ವೈಎಸ್ಆರ್ಸಿಪಿ ಸಂಸದ ಮಿಥುನ್ ರೆಡ್ಡಿ ಕಾರು ಸೇರಿದಂತೆ ಏಳು ಎಸ್ಯುವಿ ವಾಹನಗಳನ್ನು ಜಖಂಗೊಳಿಸಿದ ಟಿಡಿಪಿ ಕಾರ್ಯಕರ್ತರು ಸಾಲಾಗಿ ಫ್ಯಾಕ್ಷನ್ ಸಿನಿಮಾ ಶೈಲಿಯಲ್ಲಿ ನೆಲಕ್ಕೆ ಉರಳಿಸಿದ್ದಾರೆ,ಜಖಂಗೊಂಡ ವಾಹನಗಳಲ್ಲಿ ಕೆಲವು ಕರ್ನಾಟಕ ನೋಂದಣಿ ಸಂಖ್ಯೆಯನ್ನು ಹೊಂದಿದ್ದವು ಎಂದು ಹೇಳುತ್ತಾರೆ. ಪುಂಗನೂರು ಪಟ್ಟಣದಲ್ಲಿ ತೀವ್ರ ಉದ್ವಿಗ್ನತೆ ಏರ್ಪಟ್ಟಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.

ನ್ಯೂಸ್ ಡೆಸ್ಕ್ | ಕೋಲಾರ ಜಿಲ್ಲೆಯ ಗಡಿಯಂಚಿಕೊಂಡಿರುವ ಊರು, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರಿನಲ್ಲಿ ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಮೊದಲ ದಿನವೇ ಹಿಂಸಾಚಾರ ಭುಗಿಲೆದ್ದಿದೆ. ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪುಂಗನೂರು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ಪುಂಗನೂರು ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಮೊದಲ ದಿನವೇ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ನಾಮಪತ್ರ ಸಲ್ಲಿಸಲು ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಮುಖಂಡರು ಒಂದೇ ಸಮಯದಲ್ಲಿ ಹೋದಾಗ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಅದು ಘರ್ಷಣೆಗೆ ತಿರುಗಿದೆ.
ನಾಮಪತ್ರ ಸಲ್ಲಿಕೆ ಕೇಂದ್ರದ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎರಡೂ ಕಡೆಯ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ನಾಮಪತ್ರ ಸಲ್ಲಿಕೆ ಪ್ರದೇಶ ಯುದ್ಧಭೂಮಿಯಂತಾಗಿದೆ.
ಘರ್ಷಣೆಯಲ್ಲಿ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಸಂಸದನ ಕಾರಿಗೆ ಅಡ್ಡಿ ಜನರ ಮೇಲೆ ನುಗ್ಗಿದ ಕಾರು
ಸ್ಥಳೀಯ ಸಂಸದ ಹಾಗೂ ವೈಎಸ್ಆರ್ಸಿಪಿ ಶಾಸಕ, ಮಾಜಿ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರ ಪುತ್ರ ಮಿಥುನ್ ರೆಡ್ಡಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಗಮಿಸಿದಾಗ ಅವರ ಕಾರಿಗೆ ಟಿಡಿಪಿ ಕಾರ್ಯಕರ್ತರು ಅಡ್ಡ ನಿಂತು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿರೋಧದ ನಡುವೆಯೂ ಕಾರು ಮುಂದಕ್ಕೆ ಚಲಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಟಿಡಿಪಿ ಕಾರ್ಯಕರ್ತರು ಸಂಸದರ ವಾಹನ ಸೇರಿದಂತೆ ಅವರೊಂದಿಗೆ ಬಂದಿದ್ದ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿವೆ. ಕೆಲವು ವಾಹನಗಳನ್ನು ಸಾಲಾಗಿ ನೂಕಿ ಉರುಳಿಸಲಾಗಿದೆ ಎನ್ನಲಾಗಿದ್ದು, ದೃಶ್ಯಗಳು ಫ್ಯಾಕ್ಷನ್ ಸಿನಿಮಾಗಳಲ್ಲಿನ ಹೊಡೆದಾಟವನ್ನು ನೆನಪಿಸುವಂತಿದ್ದವು ಎಂದು ಸ್ಥಳೀಯರು ಹೇಳುತ್ತಾರೆ.
ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಧೀರಜ್ ಕೊನುಬಿಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿ ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದರು ಎಂದು ವರದಿಯಾಗಿದೆ. ಘರ್ಷಣೆಯಲ್ಲಿ ಒರ್ವ ಸಿಆರ್ಪಿಎಫ್ ಕಾನ್ಸ್ಟೆಬಲ್ ಗಾಯಗೊಂಡಿರುವುದಾಗಿ ಹೇಳುತ್ತಾರೆ.
ಪ್ರಸ್ತುತ, ಪುಂಗನೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಯಾವುದೇ ಕ್ಷಣದಲ್ಲಿ ಏನಾಗುತ್ತದೊ ಎಂದು ತಿಳಿಯದು ಎಂದು ಆತಂಕದಿಂದ ಹೇಳುತ್ತಾರೆ ಸ್ಥಳೀಯರು.



