ಮಾಲೂರು:ಪೋಷಕರು ಮದುವೆ ವಿರೋಧಿಸಿದಕ್ಕೆ ಅಪ್ರಾಪ್ತ ಪ್ರೇಮಿಗಳು ಚಲಿಸುವ ರೈಲಿಗೆ ತಲೆಕೊಟ್ಟು ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಾಲೂರು ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಶೆಟ್ಟಹಳ್ಳಿ ನಿವಾಸಿ ಸತೀಶ್ (18) ಹಾಗೂ ಪಣಮಾಕನಹಳ್ಳಿ ಶ್ವೇತ (17) ಆತ್ಮಹತ್ಯೆಗೆ ಶರಣಾಗುವ ಮೂಲಕ ಬಾಳಿ ಬೆಳಗಬೇಕಾಗಿದ್ದ ತಮ್ಮ ಬದುಕನ್ನು ಅಂತ್ಯವಾಗಿಸಿಕೊಂಡಿದ್ದಾರೆ.
ಮೃತ ಸತೀಶ್ ಐಟಿಐ ವ್ಯಾಸಂಗ ಮಾಡಿದ್ದು, ಶ್ವೇತಾ ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿ ತಮ್ಮ ಪ್ರೀತಿಯನ್ನು ಪೋಷಕರ ಬಳಿ ಹೇಳಿಕೊಂಡಿದ್ದು ಇಬ್ಬರ ಜಾತಿ ಬೇರೆ ಬೇರೆಯಾದ್ದರಿಂದ ಇವರ ಪೋಷಕರು ಮದುವೆಗೆ ವಿರೋಧಮಾಡಿದ್ದಾರೆ ಎನ್ನುತ್ತಾರೆ.
ನಿನ್ನೆಯಷ್ಟೆ ಸತೀಶ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.ಇಂದು ಬೆಳಗ್ಗೆ ಎಂದಿನಂತೆ ಬೆಳಿಗ್ಗೆ ಎದ್ದು ತನ್ನ ತಾಯಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ ನಂತರ ತನ್ನ ಬೈಕ್ನಲ್ಲಿ ತನ್ನ ಲವರ್ ಶ್ವೇತಾಳನ್ನು ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಹೋಗಿ ಬಳಿ ಬೈಕ್ ನಿಲ್ಲಿಸಿದ ಸತೀಶ್ ತನ್ನ ಪ್ರೇಮಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯಿದು ಆಕೆಯನ್ನು ತಬ್ಬಿಕೊಂಡು ಬೆಂಗಳೂರಿಗೆ ಹೊಗುತ್ತಿದ್ದ ರೈಲು ಬರುವುದನ್ನೇ ಕಾದು ನಿಂತು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.ಶ್ವೇತಳ ಶವ ಘಟನೆ ನಡೆದ ಸ್ಥಳದಿಂದ ಸುಮಾರು 50 ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದ್ದರೆ, ಸತೀಶ್ ದೇಹ ಅಲ್ಲೇ ತುಂಡು ತುಂಡಾಗಿ ಬಿದ್ದಿತ್ತು.

ಮಾಹಿತಿ ಸಿಕ್ಕ ಕೂಡಲೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ,ಪೋಷಕರುಗಳಿಗೆ ಮಾಹಿತಿ ನೀಡಿದ್ದು ಈ ಬಗ್ಗೆ ಕಂಟೋನೆಂಟ್ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದಾಗಿರುತ್ತದೆ.



