ನ್ಯೂಜ್ ಡೆಸ್ಕ್: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮೊನ್ನೆ ಭಾನುವಾರ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಬಳಿಕ ಮದ್ದೂರು ಪ್ರಕ್ಷುಬ್ದ ಸ್ಥಿತಿ ತಲುಪಿ ಬೂದಿ ಮುಚ್ಚಿದ ಕೆಂಡದಂತಿತ್ತು ಇದಕ್ಕಾಗಿ ಮದ್ದೂರಿನಲ್ಲಿ ಹಿಂದೂಪರ ಸಂಘಟನೆಗಳು ಬುಧವಾರ ಇಂದು ಅದ್ಧೂರಿಯಾಗಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಜನಸಾರದ ನಡುವೆ ನಡೆಯಿತು.
ಮದ್ದೂರು ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ್ದ ಸುಮಾರು ಹತ್ತು ಗಣಪತಿ ಮೂರ್ತಿಗಳನ್ನು ಮತ್ತು ತಾಲೂಕಿನ ವಿವಿಧ ಗ್ರಾಮಗಳ 18ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಮದ್ದೂರು ಪಟ್ಟಣದಲ್ಲಿ ಅಬ್ಬರ ಮತ್ತು ಆಡಂಬರದೊಂದಿಗೆ ಒಟ್ಟು 28 ಗಣಪತಿ ಮೂರ್ತಿಗಳ ವಿಸರ್ಜನ ಮೆರವಣಿಗೆಯನ್ನು ಬಿಗಿ ಪೋಲಿಸ್ ಭದ್ರತೆ ನಡುವೆ ಮಾಡಲಾಯಿತು ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ಶಕ್ತಿ ಪ್ರದರ್ಶನದಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದ ಯುವಕ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಮದ್ದೂರು ಪಟ್ಟಣದ ಕಾಶಿ ವಿಶ್ವನಾಥ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹೊಳೆಬೀದಿ,ಪೇಟೆ ಬೀದಿ, ಟಿಬಿ ಸರ್ಕಲ್, ಹಳೆ ಬೆಂಗಳೂರು-ಮೈಸೂರು ರಸ್ತೆ ಸೇರಿದಂತೆ ಸುಮಾರು ಮೂರು ಕಿಲೋ ಮೀಟರ್ ದೂರ ಸಂಚರಿಸಿ ಕೊಲ್ಲಿ ಸರ್ಕಲ್ ಮೂಲಕ ಶಿಂಷಾ ನದಿ ಹತ್ತಿರ ಕೂಡಿ ಶಿಂಷಾನದಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಬಡಾ ಬಡಾ ರಾಜಕಾರಣಿಗಳು
ಮದ್ದೂರು ಪಟ್ಟಣದಲ್ಲಿ ನಡೆದ ಅದ್ದೂರಿ ಗಣಪತಿ ವಿಸರ್ಜನೆ ಮೆರೆವಣಿಗೆಯನ್ನು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮುಖಂಡರು ಪ್ರತಿಷ್ಟಾತ್ಮಕವಾಗಿ ತಗೆದುಕೊಂಡಿದ್ದಲ್ಲದೆ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇವರೊಂದಿಗೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಹ ಭಾಗವಹಿಸಿದ್ದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಶಾಸಕ ಚನ್ನಬಸಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಡಾ.ಅಶ್ವತ್ಥ ನಾರಾಯಣ, ನಟಿ ಸುಮಲತಾ ಅಂಬರೀಶ್, ಮಾಜಿ ಶಾಸಕರಾದ ಪ್ರೀತಂಗೌಡ, ಜೆಡಿಎಸ್ ಮಾಜಿ ಶಾಸಕರಾದ ಪುಟ್ಟರಾಜು,ಸುರೇಶ್ಗೌಡ, ತಮಣ್ಣ ಸೇರಿದಂತೆ ಎರಡೂ ಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.

ಪೋಲೀಸ್ ಕಣ್ಗಾವಲು
ಮುನ್ನೆಚ್ಚರಿಕೆ ಕ್ರಮವಾಗಿ ಮದ್ದೂರು ಪಟ್ಟಣದಲ್ಲಿ ಮತ್ತು ಮೆರವಣಿಗೆ ಮಾರ್ಗದುದ್ದಕ್ಕೂ 2,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಉಪ ಪೊಲೀಸ್ ಮಹಾನಿರ್ದೇಶಕ ಬೋರಲಿಂಗಯ್ಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮೇಲ್ವಿಚಾರಣೆಯಲ್ಲಿ ಪೋಲೀಸ್ ಬಂದೋಬಸ್ತ್ ನಡೆಯಿತು.



