ಚಿಂತಾಮಣಿ: ಚಿಂತಾಮಣಿ ತಾಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಪಲ್ಲಿ ಗ್ರಾಮದಲ್ಲಿ ನೂತನವಾಗಿ ಗ್ರಾಮದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಕುಟುಂಬದವರಿಂದ ನಿರ್ಮಿಸಲಾದ ಶ್ರೀ ರುಕ್ಮಿಣಿ ಸಮೇತ ಪಾಂಡುರಂಗ ವಿಠಲ ಮಂದಿರವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.
ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಕ್ಸೆನ ಪೂಜೆ, ಪುಣ್ಯಾಹವಾಚನ, ಕಲಶ ಪ್ರತಿಷ್ಠಾಪನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ವೇದಪಂಡಿತರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಪಾಂಡುರಂಗ ವಿಠಲನಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾದರು. ಗ್ರಾಮದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ ಗ್ರಾಮಗಳಲ್ಲಿ ಸ್ಥಳೀಯ ಕಲಾವಿದರು ವಿಠಲನನ್ನು ಆರಾಧಿಸಿ ನಡೆಸುವ ಪಂಡರಿ ಭಜನೆಯ ಸಂಸ್ಕೃತಿಯನ್ನು ಮುಂದಿನ ಪೀಲಿಗೆಗೂ ಉಳಿಸಿ ಬೆಳೆಸುವ ಸಲುವಾಗಿ ಪಾಂಡುರಂಗ ವಿಠಲ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು ಸರ್ವರೂ ಮುಕ್ತವಾಗಿ ಪಾಂಡು ರಂಗ ವಿಠಲನನ್ನು ಆರಾಧಿಸುವ ಮೂಲಕ ಧಾರ್ಮಿಕ ನಿಷ್ಠೆ ಮೆರೆಯಬಹುದಾಗಿದೆ ಎಂದರು.
ಗ್ರಾಮಸ್ಥರು, ಮಾತನಾಡಿ ಗ್ರಾಮದಲ್ಲಿ ಧಾರ್ಮಿಕ ಭಕ್ತಿ,ಅಷ್ಟೆ ಅಲ್ಲ ಗ್ರಾಮದ ಐಕ್ಯತೆ ಹಾಗೂ ಸೌಹಾರ್ದತೆಯ ಸಂಕೇತವಾಗಿ ಜನಪದ ಸಾಂಸ್ಕೃತಿಕ ಬೆಳವಣಿಗೆಗೆ ಮಂದಿರ ಮಹತ್ವದ ಕೊಡುಗೆಯಾಗಲಿದೆ ಇಲ್ಲಿ ಭಜನೆ, ಹರಿಕಥೆ, ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿದೆ ಎಂದರು. ಮಂದಿರ ನಿರ್ಮಾಣಕ್ಕೆ ಶ್ರಮಿಸಿದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಮತ್ತು ಅವರ ಕುಟುಂಬದವರ ಸೇವಾ ಮನೋಭಾವವನ್ನು ಗ್ರಾಮಸ್ಥರು ಶ್ಲಾಘಿಸಿದರು. ಧಾರ್ಮಿಕ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಲೋಕಾರ್ಪಣೆ ಸಮಾರಂಭದಲ್ಲಿ ಗ್ರಾಮದ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



