ಶ್ರೀನಿವಾಸಪುರ: ಇಂದು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಅನೇಕ ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಅನೇಕ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ. ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಶಿಕ್ಷಣ, ಉದ್ಯೋಗ, ಆರೋಗ್ಯ, ಸುರಕ್ಷತೆ ಮತ್ತು ಗೌರವಯುತ ಜೀವನ ನಡೆಸಲು ಅನವು ಮಾಡಿಕೊಡುವುದೆ ಸ್ವಾತಂತ್ರ್ಯದ ಆಶಯವಾಗಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಬಾಲಕೀಯರ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಹಾಗೂ ಶಿಕ್ಷಣ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಯುವಕರು ಕೌಶಲ್ಯಯುತವಾದ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.ಕೋಟ್ಯಾಂತರ ರೂಪಾಯಿಗಳ ಕಾರ್ಯಕ್ರಮಗಳನ್ನು ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗಾಗಿ ಸುಮಾರು ಐವತ್ತು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಿವೇಶನ ರಹಿತ ಬಡ ಹಾಗೂ ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಪ್ರಮುಖವಾಗಿದೆ. ಸ್ವಂತ ಜಾಗ ಹೊಂದಿಲ್ಲದ ಬಡವರನ್ನು ಗುರುತಿಸಿ, ಅರ್ಹರಿಗೆ ಸರ್ಕಾರದ ನಿಯಮಾನುಸಾರ ಉಚಿತ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಅಗತ್ಯ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ತಾಲೂಕಿಗೆ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಕೈಗಾರಿಕೆಗಳು ಬಂದರೆ ತಾಲೂಕಿನಲ್ಲೇ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಇದರಿಂದ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆಯಾಗುತ್ತದೆ. ಯುವಕರು ತಮ್ಮ ಕುಟುಂಬದೊಂದಿಗೆ ತಾಲೂಕಿನಲ್ಲೇ ಉಳಿದು, ಉತ್ತಮ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಸಹಕಾರಿಯಾಗುತ್ತದೆ ಕೈಗಾರಿಕಾ ವಾತಾವರಣ ನಿರ್ಮಿಸಲು ಸರ್ಕಾರದೊಂದಿಗೆ ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.ಆರೋಗ್ಯ ಕ್ಷೇತ್ರದಲ್ಲಿಯೂ ತಾಲೂಕಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ, ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಕಲ್ಪಿಸಲು, ತಾಲೂಕಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ತಾಲೂಕಿನ ಜನರು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಧ್ವಜಾರೀಹಣ ನೇರವೇರಿಸಿದರು ತಾಲೂಕು ಪಂಚಾಯಿತಿ ಇವೊ ಡಾ.ಸರ್ವೇಶ್, ಪೋಲಿಸ್ ಇನ್ಸಪೇಕ್ಟರ್ ಶಂಕರಾಚಾರಿ,ಅಬಕಾರಿ ಇನ್ಸಪೇಕ್ಟರ್ ಪುಷ್ಪ , ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೈರೇಗೌಡ, ಬಿಇಒ ಲಕ್ಷ್ಮಯ್ಯ ಮುಂತಾದವರು ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಶಾಸಕ ವೆಂಕಟಶಿವಾರೆಡ್ಡಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ತಹಶೀಲ್ದಾರ್ ಹಾಗು ಮಹಿಳಾ ರಾಜಕಾರಣಿ ಗಾಯಿತ್ರಿ ಮುತ್ತಪ್ಪ ತಾಲೂಕು ಕಛೇರಿ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು



