗುತ್ತಿದೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಮಳೆ ಕೊರತೆ, ಬೆಳೆ ನಷ್ಟ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದ ನಡುವೆ ಹೇಗೋ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಇದೀಗ ಬೋರ್ವೆಲ್ ಕೇಬಲ್ ಕಳ್ಳತನ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೇಬಲ್ ಕಳ್ಳತನದಿಂದ ಕೊಳವೆಬಾವಿಗಳನ್ನು ಬಳಸಲು ಸಾಧ್ಯವಾಗದೆ ನೀರಾವರಿ ವ್ಯವಸ್ಥೆ ಸಮಸ್ಯೆ ಆಗಿದೆ ಎಂದು ರೈತರು ಅಸಾಯಿಕತೆಯಿಂದ ಹೇಳುತ್ತಾರೆ.
ಕಳ್ಳತನ ನಡೆಯುತ್ತಲೇ ಇದೆ
ಈ ಕುರಿತು ಪುಲಗೂರುಕೋಟೆ ಗ್ರಾಮದ ರೈತರು ಹೇಳುವಂತೆ ನಮ್ಮ ಹೊಲಗಳಲ್ಲಿ ಹಾಕಿದ್ದ ಕೇಬಲ್ಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ನೀರಾವರಿಯನ್ನು ನಂಬಿಕೊಂಡಿರುವ ರೈತರಿಗೆ ಕಳ್ಳರ ಹಾವಳಿ ವಿಪರೀತವಾಗಿದೆ. ಕೊಳವೆಬಾವಿಗಳ ತಂತಿ ಮತ್ತು ಕೇಬಲ್ಗಳನ್ನು ಕಳ್ಳತನ ಮಾಡಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಾವು ಕೃಷಿ ಬಿಟ್ಟಿಲ್ಲ. ಹೇಗೋ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.
ಕಳ್ಳತನದ ಬಗ್ಗೆ ರಾಯಲ್ಪಾಡು ಪೊಲೀಸರಿಗೆ ದೂರು ನೀಡಿ 15 ದಿನ ಕಳೆದರೂ ಕ್ರಮವಾಗಿಲ್ಲ, ಕಳ್ಳತನ ಮುಂದುವರಿಯುತ್ತಲೇ ಇದೆ. ಇದರಿಂದ ರೈತರು ಇನ್ನಿಲ್ಲದ ಸಂಕಷ್ತಕ್ಕೆ ಒಳಗಾಗಿದ್ದಾರೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಳ್ಳತನಕ್ಕೆ ಕಡಿವಾಣ ಹಾಕಬೇಕು” ಎಂದು ರೈತರು ಅಗ್ರಹಿಸಿದ್ದಾರೆ.



