ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಹೊರವಲಯದ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡು ನಂಬಿಹಳ್ಳಿ ರಸ್ತೆಯಲ್ಲಿರುವ ಉನಿಕಿಲಿ ಗ್ರಾಮದ ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ಶಿಲಾಮಯ ಕಟ್ಟಡವಾಗಿ ಜೀರ್ಣೋದ್ಧಾರ ಮಾಡಲಾಗಿದ್ದು ದೇವಾಲಯದ ಸ್ಥಿರಬಿಂಬ ಪ್ರತಿಷ್ಠಾಪನಾ ಮತ್ತು ಕುಂಭಾಭಿಷೇಕ ಮಹೋತ್ಸವದ ಎರಡು ದಿನಗಳ ಕಾಲ ಮಹಾಗಣಪತಿ ಹೋಮ,ನವಗ್ರಹ ಹೋಮ, ಮೃತ್ಯುಂಜಯ ಹೋಮ,
ಕುಂಬಾಭಿಷೇಖ, ವಿಮಾನಗೋಪುರ, ಧ್ವಜಸ್ಥಂಭ, ಪೂಜಾ ಕಾರ್ಯಕ್ರಮಗಳೊಂದಿಗೆ ದೇವಾಲಯವನ್ನು ಲೋಕಾರ್ಪಾಣೆ ಮಾಡಲಾಯಿತು.
ಹೊಯಿಸಳರ ಕಾಲಾವಧಿಯದು ಎಂದು ಅಂದಾಜಿಸಿರುವ ಶ್ರೀ ನಿಳಾ-ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ(ಚನ್ನಕೇಶವ ದೇವರು) ದೇವಾಲಯವನ್ನು ಹದಿನೇಂಟು ಕಂಬಗಳ ಶಿಲಾಮಯವಾದ ಭವ್ಯ ದೇವಾಲಯವಾಗಿ ನಿರ್ಮಿಸಲಾಗಿದೆ.ಶಿಥಿಲವಾಗಿದ್ದ ದೇಗುಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿ ಬಿಳಚಿಕೊಂಡಿದ್ದ ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿಯವರ ಮೂಲ ವಿಗ್ರಹಗಳನ್ನು ಸಂರಕ್ಷಿಸಿ ಅವುಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.
ದೇವಾಲಯ ಜೀರ್ಣೋದ್ಧಾರ ಕಾರ್ಯದಲ್ಲಿ ಇವೊ ಆನಂದ್
ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮೂಲ ಕಾರಣಕರ್ತರು ಹಾಗು ಸ್ವಚ್ಚತೆಯಿಂದ ಹಿಡಿದು ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಉನಿಕಿಲಿ ಮೂಲದವರಾಗಿ ಚಿಂತಾಮಣಿ ತಾಲೂಕು ಪಂಚಾಯಿತಿ ಕಾರ್ಯವಿರ್ವಹಣಾಧಿಕಾರಿ ಆಗಿರುವ ಆನಂದ್ ಮಾತನಾಡಿ ನೂತನವಾಗಿ ನೂರು ದೇವಾಲಯಗಳನ್ನು ಕಟ್ಟುವ ಬದಲು ಒಂದು ಹಳೆಯ ದೇವಾಲಯ ಜೀರ್ಣೋದ್ಧಾರ ಮಾಡುವುದು ಮಹತ್ತರವಾದ ಪುಣ್ಯದ ಕೆಲಸ ಎಂದು ಹೇಳಿದರು.ದೇವಸ್ಥಾನಗಳು ಶ್ರದ್ಧೆ ಭಕ್ತಿಗಳ ಪ್ರತೀಕವಾಗಿದ್ದು,ಎಲ್ಲಾ ಕಡೆಯೂ ದೇವರಿದ್ದಾನೆ. ಆದರೆ, ಅದರ ಅನುಭವ ಪಡೆಯುವ ಕಾರ್ಯ ನಮ್ಮಿಂದಾಗಬೇಕು ಎಂದು ಕಣ್ಣಲ್ಲಿ ಆನಂದ ಬಾಷ್ಪ ತುಂಬಿಕೊಂಡು ನುಡಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಉನಿಕಿಲಿ ಗ್ರಾಮದ ಸಮಸ್ತ ಜನತೆ ಸಂಪೂರ್ಣ ಸಹಕಾರ ನೀಡಿದ್ದರೆ ಸುಬ್ಬಿರೆಡ್ಡಿ ಕುಟುಂಬ ಜಮೀನು ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ ಎಂದು ಹೇಳಿದರು.
ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇಣುಗೋಪಾಲ್ ತಂಡ ನೇರವೇರಿಸಿದರು.
