ನ್ಯೂಜ್ ಡೆಸ್ಕ್:ಪ್ರಸ್ತುತ ಭಾರತದಲ್ಲಿನ 12 ಪಿಎಸ್ಬಿಗಳನ್ನು ಮೆಗಾ ವಿಲೀನದ ಮೂಲಕ ನಾಲ್ಕು ಬ್ಯಾಂಕುಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬಗ್ಗೆ ಹೇಳಲಾಗುತ್ತಿದೆ. ಎಸ್ಬಿಐ ಸೇರಿದಂತೆ ಇನ್ನೂ 3 ದೊಡ್ಡ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಹೇಳುತ್ತಿವೆ.
ಕೇಂದ್ರವು ಸಾರ್ವಜನಿಕ ವಲಯದ ಬ್ಯಾಂಕುಗಳ ಮೆಗಾ ವಿಲೀನಕ್ಕೆ ಸಿದ್ಧತೆ ನಡೆಸುತ್ತಿದ್ದು ಈಗ್ಗೆ ಐದು ವರ್ಷಗಳ ಹಿಂದೆ ಇದ್ದ 27 ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು 12 ಕ್ಕೆ ಇಳಿಸಲಾಗಿತ್ತು.ಈಗ ಕೇಂದ್ರವು ಆ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸುವ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, 2026-27 ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ಮೆಗಾ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಮೆಗಾ ವಿಲೀನದ ನಂತರ, ದೇಶದಲ್ಲಿ ಕೇವಲ 4 ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಲಾಗಿದೆ.
ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ), ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ)ವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ (ಎಸ್ಬಿಐ) ದೈತ್ಯ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧವಾಗಿದೆ.
ರಾಷ್ಟ್ರೀಯ ಮಾಧ್ಯಮವೊಂದರಲ್ಲಿನ ಲೇಖನದಂತೆ ವಿಲೀನದ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಕೆನರಾ-ಯೂನಿಯನ್ ಬ್ಯಾಂಕ್ಗಳು ಮಾತ್ರ ಇರುತ್ತದೆ ಹೇಳಲಾಗುತ್ತಿದೆ.
ನೀತಿ ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಬ್ಯಾಂಕ್ ವಿಲೀನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಎಸ್ಬಿಐ, ಪಿಎನ್ಬಿ, ಬಿಒಬಿ ಮತ್ತು ಕೆನರಾ ಬ್ಯಾಂಕ್ನಂತಹ ಕೆಲವೇ ಕೆಲವು ದೊಡ್ಡ ಸರ್ಕಾರಿ ಬ್ಯಾಂಕ್ಗಳನ್ನು ಮಾತ್ರ ಉಳಿಸಿಕೊಂಡು, ಉಳಿದ ಸಣ್ಣ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಅಥವಾ ವಿಲೀನಗೊಳಿಸಲು ನೀತಿ ಆಯೋಗ ಈ ಹಿಂದೆ ಶಿಫಾರಸು ಮಾಡಿತ್ತು.
ಖಾಸಗಿ ಬ್ಯಾಂಕ್ಗಳು ಮತ್ತು ಫಿನ್ಟೆಕ್ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸಲು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವುದು ಮುಂತಾದ ವಿಷಯಗಳ ಕುರಿತು ಕೇಂದ್ರವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತಿದೆ. ಮೊದಲು ಸಣ್ಣ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವುದು ಮತ್ತು ನಂತರ ಅವುಗಳನ್ನು ದೇಶೀಯ ಬೆಳವಣಿಗೆಯ ಅಗತ್ಯಗಳಿಗೆ ಸೂಕ್ತವಾದ ಬ್ಯಾಂಕುಗಳಾಗಿ ಪರಿವರ್ತಿಸುವುದು ಈ ಯೋಜನೆಯ ಭಾಗವಾಗಿದೆ ಎಂದು ತೋರುತ್ತದೆ.
ಬ್ಯಾಂಕ್ ವಿಲೀನ ಯೋಜನೆ ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿದ್ದು ಹಣಕಾಸು ಸಚಿವಾಲಯ ಅದನ್ನು ಅನುಮೋದಿಸಿದರೆ, ಈ ವಿಲೀನ ಪ್ರಸ್ತಾವನೆಯ ಕುರಿತ ಅಧಿಕೃತ ಚರ್ಚೆಯ ದಾಖಲೆಯನ್ನು (ರೆಕಾರ್ಡ್ ಆಫ್ ಡಿಸ್ಕಷನ್) ಮೊದಲು ಸಂಪುಟ ಸಭೆಯಲ್ಲಿ ಚರ್ಚಿಸಿ, ನಂತರ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಪರಿಶೀಲನೆಗೆ ಕಳುಹಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಬ್ಯಾಂಕ್ಗಳ ಅಭಿಪ್ರಾಯವನ್ನು ಪಡೆದು, ಆಂತರಿಕವಾಗಿ ಒಮ್ಮತ ಮೂಡಿದ ನಂತರವೇ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಭಾರತಕ್ಕೆ ವಿಶ್ವ ದರ್ಜೆಯ ಬ್ಯಾಂಕ್ಗಳು ಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.



