ಶ್ರೀನಿವಾಸಪುರ:ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಭಕ್ತಿಭಾವದಿಂದ ನಡೆದಿದ್ದು, ಸಾವಿರಾರು ಭಕ್ತರು ಸಂಭ್ರಮದಿಂದ ಭಾಗವಹಿಸಿದರು.
ಕಾರ್ತಿಕ ಮಾಸದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮ ಭಕ್ತಿಭಾವ,ಸಂಭ್ರಮ ಹಾಗೂ ವೈಭವದ ವಾತಾವರಣದಲ್ಲಿ ನೆರವೇರಿತು.ವಿಶೇಷವಾಗಿ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಗೋವಿಂದ ನಾಮಃ ಸ್ಮರಣೆಯೊಂದಿಗೆ ಮಹಿಳೆಯರು ಪುರುಷರು ದೀಪಗಳನ್ನು ಬೆಳಗಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬೆಳಕಿನಿಂದ ಕಂಗೊಳಿಸಿತು.ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಿತು ಪಟಾಕಿ ಬಾಣ ಬೀರಸುಗಳು ಪ್ರದರ್ಶನ ದೀಪಾವಳಿ ಸಂಭ್ರಮ ಆಕಾಶದಲ್ಲಿ ಬೆಳಕಿನಾಟದಂತೆ ಮೆರುಗು ತಂದಿತು. ಒಂದು ತಾಸು ನಡೆದ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ನೋಡುಗರನ್ನು ಮೈ ನವಿರೇಳಿಸುವಂತೆ ಇತ್ತು.


ದೇವರ ಪಲ್ಲಕ್ಕಿ ಭವ್ಯವಾಗಿತ್ತು
ದೀಪೋತ್ಸವಕ್ಕೂ ಮುನ್ನಾ ದೇವರ ಪಲ್ಲಕ್ಕಿ ಉತ್ಸವ ಭವ್ಯವಾಗಿ ಜರುಗಿತು.ದಾರಿ ಉದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ನೀಡಿ ಪೂಜೆ ಮಾಡಿಸಿದರು.ಭಕ್ತಿ ಮತ್ತು ಉತ್ಸಾಹದಿಂದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು ಡೊಳ್ಳು ಕುಣಿತ,ಗಾರುಡಿ ಗೊಂಬೆಗಳು, ಪೂಜೆ ತಮಟೆ, ಅಣ್ಣಮ್ಮನ ತಮಟೆ ಮತ್ತಿತರ ಕಲಾವಿದರ ತಂಡಗಳು ಉತ್ಸವದ ಸಂಭ್ರಮವನ್ನು ಹೆಚ್ಚಿಸಿತು,ವಿಶೇಷವಾಗಿ ಜನರನ್ನು ಆಕರ್ಷಿಸಿತು.



