- ದೋಹಾ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನದ ಪದಕ
- ಬಿ.ಇ.ಎಂ.ಎಲ್. ನಿವೃತ್ತ ಉದ್ಯೋಗಿ ಸುಬ್ಬರಾಜು, ಗಾಯಿತ್ರಿ ದಂಪತಿ ಪುತ್ರಿ ಸಾಧನೆ
- ಅಬಕಾರಿ ಇಲಾಖೆ ಉಪ ಆಧಿಕ್ಷಕ ಹುದ್ದೆಯಲ್ಲಿ ಕಾರ್ಯನಿರ್ವಹಣೆ
ಶ್ರೀನಿವಾಸಪುರ:ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಮೂಲದ ಟಿ.ಎಸ್. ದಿವ್ಯಾ ಅವರು ಅಂತರರಾಷ್ಟ್ರೀಯ ಶೂಟಿಂಗ್ ಕ್ರೀಡಾಕ್ಷೇತ್ರದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಮೂಲಕ ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಅರಬ್ ದೇಶಗಳ ಕತಾರ್ನ ದೋಹಾದಲ್ಲಿ ನವೆಂಬರ್ 1ರಿಂದ 14ರವರೆಗೆ ನಡೆದ 2026 ರ ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತದ ತಂಡ ಚಿನ್ನದ ಪದಕ ಗೆದಿದ್ದಾರೆ. ಈ ತಂಡದಲ್ಲಿ ಭಾರತದ ಖ್ಯಾತ ಶೂಟಿಂಗ್ ಕ್ರೀಡಾಪಟುಗಳಾದ ಮನು ಭಾಕರ್, ಈಶಾ ಸಿಂಗ್ ಅವರೊಂದಿಗೆ ಟಿ.ಎಸ್. ದಿವ್ಯಾ ಕೂಡ ಸ್ಥಾನ ಪಡೆದು ಐತಿಹಾಸಿಕ ಸಾಧನೆಯಲ್ಲಿ ಪಾಲುದಾರರಾಗಿದ್ದಾರೆ.
ಭಾರತ ತಂಡ ಒಟ್ಟು 1,761 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದು, ದಿವ್ಯಾ ಅವರು 584 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ತಾಡಿಗೋಳ್ ಗ್ರಾಮದ ಕುಟುಂಬದ
ಟಿ.ಎಸ್. ದಿವ್ಯಾ ಅವರ ಪೂರ್ಣ ಹೆಸರು ತಾಡಿಗೋಳ್ ಸುಬ್ಬರಾಜು ದಿವ್ಯಾ (Divya Thadigol Subbaraju). 1995ರ ಆಗಸ್ಟ್ 14ರಂದು ಜನಿಸಿದ ಇವರು ಬೆಂಗಳೂರಿನಲ್ಲಿ ಬೆಳೆದಿದ್ದಾರೆ. ಇವರ ಕುಟುಂಬದ ಮೂಲ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮವಾಗಿದೆ. ದಿವ್ಯಾ ಅವರ ತಂದೆ ಸುಬ್ಬರಾಜು ಅವರು ಬಿ.ಇ.ಎಂ.ಎಲ್. (BEML) ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಗಾಯಿತ್ರಿ ಅವರು ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ-ತಾಯಿ ಸಹೋದರ ರಾಜವರ್ಧನ್ ಪ್ರೋತ್ಸಾಹ ಹಾಗೂ ಬೆಂಬಲದೊಂದಿಗೆ ಕ್ರೀಡಾಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದಿವ್ಯಾ, ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.
ಬ್ಯಾಸ್ಕೆಟ್ಬಾಲ್ನಿಂದ ಶೂಟಿಂಗ್ ಕ್ರೀಡೆಯತ್ತ
ಆರಂಭದಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ದಿವ್ಯಾ, ನಂತರ ಶೂಟಿಂಗ್ ಕ್ರೀಡೆಯತ್ತ ಆಕರ್ಷಿತರಾಗಿ, ಶೂಟಿಂಗ್ಗೆ ಅಗತ್ಯವಾದ ಏಕಾಗ್ರತೆ, ತಾಳ್ಮೆ, ಶಿಸ್ತು ಮತ್ತು ನಿರಂತರ ಅಭ್ಯಾಸವನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಕ್ರೀಡಾಕ್ಷೇತ್ರದಲ್ಲಿ ತಮ್ಮ ಪ್ರಯಾಣ ಆರಂಭಿಸಿದರು.
ಕೋಚ್ ಮಂಜುನಾಥ್ ಪಟಗಾರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ದಿವ್ಯಾ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕ್ರಮೇಣ ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರವೇಶಿಸಿದರು.
ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್
2022ರಲ್ಲಿ ನಡೆದ 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರ ಕ್ರೀಡಾ ಬದುಕಿನ ಪ್ರಮುಖ ಮೈಲಿಗಲ್ಲಾಯಿತು.
ಬಾಕು ವಿಶ್ವಕಪ್ನಲ್ಲಿ ಚಿನ್ನದ ಪದಕ
2023ರಲ್ಲಿ ಅಜರ್ಬೈಜಾನ್ನ ಬಾಕು ನಗರದಲ್ಲಿ ನಡೆದ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದರು.
ಈ ಸಾಧನೆಯ ಮೂಲಕ ಅಂತರರಾಷ್ಟ್ರೀಯ ಶೂಟಿಂಗ್ ಕ್ಷೇತ್ರದಲ್ಲಿ ಭಾರತದ ಪ್ರತಿಭಾವಂತ ಕ್ರೀಡಾಪಟುವಾಗಿ ಗುರುತಿಸಿಕೊಂಡರು.
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ
2023ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಸಾಧನೆ ಮಾಡುತ್ತಾ ಬಂದಿರುವ ದಿವ್ಯಾ, ಇದೀಗ ದೋಹಾ ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಚಿನ್ನದ ಪದಕ ಗೆದ್ದು ತಮ್ಮ ಕ್ರೀಡಾ ಪಯಣಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ಸೇರಿಸಿದ್ದಾರೆ.
ದೋಹಾದಲ್ಲಿ ಸ್ವರ್ಣ ಸಾಧನೆ
2026ರ ನವೆಂಬರ್ 9ರಂದು ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತ 1,761 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ದಕ್ಷಿಣ ಕೊರಿಯಾ 1,748 ಅಂಕಗಳೊಂದಿಗೆ ಬೆಳ್ಳಿ ಹಾಗೂ ವಿಯೆಟ್ನಾಂ 1,745 ಅಂಕಗಳೊಂದಿಗೆ ಕಂಚಿನ ಪದಕ ಸಾಧನೆ ಮಾಡಿದ್ದಾರೆ.


ಭಾರತದ ಪರ ಈಶಾ ಸಿಂಗ್ 590, ಮನು ಭಾಕರ್ 587 ಹಾಗೂ ಟಿ.ಎಸ್. ದಿವ್ಯಾ 584 ಅಂಕಗಳನ್ನು ಗಳಿಸಿದರು.
ಉಪಮುಖ್ಯಮಂತ್ರಿ ಅಬಿನಂಧನೆ
ದಿವ್ಯಾ ಟಿ.ಎಸ್. ಅವರನ್ನು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅಭಿನಂದಿಸಿದ್ದಾರೆ. ಪದಕ ಗೆದ್ದಾಕ್ಷಣ ಕ್ರೀಡಾಪಟುವಿನ ಪಯಣ ಮುಗಿಯುವುದಿಲ್ಲ, ಬದಲಾಗಿ ಅದು ಮುಂದಿನ ದೊಡ್ಡ ಗುರಿಗಳಿಗೆ ಮೆಟ್ಟಿಲಾಗಬೇಕು ಎಂದು ಶುಭಹಾರೈಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿಗೆ ಹೆಮ್ಮೆಯ ಸಂಗತಿ
ಕ್ರೀಡೆಯಲ್ಲಿ ಸಾಧನೆ ಮಾಡಲು ನಗರ-ಪಟ್ಟಣಗಳ ಹಿನ್ನೆಲೆಯೇ ಮುಖ್ಯವಲ್ಲ; ಪ್ರತಿಭೆ, ಶಿಸ್ತು, ನಿರಂತರ ಅಭ್ಯಾಸ ಮತ್ತು ಕುಟುಂಬದ ಪ್ರೋತ್ಸಾಹ ಇದ್ದರೆ ವಿಶ್ವಮಟ್ಟದಲ್ಲಿಯೂ ಸಾಧನೆ ಮಾಡಬಹುದು ಎಂಬುದಕ್ಕೆ ದಿವ್ಯಾ ಅವರ ಕ್ರೀಡಾ ಪಯಣ ಸಾಕ್ಷಿಯಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ
ಕ್ರೀಡಾಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ರಲ್ಲಿ ದಿವ್ಯಾ ಅವರಿಗೆ 68 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವಮಟ್ಟದಲ್ಲಿ ಚಿನ್ನದ ಪದಕ ಗೆದ್ದು ತಾಡಿಗೋಳ್ ಗ್ರಾಮದ ಹೆಸರನ್ನು ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಪರಿಚಯಿಸಿರುವ ಟಿ.ಎಸ್. ದಿವ್ಯಾ ಅವರ ಸಾಧನೆಗೆ ಶ್ರೀನಿವಾಸಪುರ ತಾಲ್ಲೂಕಿನ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸಹೋದರ ಸಹ ಕ್ರೀಡಾ ಪಟು
ಟಿ.ಎಸ್. ದಿವ್ಯಾ ಅವರ ಸಹೋದರ ರಾಜವರ್ಧನ್ ಸಹ ಕ್ರೀಡಾ ಪಟು ಎನ್ನುವುದು ಇನ್ನೊಂದು ವಿಶೇಷ ಆರಂಭದಲ್ಲಿ ಶೂಟಿಂಗ್ ಚಾಂಪಿಯನ್ ಶಿಪ್ನಲ್ಲಿ ತೊಡಗಿಸಿಕೊಂಡಿದ್ದರಾದರು ನಂತರದಲ್ಲಿ ಅವರು ಸಾಫ್ಟ್ ಟೆನ್ನಿಸಿ ಅಟರಾರರಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.



