- ಕೋಲಾರದಲ್ಲಿ ವಿಪಕ್ಷ ನಾಯಕನಿಗೆ ಅದ್ಧೂರಿ ಸ್ವಾಗತ
- ಸಿದ್ದರಾಮಯ್ಯಗೆ ಹೂಮಳೆ, ಪಟಾಕಿ ಸಿಡಿಸಿ ಸ್ವಾಗತಿಸಿದ ಕಾರ್ಯಕರ್ತರು
- ಕೋಲಾರಮ್ಮ ದೇವಸ್ಥಾನದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ
ಕೋಲಾರ:ಮುಂಬರುವ 2023 ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪದೇ ಪದೇ ಒತ್ತಡ ಹೇರುತ್ತಿರುವುರುವ ಹಿನ್ನಲೆಯಲ್ಲಿ ಸ್ಪರ್ದಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಕೋಲಾರದಲ್ಲಿ ಹೇಳಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಎಲ್ಲಾ ಜನರು ಪಕ್ಷವನ್ನು ಬೆಂಬಲಿಸುವ ಅವಶ್ಯಕತೆ ಇದೆ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಜಿಲ್ಲೆಗೆ ಭೇಟಿ ನೀಡಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಇಂದು ಬೆಂಗಳೂರಿನಿಂದ ವಿಶೇಷ ಬಸ್(Caravan) ನಲ್ಲಿ ಕೋಲಾರಕ್ಕೆ ಆಗಮಿಸಿದ ಅವರನ್ನು ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತ ಮಾಡಿದರು.
ಕೋಲಾರಕ್ಕೆ ಆಗಮಿಸಿದ ಕೂಡಲೇ ಸಿದ್ದರಾಮಯ್ಯ ನೇರವಾಗಿ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ನಂತರ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು ಅಲ್ಲಿ ಕ್ರೈಸ್ತ ಸಮುದಾಯದ ಮುಖಂಡರೊಂದಿಗೆ ಮಾತನಾಡಿ ನಾನು ಇವತ್ತು ನಾಮಿನೇಷನ್ ಮಾಡಲು ಬಂದಿಲ್ಲ. ಕೋಲಾರದಲ್ಲಿ ನಿಲ್ಲಬೇಕು ಎಂದು ಒತ್ತಡವಿದೆ ಇಲ್ಲಿನ ಜನರ ಮೇಲೆ ಪ್ರೀತಿ ಇದೆ. ವಿಶೇಷ ಗೌರವ ಇದೆ ಈಗ ನಾನು ಬಾದಾಮಿ ಶಾಸಕನಾಗಿದ್ದೇನೆ.ಬಾದಾಮಿಯಲ್ಲಿ,ವರುಣದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ.ನಮ್ಮ ಆಡಳಿತ ಅವಧಿಯಲ್ಲಿ ಯಾವ ಧರ್ಮಕ್ಕೂ ತೊಂದರೆ ಆಗಿಲ್ಲ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿದ್ದೇನೆ.ಎಲ್ಲಾ ವರ್ಗದವರಿಗೆ ಕಾರ್ಯಕ್ರಮಗಳನ್ನು ಕೊಡುವ ಕೆಲಸ ಮಾಡಿದ್ದೇನೆ ಎಂದ ಸಿದ್ದರಾಮಯ್ಯ ಎಂದೂ ಕೂಡ ಧರ್ಮದ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದವನಲ್ಲ.ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರಿದ್ದಾರೆ. ಈ ದೇಶ ಬಹುತ್ವ ಇರುವಂತದ್ದು. ಅನೇಕ ಭಾಷೆ, ಧರ್ಮ,ಜಾತಿಗಳು ಇರುವ ಬಹುತ್ವದ ದೇಶ.ಯಾವುದೇ ಜಾತಿ, ಧರ್ಮಕ್ಕೆ ಸೇರಿದರೂ ಅದಕ್ಕೂ ಮೊದಲು ನಾವು ಮನುಷ್ಯರು. ಮನುಷ್ಯನಾಗಿ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು.ಅದೇ ಮನುಷತ್ವ ಎಂದರು.ಬಿಜೆಪಿ ಹಾಗೂ ಬೇರೆ ಪಕ್ಷಗಳು ಧರ್ಮ,ಜಾತಿ ಆಧಾರಿತವಾಗಿ ರಾಜಕೀಯ ಮಾದುತ್ತವೆ.ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತದೆ ಎಂದರು.
ಮಾಜಿ ಸಂಸದ ಮುನಿಯಪ್ಪ ಬೆಂಬಲಿಗರಿಂದ ಅದ್ಧೂರಿ ಸ್ವಾಗತ
ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಅವರು ಗುಜರಾತ್ ನಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲಿ ಕೆ.ಎಚ್. ಮುನಿಯಪ್ಪ ಅಭಿಮಾನಿಗಳು ಕೋಲಾರದ ಅಂಬೇಡ್ಕರ್ ಪ್ರತಿಮೆ ಎದುರು ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಕೆ.ಎಚ್.ಮುನಿಯಪ್ಪ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಅಭಿಮಾನಿಗಳು ಹೇಳಿದರು. ಕಳೆದ ಕೆಲವು ದಿನಗಳಿಂದ ಕೇಂದ್ರ ಮಾಜಿ ಸಚಿವರೂ ಆಗಿರುವ ಕೆ.ಎಚ್.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರೊಂದಿಗೆ ಅಂತರವನ್ನು ಕಾಪಾಡಿಕೊಂಡಿರುವುದರಿಂದ ಮುನಿಯಪ್ಪ ಅಭಿಮಾನಿಗಳು ಸಿದ್ದರಾಮಯ್ಯಗೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅಭಿಮಾನಿಗಳು ಮಾಜಿ ಸಿಎಂಗೆ ಹೂವಿನ ಮಳೆಗೈದು,ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿ ಭವ್ಯ ಸ್ವಾಗತ ಕೋರಿದರು.ಕ್ಲಾಕ್ ಟವರ್ ಬಳಿಯಿರುವ ದರ್ಗಾಕ್ಕೆ ಹೋಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ 300 ಕೆಜಿ ತೂಕದ ಸೇಬಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ನಂಜೇಗೌಡ, ಎಂಎಲ್ ಸಿ ಗಳಾದ ನಸೀರ್ ಅಹಮದ್, ಅನಿಲ್ ಕುಮಾರ್ ಹಿರಿಯ ಮುಖಂಡ ಸದಾನಂದ ಸೇರಿದಂತೆ ದೊಡ್ದ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ದೂರ ಉಳಿದ ಕೆ.ಜಿ.ಎಫ್. ಶಾಸಕಿ ರೂಪ!
ರಾಜ್ಯ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರೂ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರನ್ನು ಸ್ವಾಗತಿಸಲು ದೂರ ಉಳಿದಿದ್ದ ಬಗ್ಗೆ ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರಂತೆ ಜಿಲ್ಲೆಯ ಶಾಸಕಿಯಾಗಿ ಶಾಸಕಾಂಗ ಪಕ್ಷದ ನಾಯಕರು ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಲು ನಾನು ಹೋಗದೆ ಇರುವುದು ನನಗೆ ಹೇಳಿಕೊಳ್ಳಲಾಗದ ಸಂಕಟ ಎಂದಿರುವ ಅವರು ಜಿಲ್ಲೆಯ ಹಿರಿಯ ನಾಯಕರು ಎಲ್ಲರನ್ನೂ ಕೂರಿಸಿ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕಿತ್ತು ಒಂದು ಕಡೆ ತಂದೆ, ಮತ್ತೊಂದು ಕಡೆ ಈ ಪರಿಸ್ಥಿತಿ ಇದೆ ಇಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇನೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ!