ಮಾಲೂರು:ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ ಭಾಗದ ಬೈರನದೊಡ್ಡಿ ಗ್ರಾಮದ ಅಯೋಧ್ಯೆನಗರದ ಆರ್ಯವೈಶ್ಯ ನಾಮಧಾರಿ ನಗರ್ತರ ಸಮುದಾಯದವರು ನಿರ್ಮಿಸಿರುವ ಶ್ರೀ ನಗರೇಶ್ವರ ನೂತನ ಶಿಲಾ ದೇವಾಲಯ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಮತ್ತು ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಯಾಯಿತು.
ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದ ಶಿಲಾ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದಂತ ಧಾರ್ಮಿಕ ಕಾರ್ಯಕ್ರಮಗಳನ್ನು ಬಂಗಾರಪೇಟೆಯ ಶ್ರೀನಿವಾಸಶಾಸ್ತ್ರಿ ತಂಡ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಗ್ರಾಮಸ್ಥರು ಮನೆಯ ಹಬ್ಬದಂತೆ ಸಂಪೂರ್ಣವಾಗಿ ದೇವಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


ದೇವಾಲಯವನ್ನು ಕುಪ್ಪಂನ ಆಗಮಶಾಸ್ತ್ರದ ನುರಿತ ಶಿಲ್ಪಿ ಚಂದ್ರಶೇಖರ್ ತಂಡದ ಶಿಲ್ಪಕಾರರು ನಿರ್ಮಾಣ ಮಾಡಿದ್ದು,ಗರ್ಭಗುಡಿಯಲ್ಲಿ ಆಗಮಶಾಸ್ತ್ರದಂತೆ ಶ್ರೀ ನಗರೇಶ್ವರ ದೇವರ ಸುಮಾರು ಐದು ಅಡಿ ಎತ್ತರದ ಬೃಹತ್ ಗಾತ್ರದ ಕೃಷ್ಣ ಶಿಲೆಯ ಶಿವಲಿಂಗವನ್ನು ಶಿವಾರಪಟ್ಟಣದ ಶಿಲ್ಪಿ ಮಂಜುನಾಥ ಆಚಾರ್ಯ ಕೈಯಲ್ಲಿ ಕೆತ್ತಿಸಲಾಗಿದೆ. ದೇವಾಲಯ ಮುಂಭಾಗದಲ್ಲಿ ಧ್ವಜ ಸ್ತಂಭವನ್ನು ಸ್ಥಾಪಿಸಿದ್ದು ಗರ್ಭಾಲಯದ ಆವರಣದಲ್ಲಿ ಪ್ರಸನ್ನ ಗಣಪತಿ ಹಾಗು ಶ್ರೀ ಪಾರ್ವತಾಂಭ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ದೇವಾಲಯದ ಒಳಾವರಣ ಹಾಗೂ ಹೊರಗೆ ಆಕರ್ಷಕವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ಕೆ ಬಂದಂತಹ ಭಕ್ತರಿಗೆ ಬರ್ಜರಿ ಸಾತ್ವಿಕ ಊಟ ಆಯೋಜಿಸಲಾಗಿತ್ತು.
ಅಯೋಧ್ಯೆನಗರದ ಆರ್ಯವೈಶ್ಯ ನಾಮಧಾರಿ ನಗರ್ತರ ಶ್ರೀ ನಗರೇಶ್ವರ ದೇವಸ್ಥಾನ ಸಮಿಯ ಅಧ್ಯಕ್ಷರಾದ ಅಶ್ವಥಪ್ಪ, ಕಾರ್ಯದರ್ಶಿ ಬಾಲರಾಜಶೆಟ್ಟಿ, ದಶರಥರಾಮಶೆಟ್ಟಿ,ಮುನಿರಾಜು, ರಮೇಶ್,ರಾಜಯ್ಯಶೆಟ್ಟಿ ಸೇರಿದಂತೆ ಗ್ರಾಮದ ಹಾಗು ಬೂದಿಕೋಟೆ ನೆಲ್ಲಹಳ್ಳಿ,ಟೇಕಲ್, ಕೃಷ್ಣಗಿರಿ, ನಾಚಿಕೊಪ್ಪಂ, ಹೊಸೂರು, ಬಾಗಲೂರು,ಬೇರಿಕೆ ನಲ್ಲಾಂಡ್ರಹಳ್ಳಿ ಗ್ರಾಮಗಳ ಯುವಕರು ದೊಡ್ಡಮಟ್ಟದಲ್ಲಿ ಸ್ವಯಂ ಸೇವಕರಾಗಿ ಸೌಹಾರ್ದತೆಯಿಂದ ಭಾಗವಹಿಸಿದ್ದರು.
ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಲೂರು ಶಾಸಕ ನಂಜೇಗೌಡ,ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಹೂಡಿವಿಜಯಕುಮಾರ್, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮಮುನಿಸ್ವಾಮಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಟೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಮುಂತಾದವರು ಭಾಗವಹಿಸಿದ್ದರು.