- ಮದನಪಲ್ಲಿಯಲ್ಲಿ ಜಾಗತಿಕ ತೋಟಗಾರಿಕಾ ಕೇಂದ್ರಕ್ಕೆ ಶಿಲಾನ್ಯಾಸ
- ಅನಂತ್ ಅಂಬಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿ
- ಆಂಧ್ರದ ಮಗು ಎಂದು ಪರಿಗಣಿಸುವಂತೆ ಮನವಿ
ಮದನಪಲ್ಲೆ:ರಾಯಲಸೀಮಾ ಪ್ರದೇಶದಲ್ಲಿ ತೋಟಗಾರಿಕೆಯನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಮದನಪಲ್ಲಿಯಲ್ಲಿ 1 ಲಕ್ಷ ಕೋಟಿ ರೂ.ಗಳ ರಾಯಲಸೀಮೆ ಸಮಗ್ರ ತೋಟಗಾರಿಕಾ ಹಬ್ (Rayalaseema Integrated Horticulture Hub) ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಬೃಹತ್ ಯೋಜನೆಯ ಭಾಗವಾಗಿ, ರಿಲಯನ್ಸ್ ಸಹಯೋಗದೊಂದಿಗೆ ಭಾರತೀಯ ಕೃಷಿ ಶಾಲೆ(Indian School of Agriculture) ಯನ್ನು ಸಹ ಸ್ಥಾಪಿಸಲಾಗುವುದು. ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅನಂತ್ ಅಂಬಾನಿ, ತೆಲುಗಿನಲ್ಲಿ ಮಾತನಾಡುವ ಮೂಲಕ ಆಕರ್ಷಿಸಿದರು. ಅನಂತ್ ಅಂಬಾನಿ ತಮ್ಮ ಭಾಷಣವನ್ನು ನಮಸ್ಕಾರಂ ಎಂದು ತೆಲಗಲ್ಲಿ ಅರಂಭಿಸಿದರು. 25 ವರ್ಷಗಳ ಹಿಂದೆ ಹೈದರಾಬಾದ್ಗೆ ಐಎಸ್ಬಿ ISB ಯನ್ನು ತಂದ ಚಂದ್ರಬಾಬು, ಈಗ ರೈತರಿಗಾಗಿ ರಾಯಲಸೀಮೆಗೆ ಮತ್ತೊಂದು ಐಎಸ್ಬಿ ಯನ್ನು ತರುತ್ತಿದ್ದಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಆಂಧ್ರ ಭೂಮಿ ಸುವರ್ಣ ಭೂಮಿಯಾಗಿ ಬದಲಾಗುತ್ತಿದೆ ಎಂದು ಅವರು ಹೇಳಿದರು.
‘ಗೌರವಾನ್ವಿತ ಚಂದ್ರಬಾಬು ಗಾರು.. ನಾನು ಇಂದು ನಿಮ್ಮಲ್ಲಿ ಒಂದು ವಿನಂತಿಯನ್ನು ಮಾಡುತ್ತಿದ್ದೇನೆ. ನನ್ನನ್ನು ಆಂಧ್ರದ ಮಗ ಎಂದು ಪರಿಗಣಿಸಿ ಎಂದು ಕೈ ಜೋಡಿಸಿ ವಿನಂತಿಸಿದ ಅವರು .ನಿಮ್ಮ ರಾಜ್ಯಕ್ಕಾಗಿ ನಾನು ಏನು ಮಾಡಬಹುದು ಎಂದು ಅನಂತ್ ಅಂಬಾನಿ ಹೇಳಿದರು. ನನ್ನನ್ನು ಆಂಧ್ರದ ಮಗ ಎಂದು ಪರಿಗಣಿಸಿ ಎಂದು ತೆಲುಗಿನಲ್ಲಿ ಅನಂತ್ ಅಂಬಾನಿ ಮಾಡಿದ ಭಾಷಣ ಎಲ್ಲರನ್ನೂ ಆಕರ್ಷಿಸಿತು. ಅನಂತ್ ತೆಲುಗಿನಲ್ಲಿ ಮಾತನಾಡುತ್ತಿದ್ದಂತೆ, ವೇದಿಕೆಯಲ್ಲಿದ್ದ ಸಿಎಂ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಇತರ ನಾಯಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ವಿಕಾಸ್ ಭಾರತದ ಗುರಿಗಾಗಿ ದೇಶದ ಯುವಕರು ದೃಢಸಂಕಲ್ಪದಿಂದ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದು ಅವರು ಹೇಳಿದರು.
ಇಂದು ನಾವು ಕೇವಲ ಅಡಿಪಾಯ ಹಾಕುತ್ತಿಲ್ಲ. ಗ್ರಾಮೀಣ ಕೈಗಾರಿಕೆಗಳು, ಆರ್ಥಿಕವಾಗಿ ಸಬಲೀಕರಣಗೊಂಡ ಹಳ್ಳಿಗಳು, ಸುಸ್ಥಿರ ಭಾರತ ಮತ್ತು ನಮ್ಮ ಸಹೋದರ ಸಹೋದರಿಯರ ಭವಿಷ್ಯಕ್ಕಾಗಿ ನಾವು ಅಡಿಪಾಯ ಹಾಕುತ್ತಿದ್ದೇವೆ ಎಂದು ಅನಂತ್ ಅಂಬಾನಿ ಹೇಳಿದರು. ತಮ್ಮ ಭಾಷಣದಲ್ಲಿ ಅನಂತ್ ಅಂಬಾನಿ ಪ್ರಧಾನಿ ಮೋದಿ, ಸಿಎಂ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಹೊಗಳಿದರು.
ತಂತ್ರಜ್ಞಾನದ ಮೂಲಕ ರೈತರ ಆದಾಯವನ್ನು ಸುಧಾರಿಸುವುದು ಚಂದ್ರಬಾಬು ಅವರ ಆಶಯ. ಇದು ಭಾರತೀಯ ಕೃಷಿ ಶಾಲೆಯ ಪ್ರಮುಖ ಗುರಿಯಾಗಿದೆ ಎಂದು ಅನಂತ್ ಅಂಬಾನಿ ಹೇಳಿದರು. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಾರೆ ಎಂದು ಅನಂತ್ ಹೇಳಿದರು. ರಿಲಯನ್ಸ್ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಯೊಂದಿಗೆ ರಾಜ್ಯದಲ್ಲಿ ಸಂಕುಚಿತ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸುತ್ತಿದೆ ಎಂದು ಅನಂತ್ ಅಂಬಾನಿ ಹೇಳಿದರು. ರೈತರ ಆದಾಯವನ್ನು ಹೆಚ್ಚಿಸಲು ತಮ್ಮ ಅಜ್ಜ ಧೀರೂಭಾಯಿ ಅಂಬಾನಿ ಅವರ ಕನಸುಗಳನ್ನು ನನಸಾಗಿಸಲು ಭಾರತೀಯ ಕೃಷಿ ಶಾಲೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಅನಂತ್ ಅಂಬಾನಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಎಂ ಚಂದ್ರಬಾಬು ನಾಯ್ಡು, ‘ಅನಂತ್ ಅಂಬಾನಿ ಒಬ್ಬ ಕೈಗಾರಿಕೋದ್ಯಮಿ ಮಾತ್ರವಲ್ಲ, ಪರಿಸರವಾದಿಯೂ ಹೌದು. 2035 ರ ವೇಳೆಗೆ ರಿಲಯನ್ಸ್ ಅನ್ನು ನಿವ್ವಳ ಶೂನ್ಯ ಇಂಗಾಲದ ಕಂಪನಿಯನ್ನಾಗಿ ಮಾಡುವತ್ತ ಅವರು ಮುಂದುವರಿಯುತ್ತಿದ್ದಾರೆ. ತಿರುಮಲ ಶ್ರೀ ವೆಂಕಟೇಶ್ವರನ ಮೇಲಿನ ಪ್ರೀತಿಗಾಗಿ ಭಕ್ತಿಯಿಂದ ಅವರು ಉಚಿತವಾಗಿ ವಿದ್ಯುತ್ ಬಸ್ಗಳನ್ನು ಒದಗಿಸಿದ್ದಾರೆ ಎಂದರು. ಅನಂತ್ ಅಂಬಾನಿ ಪ್ರಾಣಿಗಳ ಸೇವೆ ಮಾಡುವ ವ್ಯಕ್ತಿ, ನಮ್ಮ ತೆಲುಗಿನ ಮುದ್ದಿನಮಗು ಎಂದು ಅವರು ಹೊಗಳಿದರು.
1919 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಮದನಪಲ್ಲಿಯ BT ಕಾಲೇಜ್ ಆವರಣದಲ್ಲಿ ಕೂತು ಬಂಗಾಳಿ ಭಾಷೆಯಿಂದ ರಾಷ್ಟ್ರಗೀತೆ ಜನ ಗಣ ಮನವನ್ನು ಇಂಗ್ಲಿಷ್ಗೆ ಅನುವಾದಿಸಿದ್ದನ್ನು ಅನಂತ್ ಅಂಬಾನಿ ನೆನಪಿಸಿಕೊಂಡರು.