ಕಾರ್ಯಕ್ರಮಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಸ್ಪೀಕರ್ ರಮೇಶ್ಕುಮಾರ್, ಚಿಂತಾಮಣಿ ಬಿಇಓ ಉಮಾದೇವಿ,ಚಿಂತಾಮಣಿ ನಗರಸಭೆ ಕಮೀಷನರ್ ಚಲಪತಿ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ,ಪಿ.ಎಲ್.ಡಿ ಅಧ್ಯಕ್ಷ ದಿಂಬಾಲಅಶೋಕ್, ಕೋಮುಲ್ ನಿರ್ದೆಶಕ ಕೆ.ಕೆ.ಮಂಜುನಾಥ್, ಶಿಕ್ಷಕ ಉನಿಕಿಲಿ ನಾಗರಾಜ್,ನಿವೃತ್ತ ಉಪನ್ಯಾಸಕ ರಾಮಕೃಷ್ಣಪ್ಪ,ಪೂಜಪ್ಪ,ನರಸಿಂಹಪ್ಪ,ಮುಂತಾದವರು ಆಗಮಿಸಿ ದೇವರ ದರ್ಶನ ಪಡೆದರು.
ಉನಿಕಿಲಿ ಗ್ರಾಮದ ಮಹತ್ವ
ಉನಿಕಿಲಿ ಗ್ರಾಮ ಶ್ರೀನಿವಾಸಪುರ ಪಟ್ಟಣಕ್ಕೆ ಮೂಲಗ್ರಾಮ ಈ ಗ್ರಾಮದಲ್ಲಿ ದಶಕಗಳ ಹಿಂದೆ ಆರ್ಥಿಕವಾಗಿ ಅನಕೂಲವಂತರು ನೆಲೆಸಿದ್ದರು ಎನ್ನಲಾಗಿದ್ದು.ಶ್ರೀನಿವಾಸಪುರ ಪಟ್ಟಣಕ್ಕೆ ಶ್ರೀನಿವಾಸಪುರ ಎಂದು ನಾಮಕರಣವಾಗುವ ಮೊದಲು ಶ್ರೀನಿವಾಸಪುರವನ್ನು ಪಾಪನಪಲ್ಲಿ ಎನ್ನಲಾಗುತಿದ್ದು ಅದನ್ನು ಗುರುತಿಸಲು ಉನಿಕಿಲಿ ಪಾಪನಪಲ್ಲಿ ಎಂದು ಹೇಳುತಿದ್ದ ಕಾಲ ಇತ್ತು ಎಂದು ಪೂರ್ವಿಕರು ಹೇಳುತ್ತಾರೆ.ಇದಕ್ಕೆ ಪುರಾವೆಯಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ಉನಿಕಿಲಿ ಸಮೀಪ ರೈಲು ನಿಲ್ದಾಣ ನಿರ್ಮಾಣವಾಯಿತು ಎನ್ನುವ ಮಾತಿದೆ.ಜೊತೆಗೆ ಉನಿಕಿಲಿ ಸುತ್ತ-ಮುತ್ತ ಏಳೂರಿಗೆ ಪ್ರಮುಖ ಗ್ರಾಮವಾಗಿದ್ದು ಏಳೂರುಗಳು ಈಗ ಪಾಪನಪಲ್ಲಿ ಶ್ರೀನಿವಾಸಪುರ ಆದರೆ,ಮಜರಾ ಗ್ರಾಮಗಳಾಗಿವೆ ಭೂನತ್ತ, ಗಂಗನಪಲ್ಲಿ,ಬೋಯಿನಾಚಪಲ್ಲಿ,ಇನ್ನೂ ಹಲವು ಗ್ರಾಮಗಳು ಇವೆ ಎನ್ನುತ್ತಾರೆ. ನಂತರದ ಬೆಳವಣಿಗೆಯಲ್ಲಿ ಅಂದಾಜು 1800 ಇಸವಿ ಅಂತ್ಯದಲ್ಲಿ ಮೈಸೂರು ಸಂಸ್ಥಾನದ ಮಹರಾಜರ ಆಳ್ವಿಕೆ ಕಾಲಾವಧಿಯಲ್ಲಿ ದಿವಾನ ಪೂರ್ಣಯ್ಯನವರು ಶ್ರೀನಿವಾಸಪುರದ ರೈಲ್ವೆ ಇಲಾಖೆ ಪ್ರವಾಸಿ ಮಂದಿರ ಮುಸಾಫೀರ್ ಖಾನೆ ತಂಗಿದ್ದ ಸಂದರ್ಭದಲ್ಲಿ ಪಾಪನಪಲ್ಲಿಗೆ ಶ್ರೀನಿವಾಸಪುರ ಎಂದು ನಾಮಕರಣ ಮಾಡಿ ಆಡಳಿತಾತ್ಮಕ ಕೇಂದ್ರವಾಗಿ ಗುರುತಿಸಿದ ನಂತರ ಉನಿಕಿಲಿ ಗ್ರಾಮ ನೆಪತ್ತ್ಯಕೆ ಸರಿಯಿತು ಎನ್ನುತ್ತಾರೆ.







