ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಡ್ರೋನ್ ಪರೀಕ್ಷಾ ಕೇಂದ್ರ (Drone Testing Hub) ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಯೋಜನೆಗೆ ರಾಜ್ಯ ಸರ್ಕಾರ ₹42.83 ಕೋಟಿ ನೆರವು ನೀಡಲಿದೆ. ಇದರಲ್ಲಿ ಸುಮಾರು ₹38.15 ಕೋಟಿ ಮೂಲಸೌಕರ್ಯ ನಿರ್ಮಾಣಕ್ಕೆ ಹಾಗೂ ಆರಂಭಿಕ ಮೂರು ವರ್ಷಗಳ ಕಾರ್ಯಾಚರಣೆಗೆ ₹4.68 ಕೋಟಿ ವೆಚ್ಚವಾಗಲಿದೆ ಎಂದು ಸರ್ಕಾರದ ಮಾಹಿತಿಯನ್ನು ಉಲ್ಲೇಖಿಸಿ ವರದಿಯಾಗಿದೆ.
ಏನೆಲ್ಲಾ ಸೌಲಭ್ಯ?
ಡ್ರೋನ್ಗಳ ಸುಧಾರಿತ ಪರೀಕ್ಷೆಗಾಗಿ ಕೇಂದ್ರದಲ್ಲಿ ವಿಶೇಷ ರನ್ವೇ, ಪ್ರತ್ಯೇಕಿತ ವಾಯುಪ್ರದೇಶ ಹಾಗೂ ಅಗತ್ಯ ಪರೀಕ್ಷಾ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ವಿಶೇಷವಾಗಿ BVLOS (Beyond Visual Line of Sight) ಅಂದರೆ ಡ್ರೋನ್ನ್ನು ನೇರವಾಗಿ ಕಣ್ಣಿಗೆ ಕಾಣದ ದೂರದಲ್ಲಿಯೂ ನಿಯಂತ್ರಿಸಿ ನಡೆಸುವ ಕಾರ್ಯಾಚರಣೆಗಳ ಪರೀಕ್ಷೆ, ಹಾರಾಟದ ಅವಧಿ, ಸುರಕ್ಷತೆ ಹಾಗೂ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ.
ಸ್ಟಾರ್ಟ್ಅಪ್ಗಳು, ಸಂಶೋಧಕರಿಗೆ ಅನುಕೂಲ
ಡ್ರೋನ್ ತಯಾರಿಕಾ ಕಂಪನಿಗಳು, ಸ್ಟಾರ್ಟ್ಅಪ್ಗಳು, ಸಂಶೋಧಕರು, ರಕ್ಷಣಾ ಕ್ಷೇತ್ರ ಹಾಗೂ ಇತರೆ ಕೈಗಾರಿಕೆಗಳಿಗೆ ತಮ್ಮ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡಲು ಈ ಕೇಂದ್ರ ನೆರವಾಗಲಿದೆ.
ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಡ್ರೋನ್ ತಂತ್ರಜ್ಞಾನವನ್ನು ನೈಜ ಹಾರಾಟ ಪರೀಕ್ಷೆಗೆ ಕೊಂಡೊಯ್ದು, ನಂತರ ವಾಣಿಜ್ಯ ಬಳಕೆಗೆ ಸಿದ್ಧಪಡಿಸುವ ಪ್ರಕ್ರಿಯೆಗೆ ಈ ಕೇಂದ್ರ ಮೂಲಸೌಕರ್ಯ ಒದಗಿಸುವ ನಿರೀಕ್ಷೆಯಿದೆ.

ಡ್ರೋನ್ ಫೆಡರೇಷನ್ ಆಫ್ ಇಂಡಿಯಾ ಅನುಷ್ಠಾನ ಪಾಲುದಾರ
ಯೋಜನೆಯ ಅನುಷ್ಠಾನದಲ್ಲಿ Drone Federation of India ಪಾಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಸರ್ಕಾರದ ಮಾಹಿತಿ ತಿಳಿಸಿದೆ.
ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಕೋಲಾರ–ಚಿಕ್ಕಬಳ್ಳಾಪುರ ಭಾಗದಲ್ಲಿ ಡ್ರೋನ್ ತಂತ್ರಜ್ಞಾನ, ಸಂಶೋಧನೆ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.photo just imagine for News.



